ದುಬೈ: ಭಾರತದ ಸ್ಪಿನ್ನರ್ ರವಿ ಚಂದ್ರನ್ ಅಶ್ವಿನ್ ಅರಬ್ ನಾಡಿನಲ್ಲಿ ಕ್ರಿಕೆಟ್ ಅಕಾಡೆಮಿ ಯೊಂದನ್ನು ತೆರೆಯಲು ಮುಂದಾಗಿದ್ದಾರೆ. ಇದು ಕಿಂಗ್ಸ್ ಸ್ಕೂಲ್ ಸಹಯೋಗ ದಲ್ಲಿ ದುಬಾೖಯಲ್ಲಿ ಆರಂಭವಾಗಲಿದೆ. ಹೆಸರು “ದಿ ಜೆನ್‌ನೆಕ್ಸ್ಟ್ ಕಿಂಗ್ಸ್ ಅಕಾಡೆಮಿ’.
ಅಶ್ವಿನ್ ನಡೆಸುತ್ತಿರುವ “ದಿ ಜೆನ್‌ನೆಕ್ಸ್ಟ್ಅಕಾಡೆಮಿ’ ಚೆನ್ನೈಯಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯಗೊಂಡಿದೆ. ಇದೀಗ “ಕಿಂಗ್ಸ್ ಸ್ಕೂಲ್’ ಸಹಯೋಗದೊಂದಿಗೆ ದುಬಾೖಯಲ್ಲೂ ಅಕಾಡೆಮಿಯನ್ನು ಆರಂಭಿಸಲು ಮುಂದಾಗಿದೆ. ಕಿಂಗ್ಸ್ ಸ್ಕೂಲ್‌ನಲ್ಲಿ ಕ್ರಿಕೆಟ್ ತರಬೇತಿ ನೀಡುತ್ತಿರುವ ಒಲಿವರ್, ಇದೊಂದು ನೂತನ ಮೈಲುಗಲ್ಲಾಗಲಿದೆ ಎಂದಿದ್ದಾರೆ.
“ಅಶ್ವಿನ್ ಮತ್ತು ಅವರ ತರಬೇತುದಾರರ ತಂಡ ಕಿಂಗ್ಸ್ ಸ್ಕೂಲ್ ಸಹಯೋಗದೊಂದಿಗೆ ತನ್ನದೇ ಶೈಲಿಯ ಕ್ರಿಕೆಟ್ ಕೋಚಿಂಗ್ ನೀಡಲಿದೆ. ಇದು ಈ ವಠಾರದ ಕ್ರೀಡಾ ಅಕಾಡೆಮಿಗಳ ಪಾಲಿಗೆ ವರದಾನವಾಗಲಿದೆ’ ಎಂದು ಒಲಿವರ್ ಅಭಿಪ್ರಾಯಪಟ್ಟರು.
ಕಿಂಗ್ಸ್ ಸ್ಕೂಲ್‌ನ ಬ್ಯುಸಿನೆಸ್ ಡೆವಲಪ್‌ಮೆಂಟ್ ಮುಖ್ಯಸ್ಥ ಅಕ್ಷಯ್ ಖನ್ನಾ, ಎಜುಕೇಶನ್ ಡೈರೆಕ್ಟರ್ ಅಲನ್ ವಿಲಿಯಮ್ಸನ್ ಕೂಡ ಈ ನಡೆಯನ್ನು ಸ್ವಾಗತಿಸಿದರು. “ಆರ್. ಅಶ್ವಿನ್ ಅವರ ಕ್ರಿಕೆಟ್ ಅಕಾಡೆಮಿಯ ಸಹಯೋಗದಲ್ಲಿ ನಾವಿಂದು ಅಭೂತಪೂರ್ವ ಹೆಜ್ಜೆಯನ್ನು ಇಡುತ್ತಿದ್ದೇವೆ. ದುಬಾೖಯಲ್ಲಿ ಶಾಲಾ ಮಟ್ಟದಲ್ಲೇ ಪ್ರತಿಭಾನಿತ್ವ ಕ್ರಿಕೆಟಿಗರನ್ನು ರೂಪಿಸುವುದು ನಮ್ಮ ಉದ್ದೇಶ’ ಎಂದು ವಿಲಿಯಮ್ಸನ್ ಹೇಳಿದರು.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ದೂರ ಉಳಿದಿರುವ ಅಶ್ವಿನ್ ಇಂಗ್ಲಿಷ್ ಕೌಂಟಿಯಲ್ಲಿ ವೂರ್ಸ್ಟರ್‌ಶೈರ್ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ.