Advertisement

ಶ್ರೀಕೃಷ್ಣಾಷ್ಟಮಿ ; ತಿಂಡಿ-ತಿನಿಸುಗಳ ಘಮಘಮ…

12:49 PM Aug 22, 2019 | Sriram |

ಉಡುಪಿ: ಶ್ರೀಕೃಷ್ಣಾಷ್ಟಮಿ ಬಂತೆಂದರೆ ಸಂಭ್ರಮದ ಜತೆಗೆ ತಿಂಡಿತಿನಿಸುಗಳೂ ಮಹತ್ತರ ಪಾತ್ರ ವಹಿಸುತ್ತವೆ. ಚಕ್ಕುಲಿ, ಎಳ್ಳುಂಡೆ, ಕಡುಬು, ಕಡಲೇಕಾಯಿ ಉಂಡೆ, ಹರಳು ಉಂಡೆ, ಪಂಚಕಜ್ಜಾಯ ಸಹಿತ ಹಲವಾರು ಖಾದ್ಯಗಳು ಕೃಷ್ಣಮಠ ಸಹಿತ ಮನೆ-ಮನೆಯಲ್ಲಿ ಕಾಣಸಿಗುತ್ತವೆ.

Advertisement

ವಿಶೇಷವಾಗಿ ಕೃಷ್ಣ ಮಠವನ್ನೊಳಗೊಂಡ ಅಷ್ಟಮಠಗಳಲ್ಲಿ ತಯಾರಿ ಭರದಿಂದ ಸಾಗಿದೆ. ಮಠದಲ್ಲಿ ಭಕ್ತರಿಗಾಗಿ ವಿತರಿಸಲು ಲಕ್ಷ ಚಕ್ಕುಲಿ, ಉಂಡೆ ಪ್ರಸಾದ ತಯಾರಿಸಲಾಗುತ್ತಿದೆ. ಉಂಡೆ- ಚಕ್ಕುಲಿ ಪ್ರಸಾದವನ್ನು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ.

ವಿದ್ಯಾರ್ಥಿಗಳಿಗೂ
ಪ್ರಸಾದ ವಿತರಣೆ
ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಮಾತ್ರವಲ್ಲ, ಮಠದಿಂದ ನಿತ್ಯ ಅನ್ನಪ್ರಸಾದ ನೀಡುವ ಶಾಲಾ ವಿದ್ಯಾರ್ಥಿಗಳಿಗೂ ಈ ಪ್ರಸಾದ ಸಿಗಲಿದೆ. ಒಟ್ಟಾರೆ ಉತ್ಸವಪ್ರಿಯ, ಪೊಡವಿಗೊಡೆಯ, ಕಡೆಗೋಲು ಕೃಷ್ಣನನ್ನು ಜನ್ಮಾಷ್ಟಮಿ ಸಂದರ್ಭದಲ್ಲಿ ಆರಾಧಿಸಲು ಎಲ್ಲ ಸಿದ್ಧತೆ ನಡೆದಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಮತ್ತಷ್ಟು ವೇಗ ಸಿಗಲಿದೆ.

ಅಷ್ಟಮಿ ಫೇಮಸ್‌ ಕಡುಬು (ಮೂಡೆ)
ಅಷ್ಟಮಿಗೂ ಕಡುಬಿಗೂ ಅವಿನಾಭಾವ ಸಂಬಂಧ. ಇತ್ತೀಚಿನ ದಿನಗಳಲ್ಲಿ ಕಡುಬು ವರ್ಷದ ಎಲ್ಲ ದಿನಗಳಲ್ಲೂ ಲಭ್ಯವಾಗಿದ್ದರೂ ಅಷ್ಟಮಿಯಂದು ವಿಶೇಷತೆಯನ್ನು ಪಡೆಯುತ್ತದೆ. ಹಿಂದೆ ಪ್ರತಿ ಮನೆಯಲ್ಲಿ ವಿವಿಧ ಎಲೆಗಳಿಂದ ತಾವೇ ತಯಾರಿಸಿ ಇಡುತ್ತಿದ್ದವರು ಇಂದು ಮಾರುಕಟ್ಟೆಗೆ ಹೋಗುತ್ತಿದ್ದಾರೆ. ಇದನ್ನು ತಯಾರಿಸುತ್ತಿರುವವರು ಇಂದು ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತಾರೆ. ಇದರ ಕೆಲಸ ಹೇಳುವಷ್ಟು ಸುಲಭವೇನಲ್ಲ. ನದಿ ಅಥವಾ ಬೇಲಿ ಬದಿಯಲ್ಲಿ ಬೆಳೆಯುವ ಮುಂಡಿRನ ಒಲಿ ಗಿಡದ ಗರಿಯನ್ನು ತಂದು ಮುಳ್ಳು ತೆಗೆದು ಬಿಸಿಲಿಗೆ ಕಾಯಿಸಿ ಅಚ್ಚುಕಟ್ಟಾಗಿ ರಚಿಸುವುದು ಒಂದು ಉತ್ತಮ ಕಲೆಗಾರಿಕೆ. ಆಧುನೀಕರಣದ ಧಾವಂತದಲ್ಲಿ ಇಂದು ಮೂಡೆ ಕಟ್ಟುವ ಕಲೆಗಾರಿಕೆಯಲ್ಲಿ ಆಸಕ್ತಿ ಇಲ್ಲ, ಆದರೆ ಖರೀದಿಗೆ ಮುಂದಾಗಿ ಬರುತ್ತೇವೆ. ಅಷ್ಟಮಿಗೆ ಒಂದೆರಡು ದಿನ ಉಡುಪಿ ರಥಬೀದಿಯ ಕೆಲವೆ‌ಡೆ ಅಂಗಡಿಗಳ ಮುಂದೆ ಕೇದಗೆಯ ಗರಿ ಮಾಡಿಕೊಂಡು ಮೂಡೆ ಒಲಿಯಲ್ಲಿ ಕಟ್ಟಿ ಮಾರುವವರು ಕಂಡು ಬರುತ್ತಾರೆ. ಸಾಂಪ್ರದಾಯಿಕ ಮೂಡೆ ಎಲೆ ಕೂಡ ದುಬಾರಿಯಾಗಿದೆ, ಈ ಗಿಡಗಳೂ ಇತರ ಸಸ್ಯಪ್ರಭೇದಗಳಂತೆ ವಿನಾಶದಂಚಿನಲ್ಲಿವೆ.

ಲಕ್ಷದಷ್ಟು ಉಂಡೆ, ಚಕ್ಕುಲಿ
ಕಡೆಗೋಲು ಕೃಷ್ಣನಿಗೆ ಪ್ರಿಯವಾದ ಉಂಡೆ- ಚಕ್ಕುಲಿ ತಯಾರಿಸುವ ಕಾರ್ಯ ಕೃಷ್ಣ ಮಠದಲ್ಲಿ ನಡೆಯುತ್ತದೆ. ಸುಮಾರು ಒಂದು ಲಕ್ಷದಷ್ಟು ಚಕ್ಕುಲಿ ಮತ್ತು ಅಷ್ಟೇ ಪ್ರಮಾಣದ ಉಂಡೆ ತಯಾರಿಸಲಾಗುತ್ತದೆ. ಇದಕ್ಕಾಗಿ ನುರಿತ ಬಾಣಸಿಗರು ಸಿದ್ಧತೆಯಲ್ಲಿ ತೊಡಗಿ¨ªಾರೆ. ಬಾಯಲ್ಲಿ ನೀರೂರಿಸುವ ಚಕ್ಕುಲಿ ಮತ್ತು ಉಂಡೆ ಪ್ರಸಾದವನ್ನು ಅಷ್ಟಮಿಯಂದು ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಆ ಬಳಿಕ ಕೃಷ್ಣಮಠಕ್ಕೆ ಬಂದ ಭಕ್ತರಿಗೆ ವಿತರಿಸಲಾಗುತ್ತದೆ.

Advertisement

ನುರಿತ ಬಾಣಸಿಗರಿಂದ ಶ್ರಮ
ಉಂಡೆ ಚಕ್ಕುಲಿ ಪ್ರಸಾದ ತಯಾರಿಸಲಿಕ್ಕೆಂದೇ ಹಲವಾರು ಮಂದಿ ನುರಿತ ಬಾಣಸಿಗರು ಹಗಲಿರುಳೂ ಶ್ರಮ ವಹಿಸಿ ಇದನ್ನು ಮಾಡುತ್ತಾರೆ. ಉಂಡೆ ಮತ್ತು ಚಕ್ಕುಲಿ ಕೃಷ್ಣನಿಗೂ ಪ್ರಿಯವಾದದ್ದು. ಈ ಕಾರ್ಯವನ್ನು ಅತ್ಯಂತ ಭಕ್ತಿಯಿಂದ ಮಾಡಲಾಗುತ್ತಿದೆ.

ಅವಲಕ್ಕಿ ಪ್ರಿಯ ಶ್ರೀಕೃಷ್ಣ
ಭಗವಾನ್‌ ಶ್ರೀಕೃಷ್ಣ ಮತ್ತು ಸುದಾಮ (ಕುಚೇಲ) ಇಬ್ಬರೂ ಬಾಲ್ಯ ಕಾಲದ ಸ್ನೇಹಿತರಾಗಿದ್ದರು. ಸುದಾಮನು ವಿವಾಹವಾಗಿದ್ದನು. ಇವನು ಸಾಕಷ್ಟು ಕಷ್ಟದ ಸಮಯವನ್ನು ಎದುರಿಸುತ್ತಿದ್ದನು. ಬಡತನದಿಂದಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವುದು ಕಷ್ಟವಾಗಿತ್ತು. ಊಟಕ್ಕೂ ಹಣವಿಲ್ಲದೆ ಕಷ್ಟಪಡುತ್ತಿದ್ದನು. ಆಗ ಅವನ ಹೆಂಡತಿ ಸುಶೀಲಾ ಸುದಾಮನಿಗೆ ಗೆಳೆಯ ಶ್ರೀಕೃಷ್ಣನ ಸಹಾಯ ಪಡೆಯಲು ನೆನಪಿಸಿದಳು. ಸರಿ ಎಂದು ಒಪ್ಪಿಕೊಂಡ ಸುದಾಮ ಕೃಷ್ಣನ ಬಳಿ ಹೊರಡಲು ಅನುವಾದನು. ಕೃಷ್ಣನಿಗೆ ಏನಾದರೂ ಕೊಂಡೊಯ್ಯಬೇಕು ಎಂದು ತಿಳಿದು ಮನೆಯೆಲ್ಲ ತಡಕಾಡಿದಾಗ ಸಿಕ್ಕಿದ್ದು ಅವಲಕ್ಕಿ ಮಾತ್ರ. ಅದನ್ನೇ ಕಟ್ಟಿಕೊಂಡು ಹೊರಟನು. ಕೃಷ್ಣನ ಆಸ್ಥಾನದ ವೈಭೋಗ ನೋಡಿ ಬೆರಗಾದ ಸುದಾಮ ಅವಲಕ್ಕಿಯನ್ನು ನೀಡಲು ಹಿಂಜರಿದನು. ಆದರೆ ಭಗವಂತನಾದ ಶ್ರೀಕೃಷ್ಣನಿಗೆ ಅದು ತಿಳಿದಿತ್ತು. ಬಳಿಕ ಶ್ರೀಕೃಷ್ಣ ತೆಗೆದುಕೊಂಡು ಸವಿದನು. ಮೊದಲೇ ಅವಲಕ್ಕಿ ಎಂದರೆ ಇಷ್ಟಪಡುತ್ತಿದ್ದ ಶ್ರೀ ಕೃಷ್ಣನಿಗೆ ಇದು ಮತ್ತೂ ಸಂತಸ ನೀಡಿತು. ಅಲ್ಲದೆ ಸುದಾಮನನ್ನು 4 ದಿನಗಳ ಕಾಲ ತಂಗುವಂತೆ ಸೂಚಿಸಿದನು. ಅನಂತರ ಸೀರೆ ಸಹಿತ ಹಲವಾರು ವಸ್ತುಗಳೊಂದಿಗೆ ಬಂಗಾರದ ಪಲ್ಲಕಿಯಲ್ಲಿ ಸುದಾಮನನ್ನು ಬೀಳ್ಕೊಡಲಾಯಿತು. ಮನೆಗೆ ಬರುವಾಗ ಆತನಿಗೆ ಅಚ್ಚರಿ ಕಾದಿತ್ತು. ಹಟ್ಟಿಯಂತಿದ್ದ ಮನೆ ಅರಮನೆಯಾಗಿತ್ತು. ಸುದಾಮನ ಹೆಂಡತಿ ಹೊಸ ಸೀರೆಯುಟ್ಟು ಚಿನ್ನದ ಬಿಂದಿಗೆ ಹಿಡಿದು ಆತನ ಕಾಲು ತೊಳೆಯಲೆಂದು ನಿಂತಿದ್ದಳು. ಆತನ ಬಡತನವೂ ನಿವಾರಣೆಯಾಗಿತ್ತು! ಇಲ್ಲಿ ಕೃಷ್ಣನ ಸಂದೇಶವೆಂದರೆ ಹೊರನೋಟದಿಂದ ವ್ಯಕ್ತಿಗಳನ್ನು ಅಳೆಯಬೇಡಿ, ಒಳನೋಟ ಮುಖ್ಯ. ಬಡವರನ್ನು ಕಡೆಗಣಿಸಿ ನೋಡುವವರಿಗೆ ಕೃಷ್ಣನ ಸಂದೇಶ ಎಚ್ಚರಿಸುತ್ತದೆ.

ಹಾಲು, ಮೊಸರಿಗೆ ತಾನೇ
ಒಡೆಯನೆಂದ ಬಾಲಕೃಷ್ಣ
ನಂದಗೋಪನ ಮನೆಯಲ್ಲಿ ಕೃಷ್ಣ ಬೆಳೆದದ್ದು ಹಾಲು, ಮೊಸರಿನ ಮಧ್ಯೆ. ಇದೇ ಮೊಸರಲ್ಲಿ ಇಲ್ಲಿನ ಪ್ರತಿಯೊಂದು ಮನೆಯ ಹಾಲು, ಮೊಸರಿಗೆ ತಾನೇ ಒಡೆಯ ಎಂಬುದನ್ನು ಬಾಲಲೀಲೆಯಿಂದಲೇ ತೋರಿಸುತ್ತಿದ್ದ. ಜತೆಗೆ ನಂದಗೋಕುಲದ ಜನರಲ್ಲಿದ್ದ ಹಾಲು, ಮೊಸರೇ ತನಗೆ ಇಷ್ಟ ಎಂಬುದನ್ನೂ ತೋರಿಸಿಕೊಟ್ಟವನು.

ಒಂದು ದಿನ ಪುಟ್ಟ ಕೃಷ್ಣನನ್ನು ಮಡಿಲಲ್ಲಿರಿಸಿ ಯಶೋದೆ ಎದೆಹಾಲು ಉಣಿಸುತ್ತಿದ್ದಳು. ಕೃಷ್ಣನ ಮುಖ ನೋಡುತ್ತಾ ಆಕೆಗೆ ಒಲೆಯಲ್ಲಿ ಹಾಲಿಟ್ಟದ್ದು ಮರೆತು ಹೋಗಿತ್ತು. ಅದು ಉಕ್ಕೇರುವ ಹೊತ್ತಿಗೆ ಥಟ್ಟನೆ ನೆನಪಾಗಿ ಈಗ ಬಂದೆ ಮಗು ಎಂದು ಕೃಷ್ಣನನ್ನು ಮಡಿಲಿ ನಿಂದ ಕೆಳಗಿರಿಸಿ ಒಲೆಯತ್ತ ಹೋದಳು. ಹಾಲು ಉಕ್ಕೇರುತ್ತಿತ್ತು. ಒಲೆಯಿಂದ ಇಳಿಸಿ ಮತ್ತೆ ಕೃಷ್ಣನತ್ತ ಬಂದಳು. ಎಲ್ಲಿಯೂ ಕಾಣಸಿಗಲಿಲ್ಲ. ಹುಡುಕುತ್ತಾ ಹೋದಾಗ ಒಂದು ಮೂಲೆಯಲ್ಲಿ ಮೊಸರಿನ ಮಡಕೆಯನ್ನು ಉರುಳಿಸಿ ಕೈಗೆ ಸಿಕ್ಕಿದ್ದಷ್ಟನ್ನು ಪುಟ್ಟ ಬೆರಳುಗಳಲ್ಲಿ ಚೀಪುತ್ತಿದ್ದ. ಯಶೋದೆಗೆ ಒಂದು ಕಡೆ ಕೋಪ, ಮತ್ತೂಂದು ಕಡೆ ಮಗುವಿನ ಮುಗ್ಧತೆಗೆ ಖುಷಿ. ಜತೆಗೆ ಹಸಿವಿನ ಮಗುವನ್ನು ಹೊಟ್ಟೆ ತುಂಬುವ ಮೊದಲು ಕೆಳಗಿಳಿಸಿ ಹೋಗಿ ತಪ್ಪು ಮಾಡಿದೆನೋ ಎಂಬ ಅಪರಾಧಿ ಭಾವ- ಇವೆಲ್ಲವೂ ಒಟ್ಟಿಗೆ ತಲೆಯಲ್ಲಿ ಸುತ್ತಲಾರಂಭಿಸಿತು. ಓ ಮೊಸರು ನಿನ್ನದಲ್ಲ, ನನ್ನದು ಎಂದು ಕೃಷ್ಣ ಹೇಳುತ್ತಿರುವಂತೆ ಆಕೆಗೆ ಅನಿಸಿತು. ಕೃಷ್ಣ ಮಾತ್ರ ಏನೂ ಆಗಿಲ್ಲ ಎನ್ನುತ್ತಾ ಮುಗ್ಧ ನಗು ಸೂಸುತ್ತಾ ಕುಳಿತಿದ್ದ. ಈ ಮೊಸರಿನ ಕಥೆ ತಿಳಿಸುವ ಸಂದೇಶವೆಷ್ಟೋ!

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next