Advertisement
ಪಂದ್ಯದ ಮೊದಲ ದಿನ ಮಾರ್ನಸ್ ಲಬುಶೇನ್ ಮತ್ತು ಮಿಚೆಲ್ ಮಾರ್ಷ್ ಅವರ ಅರ್ಧಶತಕದಿಂದಾಗಿ ಆಸ್ಟ್ರೇಲಿಯ ತಂಡವು 8 ವಿಕೆಟಿಗೆ 299 ರನ್ ಪೇರಿಸಿತ್ತು. ದ್ವಿತೀಯ ದಿನ ಆಟ ಮುಂದುವರಿಸಿದ ಪ್ರವಾಸಿ ತಂಡ 317 ರನ್ ಗಳಿಸಿ ಆಲೌಟಾಯಿತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡವು ಟೀ ವಿರಾಮದ ವೇಳೆಗೆ ಎರಡು ವಿಕೆಟಿಗೆ 239 ರನ್ ಗಳಿಸಿ ಆಡುತ್ತಿದೆ. ಆರಂಭಿಕ ಆಟಗಾರ ಜಾಕ್ ಕ್ರಾಲಿ ಅವರ ಸೊಗಸಾದ ಶತಕ ಮತ್ತು ಅವರು ಮೊಯಿನ್ ಅಲಿ ಅವರೊಂದಿಗೆ ದ್ವಿತೀಯ ವಿಕೆಟಿಗೆ ಸೇರಿಸಿದ 121 ರನ್ ನೆರವಿನಿಂದ ಇಂಗ್ಲೆಂಡ್ ಉತ್ತಮ ಮೊತ್ತ ಪೇರಿಸುವತ್ತ ಹೊರಟಿದೆ. ಮೊಯಿನ್ ಅಲಿ 54 ರನ್ ಗಳಿಸಿ ಔಟಾದರೆ ಕ್ರಾಲಿ 132 ರನ್ ಗಳಿಸಿ ಆಡುತ್ತಿದ್ದಾರೆ. ಬಿರುಸಿನ ಆಟದ ಪ್ರದರ್ಶನ ನೀಡಿದ ಅವರು ಕೇವಲ 95 ಎಸೆತಗಳಿಂದ ಶತಕ ಪೂರ್ತಿಗೊಳಿಸಿದ್ದು 12 ಬೌಂಡರಿ ಮತ್ತು 1 ಸಿಕ್ಸರ್ ಹೊಡೆದಿದ್ದಾರೆ. ಅವರೊಂದಿಗೆ ಜೋ ರೂಟ್ 44 ರನ್ನುಗಳೊಂದಿಗೆ ಆಡುತ್ತಿದ್ದಾರೆ. ಅವರಿಬ್ಬರು ಈಗಾಗಲೇ ಮುರಿಯದ ಮೂರನೇ ವಿಕೆಟಿಗೆ 86 ಎಸೆತಗಳಿಂದ 109 ರನ್ ಪೇರಿಸಿದ್ದಾರೆ. ಎಚ್ಚರಿಕೆಯ ಆಟ
ಕ್ರಿಸ್ ವೋಕ್ಸ್ ಸಹಿತ ಇಂಗ್ಲೆಂಡ್ ದಾಳಿಯನ್ನು ತಾಳ್ಮೆಯಿಂದ ಎದುರಿಸಿದ ಆಸ್ಟ್ರೇಲಿಯ ಆಟಗಾರರು ಎಚ್ಚರಿಕೆಯಿಂದ ಆಡಿ ರನ್ ಪೇರಿಸತೊಡಗಿದರು. ಲಬುಶೇನ್, ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್ ಮತ್ತು ಸ್ಟಾರ್ಕ್ ಅವರ ಉಪಯುಕ್ತ ಆಟದಿಂದಾಗಿ ಆಸ್ಟ್ರೇಲಿಯ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಯಿತು. ಲಬುಶೇನ್ ಮತ್ತು ಮಾರ್ಷ್ ಅರ್ಧಶತಕ ಹೊಡೆದರು. ಬಿಗು ದಾಳಿ ಸಂಘಟಿಸಿದ ಕ್ರಿಸ್ ವೋಕ್ಸ್ 62 ರನ್ನಿಗೆ 5 ವಿಕೆಟ್ ಉರುಳಿಸಿದರೆ ಬ್ರಾಡ್ 2 ವಿಕೆಟ್ ಪಡೆದರು.