Advertisement

ಅಶೋಕ್‌ ವಿರುದ್ಧ ಕಾಂಗ್ರೆಸ್‌, ಜೆಡಿಎಸ್‌ ಕಲಿಗಳು ರೆಡಿ

11:05 AM Apr 08, 2023 | Team Udayavani |

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಸೃಷ್ಟಿಯಾದ ವರ್ಷದಿಂದಲೂ “ಕಮಲ’ ಪಾಳಯದ ಭದ್ರಕೋಟೆಯಾಗಿದ್ದು, ಈಗಾಗಲೇ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಕಂದಾಯ ಸಚಿವ ಆರ್‌.ಅಶೋಕ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದೆಂದು ಪರಿಗಣಿಸಲ್ಪಟ್ಟ ಪದ್ಮನಾಭನಗರ ಪ್ರಶಾಂತ ಜೀವನ ಪದ್ಧತಿಯ ಪ್ರದೇಶವಾಗಿದೆ.

Advertisement

2008ರ ಪುನರ್‌ ವಿಂಗಡಣೆಯ ಬಳಿಕ ಆರ್‌.ಅಶೋಕ್‌ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಒಕ್ಕಲಿಗ, ಬ್ರಾಹ್ಮಣ ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದ ಒಂದೆರಡು ಭಾಗದಲ್ಲಿ ಮಾತ್ರ ಮುಸ್ಲಿಂ ಬಾಹುಳ್ಯವಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್‌ ಕಂಬಾರ, ಹತ್ತಾರು ಚಿತ್ರನಟರು ಸೇರಿದಂತೆ ಪ್ರತಿಷ್ಠಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪದ್ಮನಾಭನಗರ ಸುಸಜ್ಜಿತ ಬಡಾವಣೆಗಳು, ಸ್ವತ್ಛ ಉದ್ಯಾನವನಗಳು, ಮೇಲ್ಮಧ್ಯಮ ವರ್ಗ ಹೆಚ್ಚಾಗಿರುವ ವಸತಿ ಸಮುಚ್ಚಯಗಳು, ಗುಣಮಟ್ಟದ ಶಾಲೆಗಳು, ರಸ್ತೆ, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಎಲ್ಲ ರೀತಿಯಿಂದಲೂ ಅತ್ಯುತ್ತಮವಾದ ನಾಗರಿಕ ಸೌಲಭ್ಯವನ್ನು ಹೊಂದಿದೆ.

ವರ್ಷದಿಂದ ವರ್ಷಕ್ಕೆ ಮತಗಳಿಕೆಯ ಪ್ರಮಾಣದಲ್ಲಿ ಹೆಚ್ಚಳವನ್ನೇ ಕಾಣುತ್ತಿರುವ ಆರ್‌.ಅಶೋಕ್‌ ಕ್ಷೇತ್ರದಲ್ಲಿ ಜಾತಿ, ಮತ, ಭಾಷೆಯ ದೃಷ್ಟಿಯಿಂದ ಯಾವುದೇ ವಿವಾದ ಸೃಷ್ಟಿಯಾಗದಂತೆ ನೋಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸಿದ ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಉದ್ಯಾನವನಗಳನ್ನು ನಿರ್ಮಿಸುವ ಮೂಲಕ ವಿದ್ಯಾವಂತ ಮತದಾರ ವರ್ಗದಲ್ಲಿ ಸದಭಿಪ್ರಾಯ ಮೂಡಿಸಿಕೊಂಡಿದ್ದಾರೆ. ಕಳೆದ ವರ್ಷ ನಿರ್ಮಾಣಗೊಂಡ ಜನರಲ್‌ ಬಿಪಿನ್‌ ರಾವತ್‌ ಉದ್ಯಾನವನ ಇದಕ್ಕೊಂದು ಉದಾಹರಣೆ. ಕ್ಷೇತ್ರದಲ್ಲಿ ಕಾನೂನು-ಸುವ್ಯವಸ್ಥೆ ಸಮರ್ಪಕವಾಗಿದೆಯಾದರೂ ಕೆಲವು ವಾರ್ಡ್‌ಗಳಲ್ಲಿ “ಪುಂಡರ ಗುಂಪು’ ಸೃಷ್ಟಿಸುವ ಬೈಕ್‌ ರಂಪಾಟ ಹಾಗೂ ಪೆಟ್ಟಿಗೆ ಅಂಗಡಿ ಸಭೆಗಳು ನಾಗರಿಕರ ಬೇಸರಕ್ಕೆ ಕಾರಣವಾಗಿದೆ.

ಬೋರ್‌ವೆಲ್‌ ನಿರ್ಮಾಣ ವಿಚಾರದಲ್ಲಿ ತೋರುವ ಅತಿ ಉದಾರತೆ ಭವಿಷ್ಯದಲ್ಲಿ ಅಂತರ್ಜಲ ಸಮಸ್ಯೆಗೆ ಕಾರಣವಾಗಬಹುದೆಂಬ ಆತಂಕ ನಾಗರಿಕರಲ್ಲಿದೆ. ಅನ್ಯ ಕ್ಷೇತ್ರಗಳಲ್ಲಿ ಮಹತ್ವ ಎನಿಸುವ ಚುನಾವಣಾ ವಿಚಾರಗಳು ಪದ್ಮನಾಭನಗರದಲ್ಲಿ ಗೌಣ. ಆದರೆ ನಾಗರಿಕ ಸಮಸ್ಯೆ (ಸಿವಿಕ್‌ ಪ್ರಾಬ್ಲೆಮ್‌ ) ಮಾತ್ರ ಪ್ರತಿ ವರ್ಷವೂ ಗಣನೆಗೆ ಬರುತ್ತದೆ. ಈ ಬಾರಿ ಕಾಂಗ್ರೆಸ್‌ನಿಂದ ವಿ.ರಘುನಾಥ ನಾಯ್ಡು ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಜೆಡಿಎಸ್‌ನಿಂದ ಚಿತ್ರ ನಿರ್ಮಾಪಕ ಕೆ.ಮಂಜು ಕಣಕ್ಕಿಳಿಯುವ ಸಾಧ್ಯತೆ ಇದೆ.

ಪ್ರತಿ ಬಾರಿ ಪ್ರಯೋಗ: ಇದುವರೆಗೂ ಅಶೋಕ್‌ಗೆ “ತುರುಸಿನ ಸ್ಪರ್ಧೆ’ ನೀಡುವ ಅಭ್ಯರ್ಥಿಗಳು ಕಣಕ್ಕೆ ಇಳಿದಿಲ್ಲ ಎಂಬುದೇ ಮತದಾರರ ಅಭಿಪ್ರಾಯ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅವಧಿಗೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿವೆ. 2008ರಲ್ಲಿ ಗುರಪ್ಪ ನಾಯ್ಡು, 2013ರಲ್ಲಿ ಚೇತನಗೌಡ, 2018 ರಲ್ಲಿ ಎಂ.ಶ್ರೀನಿವಾಸ್‌ ಸ್ಪರ್ಧಿಸಿದ್ದರೆ ಈ ಬಾರಿ ರಘುನಾಥ ನಾಯ್ಡು ಅವರನ್ನು ಕಣಕ್ಕಿಳಿಸಲಾಗಿದೆ. 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಕಬಡ್ಡಿ ಬಾಬು ಮಾಧ್ಯಮಗಳಲ್ಲಿ ಸದ್ದು ಮಾಡಿದ್ದರೂ ಫ‌ಲಿತಾಂಶ ಬಂದಾಗ ಅಶೋಕ್‌ ಗಳಿಸಿದ ಅರ್ಧದಷ್ಟು ಮತ ಪಡೆಯುವುದಕ್ಕಷ್ಟೇ ಶಕ್ತರಾಗಿದ್ದರು.

Advertisement

ಪದ್ಮನಾಭನಗರ: ಕಳೆದ ಬಾರಿ ಏನಾಗಿತ್ತು?: 2018ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಆರ್‌.ಅಶೋಕ್‌ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 2,78, 223 ಮತದಾರರ ಪೈಕಿ 161,608 ಅಂದರೆ ಶೇ.58.09ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಪೈಕಿ ಅಶೋಕ್‌ 77,868 ಮತ ಗಳಿಸಿದರೆ ಜೆಡಿಎಸ್‌ನ ವಿ.ಕೆ.ಗೋಪಾಲ 45,702 ಮತ ಪಡೆದಿದ್ದರು. ಕಾಂಗ್ರೆಸ್‌ನ ಎಂ.ಶ್ರೀನಿವಾಸ್‌ 33, 400 ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ವಾರ್ಡ್‌ಗಳೆಷ್ಟು?: ಈ ಕ್ಷೇತ್ರದಲ್ಲಿ ಒಟ್ಟು 8 ವಾರ್ಡ್‌ಗಳಿವೆ. ಯಡಿಯೂರು, ಕರಿಸಂದ್ರ, ಬನಶಂಕರಿ ಟೆಂಪಲ್‌, ಗಣೇಶ್‌ ಮಂದಿರ, ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್‌, ಚಿಕ್ಕಲಸಂದ್ರ ಹಾಗೂ ಹೊಸಕೆರೆಹಳ್ಳಿ ವಾರ್ಡ್‌ಗಳು ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ.

– ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next