Advertisement

ದುಡಿಮೆಗೆ ದಾರಿ ತೋರಿದ “ಅಶ್ವಿ‌ನಿ ಲೇಡಿ ಕಾರ್ನರ್‌’; ಸ್ವಾವಲಂಬನೆಯತ್ತ ಒಲವು

03:20 PM Mar 08, 2022 | Team Udayavani |

ಗದಗ: ನಗರದ ಮಹಿಳಾ ಉದ್ಯಮಿಯೊಬ್ಬರು ಬಡ ಮಹಿಳೆಯರಿಗೆ ಗೊಂಬೆ, ಮನೆಯ ಅಲಂಕಾರಿಕ ವಸ್ತುಗಳ ತಯಾರಿಕೆ ಕುರಿತು ಉಚಿತ ಹ್ಯಾಂಡ್‌ ಮೇಡ್‌ ತರಬೇತಿ ನೀಡಿ, ಮಾರುಕಟ್ಟೆ ತಂತ್ರಜ್ಞಗಳನ್ನು ಗೊತ್ತು ಮಾಡಿಸುವುದರೊಂದಿಗೆ ಆರ್ಥಿಕ ಸ್ವಾವಲಂಬಿ ಮಾಡುವಲ್ಲಿ ಹೆಜ್ಜೆ ಇರಿಸಿದ್ದಾರೆ.

Advertisement

ನಗರದ ಸರೋಜಾ ವಿ.ಚೇಗರೆಡ್ಡಿ ಕಳೆದ 2013ರಲ್ಲಿ ನಗರದ ಸಾಯಿಬಾಬಾ ದೇವಸ್ಥಾನ ಬಳಿ ಅಶ್ವಿ‌ನಿ ಲೇಡಿಸ್‌ ಕಾರ್ನರ್‌ ಆರಂಭಿಸಿದರು. ಆರಂಭದಲ್ಲಿ ವಿವಿಧ ಬಗೆಯ ಅಲಂಕಾರಿಕ ವಸ್ತುಗಳ ಪೂರೈಕೆಯಲ್ಲಿ ಅಭಾವ ಮತ್ತು ದುಬಾರಿ ಎನಿಸಿತ್ತು. ಅಲ್ಲದೇ ಅವುಗಳನ್ನು ಅತ್ಯಲ್ಪ ಮೊತ್ತದಲ್ಲಿ ತಯಾರಿಸಬಹುದೆಂಬುದನ್ನು ಅರಿತ ಸರೋಜಾ ಅವರು, ಇಬ್ಬರು ಬಡ ಮಹಿಳೆಯರಿಗೆ ತರಬೇತಿ ನೀಡಿ ಅವರಿಗೆ ಕಚ್ಚಾ ವಸ್ತುಗಳನ್ನು ಪೂರೈಸಿ ತಯಾರಿಕೆಗೆ ಪ್ರೋತ್ಸಾಹ ನೀಡಿದರು. ಅದು ಬಾಯಿಂದ ಬಾಯಿಗೆ ಹರಡಿ, ಇಂದು ನೂರಾರು ಜನರಿಗೆ ಆಸರೆಯಾಗಿದೆ.

ಅಲಂಕಾರಿಕ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಅನೇಕ ಮಹಿಳೆಯರಿಗೆ 2- 3 ವಾರಗಳ ತರಬೇತಿ ನೀಡಿ ದುಡಿಮೆಯ ದಾರಿ ತೋರಿದ್ದಾರೆ. ಸದ್ಯ ನಗರದ ರಾಜೀವಗಾಂಧಿ ನಗರ, ಬೆಟಗೇರಿ ಸೇರಿದಂತೆ ವಿವಿಧ ಭಾಗದ ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ಸರೋಜಾ ಅವರಲ್ಲಿ ಕೌಶಲ್ಯ ತರಬೇತಿ ಪಡೆದಿದ್ದಾರೆ. ಮನೆಯಲ್ಲಿ ಬಿಡುವಿನ ಸಮಯದಲ್ಲಿ ವಿವಿಧ ಅಲಂಕಾರಿ ವಸ್ತುಗಳ ತಯಾರಿ ಕೆಯಲ್ಲಿ ತೊಡಗಿದ್ದಾರೆ. ಬಹುತೇಕರು ಸರೋಜಾ ಅವರಿಂದಲೇ ಕಚ್ಚಾ ಸಾಮಗ್ರಿ ಪಡೆದು ಅಲಂಕಾರಿಕ ವಸ್ತುಗಳನ್ನು ತಯಾರಿಸಿಕೊಟ್ಟು ಸೇವಾ ಶುಲ್ಕ ಪಡೆಯುತ್ತಿದ್ದಾರೆ. ಈ ಮೂಲಕ ಪ್ರತಿನಿತ್ಯ ತಲಾ 150- 200 ರೂ. ಆದಾಯ ಪಡೆಯುತ್ತಿದ್ದಾರೆ. ಇನ್ನು ಕೆಲವರು ತಕ್ಕಮಟ್ಟಿಗೆ ಬಂಡವಾಳ ಹೂಡಿ, ಸ್ವಂತ ಉದ್ಯಮಿಯಾಗಿದ್ದಾರೆ ಎಂಬುದು ಗಮನಾರ್ಹ.

ಯಾವ್ಯಾವ ವಸ್ತುಗಳನ್ನು ತಯಾರಿಸುತ್ತಾರೆ?:
ಗ್ರಾಹಕರಿಂದ ಬೇಡಿಕೆಯಿರುವ ನಾನಾ ಬಗೆಯ ಬಟ್ಟೆಯಿಂದ ತಯಾರಿಸುವ ವಿವಿಧ ಗಾತ್ರದ ಟೆಡ್ಡಿಬಿಯರ್‌, ಟೈಗರ್‌, ಡಾಗ್‌, ಎಲಿಫಂಟ್‌, ಜಿರಾಫೆ ಹಾಗೂ ಪರದೆ ತಯಾರಿಸಲಾಗುತ್ತದೆ. ಶ್ರಾವಣ, ಗಣೇಶ ಚತುಥಿ, ದಸರಾ, ದೀಪಾವಳಿ-ಕ್ರಿಸ್‌ಮಸ್‌ ಸಂದರ್ಭದಲ್ಲಿ ಹೆಚ್ಚು ಬೇಡಿಕೆಯಿರುವ ಉಲನ್‌ ಥ್ರೆಡ್‌, ಪ್ಲಾಸ್ಟಿಕ್‌ ಕಚ್ಚಾ ವಸ್ತುಗಳನ್ನು ಬಳಸಿ ತಳಿರು-ತೋರಣ ತಯಾರಿಸುವುದು, ಮದುವೆ ಸೀಸನ್‌ಗೆ ತಕ್ಕಂತೆ ಉಲನ್‌ ಥ್ರೆಡ್‌, ಮುತ್ತು ಪೋಣಿಸಿ, ರೋಲ್ಡ್‌ ಗೋಲ್ಡ್‌ ತುಂಡು ಬಳಸಿ ಆಂಟಿಕ್‌ ಜ್ಯುವೆಲ್ಲರಿ ಚೈನ್‌, ಜೂಲಾ- ಮದುವೆ ಮುನ್ನ ದಿನ ನೀಡಲಾಗುವ 8 ಬಗೆಯ ಕಾಳು ಹಾಗೂ ಶಾವಿಗೆಯ ಪ್ಯಾಕೇಟ್‌ಗಳನ್ನು ಆಕರ್ಷಕವಾಗಿ ಸಿದ್ಧ ಪಡಿಸುವ ಬಗ್ಗೆ ತರಬೇತಿ ನೀಡಿ, ಅವರಿಂದಲೇ ತಯಾರಿಸುತ್ತಾರೆ.

ಅದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ನೀಡುವುದರೊಂದಿಗೆ ಸೇವಾ ಶುಲ್ಕವನ್ನೂ ನೀಡುತ್ತಾರೆ. ತರಬೇತಿ ಪಡೆದವರಲ್ಲಿ ಒಬ್ಬಿಬ್ಬರು ಅಲ್ಪಸ್ವಲ್ಪ ಬಂಡವಾಳದಲ್ಲಿ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಗದಗ ಮಹಿಳೆಯರು ತಯಾರಿಸುವ ಹ್ಯಾಂಡ್‌ಮೇಡ್‌ ವಸ್ತುಗಳನ್ನು ಗದಗ ನಗರ ಸೇರಿದಂತೆ ಉತ್ತರ ಕರ್ನಾಟಕ, ಮಹಾರಾಷ್ಟ್ರದ ಹಲವೆಡೆ ಸಾಗಿಸಲಾಗುತ್ತದೆ. ಗದಗ, ಹಂಪಿ, ಕೊಲ್ಕತ್ತಾ ಮತ್ತು ಮಹಾರಾಷ್ಟ್ರದಲ್ಲಿ ವಾಣಿಜ್ಯೋದ್ಯಮ ಸಂಸ್ಥೆಗಳು ಆಯೋಜಿಸುವ ವಾಣಿಜ್ಯ ಮೇಳಗಳಲ್ಲಿ ಸ್ಟಾಲ್‌ ಹಾಕಿ, ಮಾರಾಟದಲ್ಲಿ ತೊಡಗಿದ್ದಾರೆಂಬುದು ವಿಶೇಷ.

Advertisement

ನಮ್ಮ ಮನೆಯವರು ಆರ್ಮಿಯಲ್ಲಿದ್ದಾಗ ನಾನು ದೆಹಲಿಯಲ್ಲಿ ಡಾಲ್‌ ಮೇಕಿಂಗ್‌ ಸೇರಿದಂತೆ ಹ್ಯಾಂಡ್‌ ಮೇಡ್‌ ತರಬೇತಿ ಪಡೆದಿದ್ದೆ. ಅದು ಈಗ ನೂರಾರು ಜನರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎನ್ನಲು ಖುಷಿಯಾಗುತ್ತದೆ. ನಮ್ಮಲ್ಲಿ ಬಹುತೇಕ ಬಡ ಹೆಣ್ಣು ಮಕ್ಕಳು ತರಬೇತಿ ಪಡೆದಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಮನೆಯಿಂದಲೇ ವಿವಿಧ ವಸ್ತುಗಳನ್ನು ತಯಾರಿಸಿಕೊಟ್ಟು ದಿನಕ್ಕೆ 100- 250 ರೂ.ವರೆಗೆ ದುಡಿಯುತ್ತಿದ್ದಾರೆ. ಇನ್ನೂ ಕೆಲವರ ಮನೆಯಲ್ಲಿ ಇತರೆ ಸದಸ್ಯರು ಕೈಜೋಡಿಸಿ, ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಈ ಸಾಧನೆಗೆ ಚೇಂಬರ್‌ ಕಾಮರ್ಸ್‌ನಿಂದ ಶ್ರೇಷ್ಠ ಮಹಿಳಾ ಉದ್ಯಮಿ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದ್ದು ಹೆಮ್ಮೆಯಾಗುತ್ತಿದೆ.
ಸರೋಜಾ ವಿ. ಚೇಗರಡ್ಡಿ, ಮಹಿಳಾ ಉದ್ಯಮಿ

ಕಳೆದ 6 ವರ್ಷಗಳಿಂದ ಸರೋಜಾ ಅವರೊಂದಿಗೆ ನಮ್ಮ ತಾಯಿ, ದೊಡ್ಡಮ್ಮ ಅವರು ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ನಾನೂ ಕಾಲೇಜು ಬಳಿಕ ಉಲನ್‌ ಥ್ರೆಡ್‌ನ‌ಲ್ಲಿ ತೊಡಗಿಸಿಕೊಂಡಿದ್ದೇನೆ. ದಿನಕ್ಕೆ 100- 150 ರೂ. ಗಳಿಕೆಯಾಗುತ್ತಿದ್ದು, ಮನೆಗೆ ಅನುಕೂಲವಾಗುತ್ತದೆ.
ಪೂರ್ಣಿಮಾ ತಳಕಲ್‌, ವಿದ್ಯಾರ್ಥಿನಿ

*ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next