ಕೆಲವು ನಾಯಕ ನಟಿಯರಿಗೆ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ, ಸಿನಿಮಾ ಬದುಕಿಗೆ ಗುಡ್ ಬೈ ಹೇಳಿ ವೈಯಕ್ತಿಕ ಬದುಕಿನತ್ತ ಮುಖ ಮಾಡಿ ಬಿಡುತ್ತಾರೆ. ಇನ್ನು ಕೆಲವು ನಟಿಯರು ಚಿತ್ರರಂಗದಲ್ಲಿ ನಾಯಕಿಯಾಗಿ ಅವಕಾಶಗಳು ಕಡಿಮೆಯಾದರೂ, ಬೇರೆ ಬೇರೆ ಪಾತ್ರಗಳಿಗೆ ತೆರೆದುಕೊಳ್ಳುವ ಮೂಲಕ ಸಕ್ರಿಯರಾಗುತ್ತಾರೆ.
ಇವೆಲ್ಲದರ ನಡುವೆ, ಇನ್ನೂ ಕೆಲವು ನಟಿಯರು ಅದಕ್ಕೂ ಮುಂದೆ ಹೋಗಿ ನಿರ್ಮಾಣ, ನಿರ್ದೇಶನ ಹೀಗೆ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಅನ್ನೆ ಶುರು ಮಾಡಿ ಆ್ಯಕ್ಟಿವ್ ಆಗಿರುತ್ತಾರೆ. ಆದರೆ ಇಂಥವರ ಸಂಖ್ಯೆ ವಿರಳ. ಈಗ ಈ ಸಾಲಿಗೆ ನಟಿ ಅಶ್ವಿನಿ ಗೌಡ ಸೇರ್ಪಡೆಯಾಗುತ್ತಿದ್ದಾರೆ.
ಹೌದು, “ವಾರಸ್ದಾರ’ ಚಿತ್ರದ ಮೂಲಕ ಹೀರೋಯಿನ್ ಆಗಿ ಬೆಳ್ಳಿತೆರೆಗೆ ಪರಿಚಯವಾದ ಅಶ್ವಿನಿ ಗೌಡ, ಕೆಲ ಚಿತ್ರಗಳಲ್ಲಿ ನಟಿಸುತ್ತಲಿರುವಾಗಲೇ, ವೈವಾಹಿಕ ಬದುಕಿಗೆ ಕಾಲಿಟ್ಟರು. ಮದುವೆಯ ಬಳಿಕ ಹಿರಿತೆರೆಯಲ್ಲಿ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ಅಶ್ವಿನಿ ಗೌಡ ನಂತರ ಕಾಣಿಸಿಕೊಂಡಿದ್ದು, ಕಿರುತೆರೆಯ ಧಾರಾವಾಹಿಗಳಲ್ಲಿ.
ಇಲ್ಲಿಯವರೆಗೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳು, 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿರುವ ಅಶ್ವಿನಿ ಗೌಡ, ಸದ್ಯ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲದರ ನಡುವೆ ಅಶ್ವಿನಿ ಗೌಡ ಈಗ ನಿರ್ಮಾಪಕಿಯಾಗುತ್ತಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮಗಿರುವ ಅನುಭವದ ಆಧಾರದ ಮೇಲೆ ಅಶ್ವಿನಿ ಗೌಡ, ಈಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಡಾ. ರಾಜಕುಮಾರ್ ಪುಣ್ಯತಿಥಿಯಂದು “ಎಎಂಜಿ ಪ್ರೊಡಕ್ಷನ್ಸ್’ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿರುವ ಅಶ್ವಿನಿ ಗೌಡ, ಈ ಸಂಸ್ಥೆಯ ಹೊಸ ಪ್ರತಿಭೆಗಳ ಮೂಲಕ ಸಿನಿಮಾ ಮತ್ತು ಧಾರಾವಾಹಿಗಳ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದಾರೆ.