ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ.
ದೊಡ್ಮನೆ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವುರಿಂದ ಸಚಿವರು, ಆರೋಗ್ಯ ಇಲಾಖೆಯ ವತಿಯಿಂದ ಅಗಸ್ಟ್ 3 ರಂದು ಆಚರಿಸುವ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ.
ವರನಟ ಡಾ.ರಾಜಕುಮಾರ್ ಅವರಂತೆಯೇ ಪುನೀತ್ ರಾಜಕುಮಾರ್ ತಮ್ಮ ಕಣ್ಣುಗಳನ್ನ ದಾನ ಮಾಡಿದ್ದರು. ಪುನೀತ್ ರಾಜಕುಮಾರ್ ಅವರು ಕಣ್ಣುಗಳ ದಾನ ರಾಜ್ಯದಲ್ಲಿ ಸಾವಿರಾರು ಜನರಿಗೆ ಅಂಗಾಂಗ ದಾನ ಮಾಡಲು ಪ್ರೇರಣೆಯಾಗಿತ್ತು. ಅಲ್ಲದೇ ರಾಜ್ಯದಲ್ಲಿ ಅಂಗಾಂಗ ದಾನ ಪ್ರಮಾಣ ಏರಿಕೆ ಕೂಡಾ ಕಂಡಿತ್ತು. ಅನೇಕರು ದಿ.ಪುನೀತ್ ರಾಜಕುಮಾರ್ ಅವರನ್ನೇ ಮಾದರಿಯನ್ನಾಗಿಟ್ಟುಕೊಂಡು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಅಂಗಾಂಗ ದಾನ ಜಾಗೃತಿಗೆ ರಾಯಭಾರಿಯಾಗುವಂತೆ ಆರೋಗ್ಯ ಇಲಾಖೆ ಆಹ್ವಾನ ನೀಡಿದೆ.
ಇದನ್ನೂ ಓದಿ:40 ಅಡಿ ಬೋರ್‌ವೆಲ್‌ಗೆ ಬಿದ್ದ 3 ವರ್ಷದ ಮಗು ಸುರಕ್ಷಿತವಾಗಿ ಮೇಲಕ್ಕೆ ; Video
ಅಂಗಾಂಗ ದಾನದ ಮೂಲಕ ಒಬ್ಬ ದಾನಿ ತನ್ನ ಸಾವಿನ ಬಳಿಕವೂ 8 ಜನರಿಗೆ ಜೀವದಾನ ಮಾಡಬಹುದಾಗಿದೆ. ಅಲ್ಲದೇ ಅಂಗಾಂಶ ದಾನದ ಮೂಲಕ 50 ಜನರ ಜೀವವನ್ನ ಉಳಿಸಬಹುದಾಗಿದೆ. ಜೀವನದ ಸಾರ್ಥಕತೆ ಕಾಣಬಹುದಾದ ಅಂಗಾಂಗ ದಾನಕ್ಕೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ನೀಡುವತ್ತ ಕಾರ್ಯಕ್ರಮಗಳನ್ನ ರೂಪಿಸಲು ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.