ಜಕಾರ್ತಾ (ಮಲೇಶ್ಯ): ಇಲ್ಲಿ ಮಂಗಳವಾರ ನಡೆದ ಏಷ್ಯಾ ಕಪ್ ಹಾಕಿ ಕೂಟದಲ್ಲಿ ಭಾರತೀಯ ತಂಡವು ದಕ್ಷಿಣ ಕೊರಿಯ ತಂಡದೆದುರು 4-4 ಗೋಲುಗಳಿಂದ ರೋಚಕ ಡ್ರಾ ಸಾಧಿಸಿತು. ಇದರಿಂದ ಭಾರತವು ದುರದೃಷ್ಟವಶಾತ್ ಫೈನಲ್‌ಗೇರಲು ವಿಫಲವಾಯಿತು.
ಈ ಮೊದಲು ನಡೆದಿದ್ದ ಸೂಪರ್-4 ಘಟ್ಟದ ಇನ್ನೊಂದು ಪಂದ್ಯದಲ್ಲಿ ಮಲೇಶ್ಯ ತಂಡ 5-0 ಗೋಲುಗಳಿಂದ ಜಪಾನ್ ಎದುರು ಗೆಲುವು ಸಾಧಿಸಿತ್ತು. ಇದರ ಪರಿಣಾಮ ಭಾರತವು ದಕ್ಷಿಣ ಕೊರಿಯ ಎದುರು ಸ್ಪಷ್ಟ ಗೆಲುವು ಸಾಧಿಸಲೇಬೇಕಿತ್ತು.
ಡ್ರಾ ಸಾಧಿಸಿದ್ದರಿಂದ ಹೆಚ್ಚಿನ ಗೋಲುಗಳ ಲೆಕ್ಕಾಚಾರದಲ್ಲಿ ದಕ್ಷಿಣ ಕೊರಿಯ ಫೈನಲಿಗೇರಿತು. ಬುಧವಾರ ದಕ್ಷಿಣ ಕೊರಿಯ-ಮಲೇಶ್ಯ ನಡುವೆ ಏಷ್ಯಾಕಪ್ ಕೂಟದ ಫೈನಲ್ ಪಂದ್ಯ ನಡೆಯಲಿದೆ.
ಭಾರತೀಯ ತಂಡ ಮಲೇಶ್ಯ ಮತ್ತು ದಕ್ಷಿಣ ಕೊರಿಯ ಜತೆ ತಲಾ 5 ಅಂಕಗಳಿಂದ ಸಮಬಲ ಸಾಧಿಸಿತು. ಮಲೇಶ್ಯ ಗೋಲು ಗಳಿಕೆಯಲ್ಲಿ ಮುಂದಿದ್ದರಿಂದ ಅದು ಫೈನಲ್‌ಗೇರುವುದು ಖಚಿತವಾಗಿತ್ತು. ಹಾಗಾಗಿ ಫೈನಲಿಗೇರಲು ದಕ್ಷಿಣ ಕೊರಿಯ-ಭಾರತದ ನಡುವೆ ಸ್ಪರ್ಧೆ ಉಂಟಾಯಿತು. ಇಲ್ಲಿ ಕೊರಿಯ ಯಶಸ್ವಿಯಾಯಿತು. ಒಂದು ವೇಳೆ ಭಾರತ ಗೆದ್ದು ಫೈನಲ್‌ಗೇರಿದ್ದರೆ ದ.ಕೊರಿಯ ಹೊರಬೀಳುತಿತ್ತು.
ಭಾರತದ ಪರ ಕರ್ನಾಟಕದ ಮಹೇಶ್ ಗೌಡ (22 ನಿ.), ನೀಲಂ ಸಂಜೀಪ್ (9 ನಿ.), ದಿಪ್ಸನ್ ಟಿರ್ಕೆ (21 ನಿ.), ಶಕ್ತಿವೇಲ್ ಮಾರೀಶ್ವರನ್ (37 ನಿ.) ಗೋಲು ಬಾರಿಸಿದರು.