ಬೆಂಗಳೂರು/ ಕೆ.ಆರ್.ಪುರಂ: ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ಠಾಣೆಗೆ ಕರೆತಂದಿದ್ದ ಆರೋಪಿಗಳಿಗೆ ನೋಟಿಸ್ ಕೊಡದೆ ವಾಪಸ್ ಕಳುಹಿಸಿದ್ದನ್ನು ಪ್ರಶ್ನಿಸಿದ ಪಿಎಸ್‌ಐ ಅನ್ನು ನಿಂದಿಸಿದ್ದಲ್ಲದೆ, ಹಲ್ಲೆಗೆ ಯತ್ನಿಸಿದ ಮಹಾದೇವಪುರ ಠಾಣೆಯ ಎಎಸ್‌ಐ ಮತ್ತು ಮುಖ್ಯಪೇದೆಯನ್ನು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹ್ಮದ್ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.
ಎಎಸ್‌ಐ ಅಮೃತೇಶ್ ಮತ್ತು ಮುಖ್ಯಪೇದೆ ಜಯಕಿರಣ್ ಅವರನ್ನು ಕರ್ತವ್ಯ ಲೋಪ ಮತ್ತು ಅಶಿಸ್ತು ಆರೋಪದ ಮೇಲೆ ಅಮಾನತುಗೊಂಡವರು. ಸಾರ್ವಜನಿಕರ ದೂರಿನನ್ವಯ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಮಹಾದೇವಪುರ ಠಾಣೆಯ ಎ.ನಾರಾಯಣಪುರದಲ್ಲಿರುವ ಪೆಟ್ರೋಲ್ ಬಂಕ್‌ವೊಂದರ ಬಳಿಯ ಜೂಜು ಅಡ್ಡೆ ಮೇಲೆ ಎಎಸ್‌ಐ ಅಮೃತೇಶ್
ಮತ್ತು ಪೇದೆ ಜಯಕಿರಣ್ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 10 ಮಂದಿಯನ್ನು ಠಾಣೆಗೆ ಕರೆತಂದಿದ್ದರು. ಇವರಿಂದ ಸುಮಾರು 42,500 ರು. ಜಪ್ತಿ ಮಾಡಲಾಗಿತ್ತು. ಆದರೆ, ವಿಚಾರಣೆ ನಡೆಸಬೇಕಾದ ಸಿಬ್ಬಂದಿ ಎನ್‌ಸಿಆರ್ (ಗಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿಕೊಂಡು ಆರೋಪಿಗಳಿಗೆ ನೋಟಿಸ್ ಕೊಡದೆ ವಾಪಸ್ ಕಳುಹಿಸಿದ್ದರು.
ಇದನ್ನು ಗಮನಿಸಿದ ಪಿಎಸ್‌ಐ ಅಶ್ವತ್ಥ್ ನೋಟಿಸ್ ಕೊಡದೆ ಕಳುಹಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡು ಎಎಸ್‌ಐ ಅಮೃತೇಶ್ ಮತ್ತು ಮುಖ್ಯಪೇದೆ ಜಯಕಿರಣ್ ನೀನ್ಯಾರು ಪ್ರಶ್ನಿಸಲು, ಇನ್‌ಸ್ಪೆಕ್ಟರ್ ಅವರೇ ಪ್ರಶ್ನಿಸುವುದಿಲ್ಲ ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಅಲ್ಲದೇ ಒಂದು ಹಂತದಲ್ಲಿ ಹಲ್ಲೆಗೂ ಯತ್ನಿಸಿದ್ದರು ಎನ್ನಲಾಗಿದೆ.ಈ ಸಂಬಂಧ ಪಿಎಸ್‌ಐ ಅಶ್ವತ್ಥ್ ಡಿಸಿಪಿ ಅಬ್ದುಲ್ ಅಹ್ಮದ್ ಅವರಿಗೆ ಸಿಬ್ಬಂದಿ ವರ್ತನೆ ಕುರಿತು ವರದಿ ನೀಡಿದ್ದರು.
ವಿಷಯ ತಿಳಿದು ಠಾಣೆಗೆ ಧಾವಿಸಿದ ಡಿಸಿಪಿ ಅಬ್ದುಲ್ ಅಹ್ಮದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಎಎಸ್‌ಐ ಅಮೃತೇಶ್ ಮತ್ತು ಜಯಕಿರಣ್ ಕರ್ತವ್ಯ ಲೋಪ ಹಾಗೂ ಅಶಿಸ್ತು ತೋರಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಎಸ್‌ಐ ಅಮೃತೇಶ್ ಮತ್ತು ಮುಖ್ಯಪೇದೆ ಜಯಕಿರಣ್ ಅವರನ್ನು ಅಮಾನತುಗೊಳಿಸಿದ್ದಾರೆ.
ಜತೆಗೆ ಮಾರತ್‌ಹಳ್ಳಿ ಎಸಿಪಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಡಿಸಿಪಿ ಅಬ್ದುಲ್ ಅಹ್ಮದ್, ಪ್ರಾಥಮಿಕ ತನಿಖೆಯಲ್ಲಿ ಎಎಸ್‌ಐ ಮತ್ತು ಮುಖ್ಯಪೇದೆ ಕರ್ತವ್ಯಲೋಪ ಹಾಗೂ ಆಶಿಸ್ತು ತೋರಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.