Advertisement

ಮುಂಬಯಿಯಲ್ಲಿ ಎಷ್ಟು ಮರಾಠಿ ಭಾಷಿಕರಿದ್ದಾರೆಂದು ಠಾಕ್ರೆ ನೋಡಲಿ: ಅಶ್ವಥ ನಾರಾಯಣ ತಿರುಗೇಟು

11:43 AM Dec 27, 2022 | Team Udayavani |

ಹುಬ್ಬಳ್ಳಿ: ರಾಜ್ಯದ ಕೆಲವು ಪ್ರದೇಶಗಳನ್ನು‌ ಕೇಂದ್ರಾಡಳಿತ ಮಾಡಬೇಕೆಂದು ಹೇಳಿಕೆ‌ ನೀಡಿದ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆಗೆ ಮುಂಬಯಿಯಲ್ಲಿ ಮರಾಠಿ ಭಾಷಿಕರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಇದನ್ನು ನಾವು ಪ್ರಶ್ನಿಸಿದರೆ ಅವರಿಗೇ ಸಮಸ್ಯೆಯಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಕೆ. ಅಶ್ವತ್ಥನಾರಾಯಣ ಹೇಳಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿವಿವಾದ ಮುಗಿದ ಅಧ್ಯಾಯ. ಆಗಾಗ ಈ ವಿಚಾರ ತೆಗೆಯುತ್ತ ಅವರಿಗೂ, ಜನರಿಗೂ ಸಮಸ್ಯೆ ತಂದಿಡುತ್ತಿದ್ದಾರೆ. ಜನರ ಬಗ್ಗೆ ಕಾಳಜಿಯಿಲ್ಲದ‌ ಅವರು ರಾಜಕೀಯ ಹಾಗೂ‌ ಸ್ವಾರ್ಥಕ್ಕಾಗಿ‌ ಹೀಗೆ ಮಾಡುತ್ತಿದ್ದಾರೆ. ಇಂತಹ ನಾಯಕರು ಸಮಾಜಕ್ಕೆ ಸಮಸ್ಯೆ‌ ಹಾಗೂ ಭಾರ. ಬೆಳಗಾವಿ, ನಿಪ್ಪಾಣಿ, ಕಾರವಾರ ಕೇಂದ್ರಾಡಳಿತ ಪ್ರದೇಶವಾಗಬೇಕೆಂಬ ಆಲೋಚನೆ ಅವರಿಗೆ ಹೇಗೆ ಬಂತು ತಿಳಿಯುತ್ತಿಲ್ಲ ಎಂದರು.

ಕೋವಿಡ್ ನೆಪದಲ್ಲಿ ಅವಧಿಪೂರ್ವ‌ ಚುನಾವಣೆ ನಡೆಸಲು‌ ಬಿಜೆಪಿ ಮುಂದಾಗಿದೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಅವರಿಗೆ ತಿಳಿವಳಿಕೆ‌ ಕೊರತೆ ಇದೆ. ಹಲವಾರು ಜವಾಬ್ದಾರಿ ನಿರ್ವಹಿಸಿರುವ ಅವರು, ವಿಶ್ವದಾದ್ಯಂತ ಏನಾಗುತ್ತಿದೆ ಎನ್ನುವುದು ತಿಳಿದಿಲ್ಲವೇ? ಅವರಿಗೆ ರಾಜಕೀಯ ಮತ್ತು ಚುನಾವಣೆ ಬಿಟ್ಟರೆ, ಜನರ ಸಮಸ್ಯೆ ಹಾಗೂ ಆರೋಗ್ಯದ ಚಿಂತನೆಯಿಲ್ಲ. ಅಧಿಕಾರ ಕಳೆದುಕೊಂಡ ಅವರಿಗೆ ಬಹಳ ಸಂಕಟವಾಗುತ್ತಿದೆ. ಇದೀಗ ಅದರ ಹಪಾಹಪಿ, ಹಸಿವು ಹೆಚ್ಚಿರುವುದರಿಂದ‌ ಹೀಗೆಲ್ಲ ಹೇಳಿಕೆ ನೀಡುತ್ತಿದ್ದಾರೆ ಎಂದು ಹೀಯಾಳಿಸಿದರು.

ಇದನ್ನೂ ಓದಿ:ಇಷ್ಟೆಲ್ಲಾ ಪ್ರದರ್ಶನ ತೋರಿದರೂ ಯಾಕೆ ಸೇಲಾಗಲಿಲ್ಲ…: ಬೇಸರ ತೋಡಿಕೊಂಡ ವೇಗಿ

ಯಾವ್ಯಾವ ಸಮುದಾಯಕ್ಕೆ ಎಷ್ಟೆಷ್ಟು‌ ಮೀಸಲಾತಿ ನೀಡಬೇಕು ಎನ್ನುವ ಕುರಿತು ಹಿಂದುಳಿದ ವರ್ಗದ ಆಯೋಗಕ್ಕೆ ಶಿಫಾರಸು‌ ಕಳುಹಿಸಲಾಗಿದೆ. ಆಯೋಗದ ವರದಿ ಆಧರಿಸಿ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಒಕ್ಕಲಿಗರಿಗೆ ಶೇ. 3ರಷ್ಟು ಮೀಸಲಾತಿ ಬೇಡ. ನಾವು ಭಿಕ್ಷುಕರಲ್ಲ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ಒಮ್ಮೆಲೆ‌ ಜಾಗೃತರಾಗಿದ್ದಾರೆ. ಅವರ ಸರಕಾರವಿದ್ದಾಗ ಈ ಮೀಸಲಾತಿಯು ಭಿಕ್ಷೆ ಅನಿಸಿರಲಿಲ್ಲವೇ? ಅವರನ್ನು ಅವರೇ‌ ಈ ಕುರಿತು ಪ್ರಶ್ನಿಸಿಕೊಳ್ಳಲಿ ಎಂದರು.

Advertisement

ಮೀಸಲಾತಿ ವಿಷಯದಲ್ಲಿ‌ ಕಾಂಗ್ರೆಸ್ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿತ್ತು. ಆದರೆ, ಬಿಜೆಪಿ ಎಲ್ಲ ಸಮುದಾಯದವರ ಆಶಯಗಳಿಗೆ ಸ್ಪಂದಿಸುತ್ತಿದೆ. ರಾಜಕೀಯ ಮತ್ತು ತುಷ್ಟೀಕರಣ ಮಾಡುವುದು‌ ಕಾಂಗ್ರೆಸ್ ಸಂಸ್ಕೃತಿ ಎಂದು‌ ಕಿಡಿಕಾರಿದರು.

ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಷಯ. ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next