Advertisement

ಕಾರ್ಯಪಡೆ ಶಿಫಾರಸ್ಸು ಸಚಿವ ಸಂಪುಟದ ಮುಂದಿಡಲಾಗುವುದು: ಡಾ.ಅಶ್ವತ್ಥನಾರಾಯಣ

08:51 PM Nov 07, 2020 | sudhir |

ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ವಿ.ರಂಗನಾಥ್‌ ಅವರ ನೇತೃತ್ವದ ಕಾರ್ಯಪಡೆ ನೀಡಿರುವ ಶಿಫಾರಸಿನ ವರದಿಯನ್ನು ಶೀಘ್ರವೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸಚಿವ ಸಂಪುಟದ ಮುಂದಿಡಲಾಗುತ್ತದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

Advertisement

ವಿಧಾನಸೌಧದಲ್ಲಿ ಶನಿವಾರ ಕಾರ್ಯಪಡೆ ವರದಿ ಸ್ವೀಕರಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳು, ಕಾರ್ಯಗಳು, ಸಂಸ್ಥೆಗಳು ಹಾಗೂ ಘಟಕಗಳ ನಡುವೆ ಸಮನ್ವಯತೆ ಸಾಧಿಸುವುದಕ್ಕಾಗಿ ಕರ್ನಾಟಕ ಶಿಕ್ಷಣ ಆಯೋಗ (ಕೆಎಸ್‌ಎ) ಸ್ಥಾಪಿಸಬೇಕು ಎಂಬ ಶಿಫಾರಸು ಮಾಡಿದ್ದಾರೆ. ಪ್ರಾಥಮಿಕ-ಪ್ರೌಢ ಹಾಗೂ ಉನ್ನತ ಶಿಕ್ಷಣ ಇವೆರಡೂ ಈ ಆಯೋಗದಡಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಕಾರ್ಯಪಡೆ ವರದಿಯನ್ನು ಶೀಘ್ರವೇ ಮುಖ್ಯಮಂತ್ರಿಯವರ ಗಮನಕ್ಕೆ ತಂದು, ಸಚಿವ ಸಂಪುಟದ ಮುಂದಿಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ನಭಕ್ಕೆ ಸೇರಿದ 10 ಉಪಗ್ರಹಗಳು: ಲಾಕ್‌ಡೌನ್‌ ಬಳಿಕ ಇಸ್ರೋದ ಮೊದಲ ಉಡಾವಣೆ ಯಶಸ್ವಿ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ಕಾರ್ಯಪಡೆ ನೀಡಿರುವ ವರದಿಗೆ ಸಂಬಂಧಿಸಿದಂತೆ ಶಿಕ್ಷಣ ಪಾಲುದಾರರ(ಸ್ಟೇಕ್‌ ಹೋಲ್ಡರ್) ಅಭಿಪ್ರಾಯವನ್ನು ಪಡೆಯಲಿದ್ದೇವೆ. ದೇಶದಲ್ಲೇ ಕರ್ನಾಟಕ ಮೊದಲ ರಾಜ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಯಪಡೆ ರಚಿಸಿ, ಶಿಫಾರಸು ಪಡೆದು, ಅನುಷ್ಠಾನದತ್ತ ದಾಪುಗಾಲು ಇಟ್ಟಿದೆ. ಪಠ್ಯಕ್ರಮ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣದ ಸಂರಚನೆಗೆ ಸಂಬಂಧಿಸಿದಂತೆ ಮೂರು ಉಪಸಮಿತಿ ರಚನೆ ಮಾಡಿ, ಆ ಉಪಸಮಿತಿಗಳು ನೀಡಿರುವ ಅಂಶಗಳ ಆಧಾರದಲ್ಲಿ ಸಮಗ್ರ ವರದಿಯನ್ನು ಕಾರ್ಯಪಡೆ ಸಿದ್ಧಪಡಿಸಿದೆ. ಶಿಕ್ಷಣದಲ್ಲಿ ಸುಧಾರಣೆ, ಕಾರ್ಯಕ್ರಮ ಅನುಷ್ಠಾನ ಸೇರಿದಂತೆ ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಪೂರಕವಾಗುವಂತೆ ರಾಷ್ಟ್ರಿಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಈ ವರದಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.

2021-22ನೇ ಶೈಕ್ಷಣಿಕ ವರ್ಷದಿಂದ ಇದನ್ನು ಹಂತ ಹಂತವಾಗಿ ಅಳವಡಿಸಲಾಗುತ್ತದೆ. ಅದಕ್ಕೆ ಮುನ್ನ ಎಲ್ಲ ಶೈಕ್ಷಣಿಕ ಪಾಲುದಾರರೊಂದಿಗೆ ವರದಿ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ನೀತಿಯನ್ನು ಪೂರ್ತಿಯಾಗಿ ಅಳವಡಿಸಲು 15 ವರ್ಷಗಳ ಕಾಲಾವಕಾಶವಿದೆ. ಆದರೆ ಕರ್ನಾಟಕ ಸರ್ಕಾರವು 10 ವರ್ಷಗಳೊಳಗೆ ನೀತಿಯ ಅನುಷ್ಠಾನ ಹಾಗೂ ಅಳವಡಿಕೆ ಪ್ರಕ್ರಿಯೆಯನ್ನು ಮುಗಿಸುವ ಗುರಿ ಹೊಂದಿದೆ ಎಂದು ಹೇಳಿದರು.

Advertisement

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ, ಕಾರ್ಯಪಡೆ ಸದಸ್ಯ ಎಂ.ಕೆ.ಶ್ರೀಧರ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್‌ ನಾಯ್ಕ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next