ಲಂಡನ್: ವಿಶ್ವದ ಅಗ್ರಮಾನ್ಯ ಆಟಗಾರ್ತಿ, ಒಂದು ಕಾಲದ ಕ್ರಿಕೆಟರ್ ಆಗಿದ್ದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮೊದಲ ಬಾರಿಗೆ ವಿಂಬಲ್ಡನ್ ಕಿರೀಟವೇರಿಸಿಕೊಂಡು ತಮ್ಮ ಬಹು ವರ್ಷಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾರೆ. ಶನಿವಾರ ನಡೆದ 3 ಸೆಟ್‌ಗಳ ಕಾದಾಟದಲ್ಲಿ ಅವರು ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 6-3, 6-7 (4-7), 6-3 ಅಂತರದ ಗೆಲುವು ಸಾಧಿಸಿದರು.
ಇಬ್ಬರೂ ಮೊದಲ ಬಾರಿಗೆ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ಹೋರಾಡಲಿಳಿದಿದ್ದರು. ಮೊದಲ ಸೆಟ್‌ನಲ್ಲಿ ಬಾರ್ಟಿ ಉತ್ತಮ ಪ್ರದರ್ಶನ ನೀಡಿದರು. ಪ್ಲಿಸ್ಕೋವಾ ತುಸು ಧೈರ್ಯಗುಂದಿದಂತಿತ್ತು. ಆದರೆ ದ್ವಿತೀಯ ಸೆಟ್‌ನಲ್ಲಿ ತಿರುಗೇಟು ನೀಡಿದರು. ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಬಾರ್ಟಿ ಕೈ ಮೇಲಾಯಿತು.
ಇದು ಆ್ಯಶ್ಲಿ ಬಾರ್ಟಿಗೆ ಒಲಿದ ದ್ವಿತೀಯ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ. 2019ರ ಯು.ಎಸ್. ಓಪನ್ ಚಾಂಪಿಯನ್ ಎನಿಸಿ ಕೊಂಡದ್ದು ಇವರ ಹೆಗ್ಗಳಿಕೆ. ಜತೆಗೆ 2011ರ ವಿಂಬಲ್ಡನ್ ಜೂನಿಯರ್ ಚಾಂಪಿಯನ್ ಕೂಡ ಆಗಿದ್ದಾರೆ. ಜತೆಗೆ 1980ರ ಬಳಿಕ ವಿಂಬಲ್ಡನ್ ಗೆದ್ದ ಆಸ್ಟ್ರೇಲಿಯನ್ ಆಟಗಾರ್ತಿ ಎಂಬುದೂ ಬಾರ್ಟಿ ಪಾಲಿನ ಹೆಗ್ಗಳಿಕೆ. ಅಂದಿನ ಆಸೀಸ್ ಸಾಧಕಿ ಎವೋನ್ ಕಾವಿÉ.
ಟೆನಿಸ್-ಕ್ರಿಕೆಟ್-ಟೆನಿಸ್
ಆ್ಯಶ್ಲಿ ಬಾರ್ಟಿ ಒಂದು ಕಾಲದ ಕ್ರಿಕೆಟರ್ ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ಸಂಗತಿ. ಆಸ್ಟ್ರೇಲಿಯದ ವನಿತಾ ಬಿಗ್ ಬಾಶ್ ಲೀಗ್‌ನಲ್ಲಿ ಅವರು ಬ್ರಿಸ್ಬೇನ್ ಹೀಟ್ಸ್ ತಂಡವನ್ನು ಪ್ರತಿನಿಧಿಸಿದ್ದರು.
15ರ ಹರೆಯದಲ್ಲೇ ಬಾರ್ಟಿ ಟೆನಿಸ್‌ನಲ್ಲಿ ಗುರುತಿಸಿಕೊಂಡಿ ದ್ದರು. 2013ರಲ್ಲಿ ವಿಂಬಲ್ಡನ್ ಪದಾರ್ಪಣೆಗೈದು, ಮರುವರ್ಷವೇ ಕ್ರಿಕೆಟಿಗೆ ವಲಸೆ ಹೋದರು. ಬಳಿಕ ಮತ್ತೆ ಟೆನಿಸ್. ಡಬಲ್ಸ್ ಮೂಲಕ ಟೆನಿಸ್ ಆರಂಭಿಸಿ 2018ರಲ್ಲಿ ಯುಎಸ್ ಓಪನ್ ಪ್ರಶಸ್ತಿಯನ್ನೂ ಎತ್ತಿದ್ದರು.