ಬ್ರಹ್ಮಾವರ ತಾಲೂಕಿನ ಕರ್ಜೆ ಗ್ರಾಮೀಣ ಪ್ರದೇಶ. ಕರ್ಜೆಯಲ್ಲಿರುವ ಮುಂಬಯಿ ಕೇಂದ್ರದ ಗ್ಲೋಬಲ್ ಮ್ಯೂಸಿಕ್ ಆ್ಯಂಡ್ ಆರ್ಟ್ಸ್ ಚಾರಿಟೇಬಲ್ ಟ್ರಸ್ಟ್‌ನ ಗ್ಲೋಬಲ್ ಮ್ಯೂಸಿಕ್ ಆ್ಯಂಡ್ ಆರ್ಟ್ಸ್ ವಿಲೇಜ್‌ನಲ್ಲಿ ಇತ್ತೀಚಿಗೆ ಇಹಲೋಕ ತ್ಯಜಿಸಿದ ಹಿರಿಯ ತಬ್ಲಾ ಕಲಾವಿದ ಪಾಂಗಾಳ ದಿನೇಶ್ ಶೆಣೈಯವರಿಗೆ ಅಶ್ರುತರ್ಪಣ ನೀಡಲು ಬಂದದ್ದು ಒಂದೆರಡು ಮಂದಿ ಕಲಾವಿದರಲ್ಲ, ದೂರದ ಮುಂಬಯಿ, ಪುಣೆ, ಗೋವ, ಬೆಂಗಳೂರು ಮೊದಲಾದೆಡೆಗಳ ಪ್ರಸಿದ್ಧ 17 ಕಲಾವಿದರು.
ಕಲಾ ಕೋಸ್ಟ್ ಮುಂಬಯಿಯನ್ನು ಕೇಂದ್ರವಾರಿಗಿಸಿಕೊಂಡು ವಿವಿಧೆಡೆಗಳಲ್ಲಿ ಸಂಗೀತ ಚಟುವಟಿಕೆಗಳನ್ನು ಪ್ರಸರಿಸುವ ಆಂದೋಲನವನ್ನು ನಡೆಸುತ್ತಿದೆ. ದೇಶದ ಐದು ಶ್ರೇಷ್ಠ ಹಾರ್ಮೋನಿಯಂ ಕಲಾವಿದರಲ್ಲಿ ಒಬ್ಬರಾದ ಪಂಡಿತ್ ಭೀಮ್‌ಸೇನ್ ಜೋಷಿಯವರಿಗೂ ಸಾಥ್ ನೀಡಿದ್ದ ಕರ್ನಾಟಕ ಕರಾವಳಿ ಮೂಲದ ಸುಧೀರ್ ನಾಯಕ್ ಇದರಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದಾರೆ. ಇವರ ಮಾತಿನಂತೆ ನಿಃಶುಲ್ಕವಾಗಿ ಬಂದು ಸಂಗೀತದ ಮೂಲಕ ಬೆಳಗ್ಗೆ 10 ಗಂಟೆಯಿಂದ 7 ಗಂಟೆವರೆಗೆ ಪ್ರತಿಯೊಬ್ಬರೂ 40 ನಿಮಿಷಗಳಂತೆ ಅಗಲಿದ ಕಲಾವಿದನಿಗೆ ಫೆ. 22 ಮತ್ತು 23ರಂದು ಶ್ರದ್ಧಾಂಜಲಿ ಸಲ್ಲಿಸಿದರು.
ಹೆಸರಾಂತ ಯುವ ಕಲಾವಿದರಾದ ವಿಶಾಲ್ ಮೊಘೆ, ಗಂಧರ್ ದೇಶಪಾಂಡೆ, ಋತುಜಾ ಲಾಡ್, ಅಭಿಷೇಕ್ ಕಾತೆ, ಗಾಯತ್ರಿ ಗಾಯಕ್‌ವಾಡ್, ಮಾನಸ್ ವಿಶ್ವರೂಪ, ಬಾಗೆಶ್ರೀ ಪಂಚಾಲೆ, ಆದಿತ್ಯ ಮೋಡಕ್, ರಮಾಕಾಂತ ಗಾಯಕ್‌ವಾಡ್, ಆದಿತ್ಯ ಖಂಡ್ವೆ, ಹರ್ಷಲ್ ಕತ್‌ದರೆ, ಸ್ವಪ್ನಿಲ್ ಗೋರೆ, ಗುರುದತ್ ಕೃಷ್ಣಮೂರ್ತಿ, ಪ್ರಸಾದ್ ಗವಾಸ್, ಗೋಪಾಲ ಪ್ರಭು, ಸುಧೀರ್ ಭಕ್ತ, ಸುಧೀರ್ ನಾಯಕ್ ಮೊದಲಾದವರು ಮುಂಬಯಿ ಯಿಂದ ಬಂದು ವಿವಿಧ ಪ್ರಕಾರಗಳ ಅದ್ಭುತ ಸಂಗೀತ ಪ್ರತಿಭೆಯನ್ನು ಪ್ರಸ್ತುತಪಡಿಸಿದರು. ಇವರಲ್ಲಿ 9 ಮಂದಿ ಹಾಡುಗಾರಿಕೆ, ನಾಲ್ವರು ಹಾರ್ಮೋನಿಯಂ ಕಲಾವಿದರು, ಮೂವರು ತಬ್ಲಾ ವಾದಕರು, ಒಬ್ಬರು ಪಕ್ವಾದ್, ಒಬ್ಬರು ಬಾನ್ಸುರಿವಾದಕರು. ಸುಧೀರ್ ನಾಯಕ್ ಮತ್ತು ಸುಧೀರ್ ಭಕ್ತರು ಕರಾವಳಿ ಮೂಲದವರಾಗಿ ಮುಂಬಯಿ ಯಲ್ಲಿ ಸಂಗೀತ ಜಯಭೇರಿ ಬಾರಿಸುತ್ತಿರುವವರು.
ಮಹಾಬಲೇಶ್ವರ ಭಾಗವತ್, ರವಿಕಿರಣ್ ಮಣಿಪಾಲ, ಚೈತನ್ಯ ಭಟ್, ಕಾರ್ತಿಕ್ ಭಟ್, ವಿಭಾ ನಾಯಕ್, ನಂದಿತಾ ಪೈ, ಶ್ರವಣ ಪೈ, ಗುರುದಾಸ ಶೆಣೈ, ದಯಾಕರ ಭಟ್ (ಹಾಡುಗಾರರು), ರಫೀಕ್ ಖಾನ್ (ಸಿತಾರ್ ವಾದಕರು), ಶಂಕರ ಶೆಣೈ, ಪ್ರಸಾದ ಕಾಮತ್, ಶ್ರೀಧರ ಭಟ್ (ಹಾರ್ಮೋನಿಯಂ), ಶಶಿಕಿರಣ್ ರಾವ್ (ಹಾರ್ಮೋನಿಯಂ ಮತ್ತು ತಬ್ಲಾ), ವಿಘ್ನೇಶ ಕಾಮತ್, ಭಾರವಿ ದೇರಾಜೆ, ರಾಘವೇಂದ್ರ ಭಟ್, ಶ್ರೀವತ್ಸ ಶರ್ಮ, ಜಯಂತ ಐತಾಳ್ (ತಬ್ಲಾ) ಮೊದಲಾದ ಸ್ಥಳೀಯ ಕಲಾವಿದರೂ ತಮ್ಮ ಕಲಾಪ್ರತಿಭೆಯನ್ನು ಸಮರ್ಪಿಸಿದರು.
ಹೆಸರಾಂತ ಕಲಾವಿದರೊಬ್ಬರು ಅಗಲಿದಾಗ ಎಷ್ಟೋ ದೂರದ ಪ್ರಸಿದ್ಧ ಕಲಾವಿದರು ಬಂದು ಸಂಗೀತ, ಸಂಗೀತ ಸಾಧನಗಳ ಮೂಲಕ ಅಶ್ರುತರ್ಪಣ ಸಲ್ಲಿಸುವುದು ಬಾಂಧವ್ಯದ ಉತ್ತುಂಗ ಸ್ಥಿತಿ ಎಂದು ಬಣ್ಣಿಸಬಹುದಾದರೆ, ಇಷ್ಟೊಂದು ಕಲಾದಿಗ್ಗಜರು ಎರಡು ದಿನಗಳಿದ್ದು ಕಲಾ ಸೇವೆಯನ್ನು ಉಚಿತವಾಗಿ ಸಮರ್ಪಿಸಿದರೂ ಕರಾವಳಿಯ ಕಲಾಸಕ್ತರ ಸಂಖ್ಯೆ ನಿರಾಶಾದಾಯಕವಾಗಿತ್ತು ಎನ್ನುವುದನ್ನು ಹೇಗೆ ಬಣ್ಣಿಸಬಹುದು?
ಮಟಪಾಡಿ ಕುಮಾರಸ್ವಾಮಿ