ಮ್ಯಾಂಚೆಸ್ಟರ್: ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆತಿ ಥೇಯ ಇಂಗ್ಲೆಂಡ್ ತಂಡವು 592 ರನ್ ಗಳಿಸಿ ಆಲೌ ಟಾಗಿದೆ. ಈ ಮೂಲಕ ಆತಿಥೇಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 275 ರನ್ ಮುನ್ನಡೆ ಪಡೆದಿದೆ. ಆರಂಭಿಕ ಆಟಗಾರ ಜಾಕ್ ಕ್ರಾಲಿ ಅವರ ಬಿರುಸಿನ 189 ರನ್, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ ಮತ್ತು ಜಾನಿ ಬೇರ್‌ಸ್ಟೋ ಅವರ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು ಬೃಹತ್ ಮೊತ್ತ ಗಳಿಸುವಂತಾಯಿತು. ಶತಕ ದಾಖಲಿಸುವ ಉತ್ಸಾಹದಲ್ಲಿದ್ದ ಬೇರ್‌ಸ್ಟೋ 99 ರನ್ ಗಳಿಸಿ ಔಟಾಗದೇ ಉಳಿದು ನಿರಾಶೆ ಅನುಭವಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಆಸ್ಟ್ರೇಲಿಯ ತಂಡವು ಮೂರನೇ ದಿನದಾಟದಲ್ಲಿ ಆಡುತ್ತಿದ್ದು ಯಾವುದೇ ವಿಕೆಟ್ ಕಳೆದುಕೊಳ್ಳದೇ 14 ರನ್ ಗಳಿಸಿದೆ. ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖ್ವಾಜಾ ಆಡುತ್ತಿದ್ದಾರೆ.
ಜಾಕ್ ಕ್ರಾಲಿ ಅವರ ಸಾಹಸದ 189 ರನ್ ನೆರವಿನಿಂದ ಇಂಗ್ಲೆಂಡ್ ತಂಡವು ಎರಡನೇ ದಿನದಾ ಟದ ಅಂತ್ಯಕ್ಕೆ 4 ವಿಕೆಟಿಗೆ 384 ರನ್ ಗಳಿಸಿತ್ತು. ಕ್ರಾಲಿ ಮತ್ತು ಜೋ ರೂಟ್‌ಇ ಮೂರನೇ ವಿಕೆಟಿಗೆ 206 ರನ್ ಪೇರಿಸಿದ್ದರು. ಈ ಹಂತದಲ್ಲಿ ಕ್ರಾಲಿ ಔಟಾದರು. ಅವರು 182 ಎಸೆತ ಎದುರಿಸಿದ್ದು 21 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು.
ದ್ವಿತೀಯ ದಿನ ಅಜೇಯರಾಗಿ ಉಳಿದಿದ್ದ ಬ್ರೂಕ್ಸ್ ಮತ್ತು ಸ್ಟೋಕ್ಸ್ ಮೂರನೇ ದಿನ ಆಟ ಮುಂದುವರಿಸಿ ಐದನೇ ವಿಕೆಟಿಗೆ 86 ರನ್ನುಗಳ ಜತೆಯಾಟ ನಡೆಸಿದರು. ಈ ಹಂತದಲ್ಲಿ 51 ರನ್ ಗಳಿಸಿದ ಸ್ಟೋಕ್ಸ್ ಔಟಾದರು. ಕೊನೆ ಹಂತದಲ್ಲಿ ಬೇರ್‌ಸ್ಟೋ ಬಿರುಸಿನ ಆಟ ಆಡಿದ್ದರಿಂದ ಇಂಗ್ಲೆಂಡಿನ ಮೊತ್ತ 590ರ ಗಡಿ ದಾಟಿತು. ಅವರು ಶತಕ ದಾಖಲಿಸುವ ಉತ್ಸಾಹದಲ್ಲಿದ್ದರು. ಆದರೆ ಇನ್ನೋರ್ವ ಆಟಗಾರ ಆ್ಯಂಡರ್ಸನ್ ಅಂತಿಮವಾಗಿ ಔಟ್ ಆಗಿದ್ದರಿಂದ ಬೇರ್‌ಸ್ಟೋ 99 ರನ್ನಿಗೆ ಔಟಾಗದೇ ಉಳಿದರು. ಶತಕದ ಸಂಭ್ರಮ ಆಚರಿಸಲು ಅವರಿಂದ ಸಾಧ್ಯವಾಗಲಿಲ್ಲ.