Advertisement

ಇಂದಿನಿಂದ ಪ್ರತಿಷ್ಠಿತ ಆ್ಯಶಸ್‌ ಸರಣಿ: ರೂಟ್‌ ಬ್ಯಾಟಿಂಗ್‌ ವರ್ಸಸ್‌ ಕಮಿನ್ಸ್‌ ಬೌಲಿಂಗ್‌

11:36 PM Dec 07, 2021 | Team Udayavani |

ಬ್ರಿಸ್ಬೇನ್‌: ಒಂದೇ ಸಾಲಲ್ಲಿ ಹೇಳುವುದಾದರೆ, ಈ ಬಾರಿಯ ಆ್ಯಶಸ್‌ ಎನ್ನುವುದು ಪ್ಯಾಟ್‌ ಕಮಿನ್ಸ್‌ ಅವರ ಬೌಲಿಂಗ್‌ ಹಾಗೂ ಜೋ ರೂಟ್‌ ನಡುವಿನ ಬ್ಯಾಟಿಂಗ್‌ ಕಾಳಗವಾಗಲಿದೆ. ಬುಧವಾರ ಬ್ರಿಸ್ಬೇನ್‌ನ “ಗಬ್ಟಾ’ದಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಇಂಗ್ಲೆಂಡಿನ ವಿಕೆಟ್‌ ಕೀಪರ್‌ ಜಾಸ್‌ ಬಟ್ಲರ್‌ ಆ್ಯಶಸ್‌ ಸರಣಿಯನ್ನು ಬಣ್ಣಿಸಿದ್ದು ಹೀಗೆ.

Advertisement

ಅಂಡರ್‌ ಡಾಗ್ಸ್‌ ಎಂದು ಗುರುತಿಸ ಲ್ಪಡುವ ಇಂಗ್ಲೆಂಡ್‌ “ಬ್ಯಾಟಿಂಗ್‌ ಕ್ಯಾಪ್ಟನ್‌’ನನ್ನು ಹೊಂದಿದ್ದರೆ, ಆತಿಥೇಯ ಆಸ್ಟ್ರೇಲಿಯ “ಬೌಲಿಂಗ್‌ ಕ್ಯಾಪ್ಟನ್‌’ನನ್ನು ಹೊಂದಿದೆ. ರೂಟ್‌ ಈಗಾಗಲೇ ನಾಯಕತ್ವವನ್ನು ಅರಗಿಸಿಕೊಂಡು ಬಹು ದೂರ ಸಾಗಿ ಬಂದರೆ, ಕಮಿನ್ಸ್‌ಗೆ ಇದು ನಾಯಕತ್ವದ ಮೊದಲ ಅನುಭವ. ಆಕಸ್ಮಿಕ ಸನ್ನಿವೇಶವೊಂದರಲ್ಲಿ ಅವರು ಕಾಂಗರೂ ತಂಡದ ಚುಕ್ಕಾಣಿ ಹಿಡಿದಿದ್ದಾರೆ.

ಆಸೀಸ್‌ ತವರಲ್ಲಿ ಬಲಿಷ್ಠ
ಆಸ್ಟ್ರೇಲಿಯ ತವರಲ್ಲಿ ಯಾವತ್ತೂ ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ ಮೊದಲ ಸಲ ಟಿ20 ವಿಶ್ವಕಪ್‌ ಗೆದ್ದ ಸಂಭ್ರಮವೂ ಇಲ್ಲಿ ಸಾಥ್‌ ನೀಡ ಲಿದೆ. ಆಟಗಾರರ ಫಾರ್ಮ್ ಎಷ್ಟೇ ಕಳಪೆಯಾಗಿದ್ದರೂ ಎಲ್ಲರೂ ಸರಿಯಾದ ಹೊತ್ತಿಗೆ ಲಯ ಕಂಡುಕೊಳ್ಳುವುದು ಆಸ್ಟ್ರೇಲಿಯನ್ನರ ವೈಶಿಷ್ಟé. ಇದಕ್ಕೆ ಡೇವಿಡ್‌ ವಾರ್ನರ್‌ಗಿಂತ ಮಿಗಿಲಾದ ನಿದರ್ಶನ ಬೇಕಿಲ್ಲ. ಐಪಿಎಲ್‌ ವೇಳೆ ಎಸ್‌ಆರ್‌ಎಚ್‌ ತಂಡದಿಂದಲೇ ಬೇರ್ಪಟ್ಟ ಅವರು ಟಿ20 ವಿಶ್ವಕಪ್‌ ಗೆಲುವಿನ ರೂವಾರಿಯಾಗಿ ಮೂಡಿಬಂದುದನ್ನು ಮರೆಯಲಾದೀತೇ!

ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!

ಇಂಗ್ಲೆಂಡ್‌ ಬಲಾಡ್ಯ ಆಟಗಾರರನ್ನು ಹೊಂದಿರುವ ತಂಡ. ನಾಯಕ ರೂಟ್‌ 2021ರ “ಟಾಪ್‌ ಸ್ಕೋರರ್‌’ ಎಂಬ ಹಿರಿಮೆಯೊಂದಿಗೆ ಕಾಂಗರೂ ನಾಡಿಗೆ ಆಗಮಿಸಿದ್ದಾರೆ. ಈ ವರ್ಷದ 12 ಟೆಸ್ಟ್‌ ಗಳಲ್ಲಿ 1,455 ರನ್‌ ಪೇರಿಸಿದ್ದಾರೆ. ಸ್ಟೋಕ್ಸ್‌ ಮರಳಿ ತಂಡ ಸೇರಿಕೊಂಡಿದ್ದಾರೆ. ಆದರೆ ಆ್ಯಂಡರ್ಸನ್‌ ಆಡದಿರುವುದೊಂದು ಹಿನ್ನಡೆ.

Advertisement

10 ಟೆಸ್ಟ್‌, 9 ಸೋಲು!
ಇಂಗ್ಲೆಂಡ್‌ 2010-11ರ ಬಳಿಕ ಆಸ್ಟ್ರೇಲಿಯ ನೆಲದಲ್ಲಿ ಆ್ಯಶಸ್‌ ಗೆದ್ದಿಲ್ಲ. ಕಳೆದೆರಡು ಪ್ರವಾಸಗಳಲ್ಲಂತೂ ಶೋಚನೀಯ ಪ್ರದರ್ಶನ ನೀಡಿತ್ತು. 2013-14ರಲ್ಲಿ 5-0 ವೈಟ್‌ವಾಶ್‌ ಅನುಭವಿಸಿದರೆ, 2017-18ರಲ್ಲಿ 4-0 ಸೋಲಿಗೆ ತುತ್ತಾಗಿತ್ತು. ಅರ್ಥಾತ್‌, ಆಸ್ಟ್ರೇಲಿಯದಲ್ಲಿ ಆಡಿದ ಕಳೆದ 10 ಟೆಸ್ಟ್‌ ಗಳಲ್ಲಿ ಇಂಗ್ಲೆಂಡ್‌ 9 ಸೋಲನುಭವಿಸಿದೆ. ಇದರಲ್ಲಿ ಕೊನೆಯ ಸರಣಿ ಆಘಾತ ರೂಟ್‌ ನಾಯಕತ್ವದಲ್ಲೇ ಎದುರಾಗಿತ್ತು!

ಇದಕ್ಕೆ ವ್ಯತಿರಿಕ್ತವೆಂಬಂತೆ, ಇಂಗ್ಲೆಂಡ್‌ ನಲ್ಲಿ ಆಡಲಾದ 2019ರ ಆ್ಯಶಸ್‌ ಸರಣಿಯನ್ನು ಆಸ್ಟ್ರೇಲಿಯ 2-2 ಅಂತರದಿಂದ ಮುಗಿಸುವಲ್ಲಿ ಯಶಸ್ವಿ ಯಾಗಿತ್ತು. ಆಗಲೂ ಇಂಗ್ಲೆಂಡ್‌ ಜೋ ರೂಟ್‌ ನಾಯಕತ್ವ ಹೊಂದಿತ್ತು. ಹೀಗಾಗಿ ರೂಟ್‌ ಪಾಲಿಗೆ 5 ಪಂದ್ಯಗಳ ಈ ಸರಣಿ ನಿಜವಾದ ಅಗ್ನಿಪರೀಕ್ಷೆ.

ಬ್ರಿಸ್ಬೇನ್‌ ದಾಖಲೆ
ಬ್ರಿಸ್ಬೇನ್‌ ಫ‌ಲಿತಾಂಶ ಕುರಿತು ಹೇಳು ವುದಾದರೆ, ಇಂಗ್ಲೆಂಡ್‌ 1946ರ ಬಳಿಕ ಇಲ್ಲಿ ಕೇವಲ 2 ಟೆಸ್ಟ್‌ ಗೆದ್ದಿದೆ. ಕೊನೆಯ ಗೆಲುವು ಒಲಿದದ್ದು 1986ರಲ್ಲಿ. ಆಸ್ಟ್ರೇಲಿಯ 1988ರ ಬಳಿಕ ಅಜೇಯ ಓಟ ದಾಖಲಿಸಿತಾದರೂ ಕಳೆದ ಸಲ ಭಾರತದ ವಿರುದ್ಧ ಮುಗ್ಗರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next