ನವದೆಹಲಿ: ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿದಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತದಾರ ಮನ್ನಣೆ ನೀಡಿದ್ದಾನೆ. ಏತನ್ಮಧ್ಯೆ ಮಾಜಿ ಮುಖ್ಯಮಂತ್ರಿಯಾಗಿರುವ ರಾಜೇ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಯಾರು ಸಿಎಂ ಪಟ್ಟ ಅಲಂಕರಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.
ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಟೀಮ್ ನ ಸಚಿನ್ ಪೈಲಟ್ ಹಾಗೂ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಯನ್ನು ಎದುರಿಸಿತ್ತು. ಈ ನಿಟ್ಟಿನಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಂದು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆಗೆ ಚುನಾವಣಾ ಪ್ರಚಾರದ ವೇಳೆ ಯಾವುದೇ ಪ್ರತಿಕ್ರಿಯೆ ನೀಡದೆ ನುಣುಚಿಕೊಂಡಿತ್ತು. ಈ ಸಂದರ್ಭದಲ್ಲಿ ಮುಂದಿನ ಸಿಎಂ ಯಾರು ಎಂಬುದನ್ನು ಪಕ್ಷದ ಶಾಸಕರು ಮತ್ತು ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಗೆಹ್ಲೋಟ್ ಮತ್ತು ಪೈಲಟ್ ಇಬ್ಬರೂ ಒಂದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಅಶೋಕ್ ಗೆಹ್ಲೋಟ್ ಹಿರಿಯ ಮುಖಂಡ..ಅಷ್ಟೇ ಅಲ್ಲ ರಾಜ್ಯದಲ್ಲಿ ಪ್ರಭಾವಿ ನಾಯಕ ಕೂಡಾ ಹೌದು. ಗೆಹ್ಲೋಟ್ ಗೆ ಅಪಾರ ಬೆಂಬಲಿಗರ ಪಡೆಯೂ ಇದೆ. ಪೈಲಟ್ ಯುವ ನಾಯಕ. ಈ ನಿಟ್ಟಿನಲ್ಲಿ ಸಿಎಂ ಆಯ್ಕೆ ಕಾಂಗ್ರೆಸ್ ಪಕ್ಷಕ್ಕೆ ಸುಲಭದ ತುತ್ತಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ 101 ಸ್ಥಾನ ಪಡೆದು ಸರಳ ಬಹುಮತದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ. ಬಿಜೆಪಿ 73, ಬಿಎಸ್ ಪಿ 05 ಇತರರು 20 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.