Advertisement

278 ರನ್‌ ಹಿನ್ನಡೆ; ಬೇರುಬಿಟ್ಟ ರೂಟ್‌-ಮಲಾನ್‌

12:08 AM Dec 11, 2021 | Team Udayavani |

ಬ್ರಿಸ್ಬೇನ್‌: 278 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ಹೋರಾಟವೊಂದನ್ನು ಜಾರಿಯಲ್ಲಿರಿಸಿದೆ. ವನ್‌ಡೌನ್‌ ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್‌ ಮತ್ತು ಜೋ ರೂಟ್‌ ಸೇರಿಕೊಂಡು ಮುರಿಯದ 3ನೇ ವಿಕೆಟಿಗೆ 159 ರನ್‌ ಜತೆಯಾಟ ನೀಡಿ ಬೇರುಬಿಟ್ಟಿದ್ದಾರೆ. ಆದರೂ ಪಂದ್ಯವಿನ್ನೂ ಆಸ್ಟ್ರೇಲಿಯದ ಹಿಡಿತದಲ್ಲೇ ಇದೆ.

Advertisement

ಇಂಗ್ಲೆಂಡಿನ 147 ರನ್ನುಗಳ ಅಲ್ಪ ಮೊತ್ತಕ್ಕೆ ಉತ್ತರವಾಗಿ ಆಸ್ಟ್ರೇಲಿಯ 3ನೇ ದಿನವಾದ ಶುಕ್ರವಾರ 425ರ ತನಕ ಇನ್ನಿಂಗ್ಸ್‌ ಬೆಳೆಸಿ 278 ರನ್ನುಗಳ ಬೃಹತ್‌ ಮುನ್ನಡೆ ಸಾಧಿಸಿತು. ಇಂಗ್ಲೆಂಡ್‌ ಆರಂಭಿಕರಿಬ್ಬರು 61 ರನ್‌ ಆಗುವಷ್ಟರಲ್ಲಿ ವಾಪಸಾದ ಬಳಿಕ ಮಲಾನ್‌ ಮತ್ತು ರೂಟ್‌ ಸೇರಿಕೊಂಡು ತಂಡಕ್ಕೆ ಬೇರೆ ಯಾವುದೇ ಹಾನಿಯಾಗದಂತೆ ನೋಡಿಕೊಂಡಿದ್ದಾರೆ. 2ಕ್ಕೆ 220 ರನ್‌ ಮಾಡಿ ದಿನದಾಟ ಮುಗಿಸಿದೆ.

ಆಂಗ್ಲರ ಪಡೆ ಇನ್ನೂ 58 ರನ್‌ ಹಿನ್ನಡೆಯಲ್ಲಿದೆ. ಶನಿವಾರ ದಿನವಿಡೀ ಕ್ರೀಸ್‌ ಆಕ್ರಮಿಸಿಕೊಂಡರಷ್ಟೇ ಇಂಗ್ಲೆಂಡ್‌ ಸೋಲಿನಿಂದ ಪಾರಾದೀತು. ಇವರಿಬ್ಬರ ಜತೆಗೆ ಸ್ಟೋಕ್ಸ್‌, ಪೋಪ್‌ ಮತ್ತು ಬಟ್ಲರ್‌ ಕೂಡ ಉತ್ತಮ ಪ್ರದರ್ಶನ ನೀಡಬೇಕಿದೆ.

ಡೇವಿಡ್‌ ಮಲಾನ್‌ 177 ಎಸೆತ ಎದುರಿಸಿದ್ದು, 80 ರನ್‌ ಮಾಡಿ ಆಡುತ್ತಿದ್ದಾರೆ. ರೂಟ್‌ 158 ಎಸೆತಗಳಿಂದ 86 ರನ್‌ ಬಾರಿಸಿದ್ದಾರೆ. ಇಬ್ಬರ ಬ್ಯಾಟಿನಿಂದಲೂ 10 ಬೌಂಡರಿ ಸಿಡಿದಿವೆ.

ಓಪನರ್‌ ರೋರಿ ಬರ್ನ್ಸ್ ಅವರ ಕಳಪೆ ಫಾರ್ಮ್ ಮತ್ತೆ ಮುಂದುವರಿಯಿತು. ಆ್ಯಶಸ್‌ ಸರಣಿಯ ಪ್ರಥಮ ಎಸೆತದಲ್ಲೇ ಔಟಾದ ಅವಮಾನಕ್ಕೆ ಸಿಲುಕಿದ ಅವರು ಕೇವಲ 13 ರನ್‌ ಮಾಡಿ ವಾಪಸಾದರು. 9ನೇ ಓವರ್‌ನಲ್ಲಿ ಕಮಿನ್ಸ್‌ ಈ ವಿಕೆಟ್‌ ಹಾರಿಸಿದರು. ಹಸೀಬ್‌ ಹಮೀದ್‌ 27 ರನ್‌ ಮಾಡಿದರು (4 ಬೌಂಡರಿ). ಈ ವಿಕೆಟ್‌ ಸ್ಟಾರ್ಕ್‌ ಬುಟ್ಟಿಗೆ ಬಿತ್ತು.

Advertisement

ಇದನ್ನೂ ಓದಿ:ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಖಾತೆಯಿಂದ 1.14 ಲಕ್ಷ ರೂ. ಮಾಯ!

ಟ್ರ್ಯಾವಿಸ್‌ ಹೆಡ್‌ 152
7 ವಿಕೆಟಿಗೆ 343 ರನ್‌ ಮಾಡಿದ್ದ ಆಸ್ಟ್ರೇಲಿಯ, 3ನೇ ದಿನದಾಟ ಮುಂದುವರಿಸಿ 82 ರನ್ನಿಗೆ ಉಳಿದ 3 ವಿಕೆಟ್‌ ಕಳೆದುಕೊಂಡಿತು. ಟ್ರ್ಯಾವಿಸ್‌ ಹೆಡ್‌ 152ರ ತನಕ ಬೆಳೆದರು. ಎದುರಿಸಿದ್ದು ಕೇವಲ 148 ಎಸೆತ. ಸಿಡಿಸಿದ್ದು 14 ಬೌಂಡರಿ ಮತ್ತು 4 ಸಿಕ್ಸರ್‌. ಮಾರ್ಕ್‌ ವುಡ್‌ ಎಸೆತದಲ್ಲಿ ಬೌಲ್ಡ್‌ ಆಗಿ ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು.
ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-147 ಮತ್ತು 2 ವಿಕೆಟಿಗೆ 220 (ರೂಟ್‌ ಬ್ಯಾಟಿಂಗ್‌ 86, ಮಲಾನ್‌ ಬ್ಯಾಟಿಂಗ್‌ 80). ಆಸ್ಟ್ರೇಲಿಯ-425 (ಹೆಡ್‌ 152, ವಾರ್ನರ್‌ 94, ಲಬುಶೇನ್‌ 74, ಸ್ಟಾರ್ಕ್‌ 35, ರಾಬಿನ್ಸನ್‌ 58ಕ್ಕೆ 3, ವುಡ್‌ 85ಕ್ಕೆ 3).

ಸಚಿನ್‌, ಗಾವಸ್ಕರ್‌ ದಾಖಲೆ ಮುರಿಯುವತ್ತ ರೂಟ್‌
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅತ್ಯಧಿಕ ಟೆಸ್ಟ್‌ ರನ್‌ ಮಾಡಿರುವ ಸಚಿನ್‌ ತೆಂಡುಲ್ಕರ್‌ ಮತ್ತು ಸುನೀಲ್‌ ಗಾವಸ್ಕರ್‌ ದಾಖಲೆಯನ್ನು ಮೀರಿ ನಿಲ್ಲುವ ಹಾದಿಯಲ್ಲಿದ್ದಾರೆ. ಇದಕ್ಕೆ ಅಗತ್ಯವಿರುವುದು ಬರೀ 22 ರನ್‌.
ಸಚಿನ್‌ ತೆಂಡುಲ್ಕರ್‌ 2010ರಲ್ಲಿ 1,562 ರನ್‌ ಮತ್ತು ಸುನೀಲ್‌ ಗಾವಸ್ಕರ್‌ 1979ರಲ್ಲಿ 1,555 ರನ್‌ ಬಾರಿಸಿ 5ನೇ ಹಾಗೂ 6ನೇ ಸ್ಥಾನದಲ್ಲಿದ್ದಾರೆ. ಸದ್ಯ ಜೋ ರೂಟ್‌ 1,541 ರನ್‌ ಮಾಡಿದ್ದು, ರಿಕಿ ಪಾಂಟಿಂಗ್‌ ಅವರನ್ನು ಮೀರಿಸಿ 8ನೇ ಸ್ಥಾನಕ್ಕೆ ಏರಿದರು. ಪಾಕಿಸ್ಥಾನದ ಮೊಹಮ್ಮದ್‌ ಯೂಸುಫ್ 2006ರ ಸಾಲಲ್ಲಿ 1,788 ರನ್‌ ಪೇರಿಸಿದ್ದು ದಾಖಲೆ. ವಿವಿಯನ್‌ ರಿಚರ್ಡ್ಸ್‌ (1976ರಲ್ಲಿ 1,710 ರನ್‌) ಹಾಗೂ ಗ್ರೇಮ್‌ ಸ್ಮಿತ್‌ (2008ರಲ್ಲಿ 1,656 ರನ್‌) 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ ದಾಖಲೆ
ಶುಕ್ರವಾರದ ಆಟದ ವೇಳೆ ಜೋ ರೂಟ್‌ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅತ್ಯಧಿಕ ರನ್‌ ಬಾರಿಸಿದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೆ ಪಾತ್ರರಾದರು. 2002ರಲ್ಲಿ 1,481 ರನ್‌ ಪೇರಿಸಿದ ಮೈಕಲ್‌ ವಾನ್‌ ದಾಖಲೆ ಪತನಗೊಂಡಿತು. ಈ ವರ್ಷ ಆ್ಯಶಸ್‌ ಸರಣಿಯಲ್ಲಿ ಇನ್ನೂ 2 ಟೆಸ್ಟ್‌ ನಡೆಯಲಿರುವುದರಿಂದ ಜೋ ರೂಟ್‌ ಮುಂದೆ ವರ್ಷವೊಂದರಲ್ಲಿ ಅತ್ಯಧಿಕ ರನ್‌ ಪೇರಿಸಿ ನೂತನ ದಾಖಲೆ ಸ್ಥಾಪಿಸುವ ಅವಕಾಶವೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next