ಬರ್ಮಿಂಗ್‌ಹ್ಯಾಮ್: ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯ 281 ರನ್ನುಗಳ ಗುರಿ ಪಡೆದಿದೆ. ಮಂಗಳವಾರ ಪಂದ್ಯದ ಅಂತಿಮ ದಿನವಾಗಿದ್ದು, ಕೊನೆಯ 4 ಅವಧಿಗಳ ಆಟ ಬಾಕಿ ಉಳಿದಿದೆ.
4ನೇ ದಿನದಾಟದ ಚಹಾ ವಿರಾಮಕ್ಕೆ ಸರಿಯಾಗಿ ಇಂಗ್ಲೆಂಡ್ 273ಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್ ಮುಗಿಸಿತು. ಮೊದಲ ಸರದಿಯಲ್ಲಿ ಅದು 7 ರನ್ನುಗಳ ಸಣ್ಣ ಮುನ್ನಡೆ ಸಾಧಿಸಿತ್ತು. ಚೇಸಿಂಗ್ ಆರಂಭಿಸಿರುವ ಆಸ್ಟ್ರೇಲಿಯ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿ 4ನೇ ದಿನದ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ.
ಇಂಗ್ಲೆಂಡ್‌ನ ದ್ವಿತೀಯ ಸರದಿಯಲ್ಲಿ ಮೂವ ರಿಂದ 40 ಪ್ಲಸ್ ರನ್ ದಾಖಲಾಯಿತು. ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಸರ್ವಾಧಿಕ 46 ರನ್, ನಾಯಕ ಬೆನ್ ಸ್ಟೋಕ್ಸ್ 43 ರನ್ ಮಾಡಿದರು. ಇದು ಅರ್ಧ ಶತಕದ ನೆರವಿಲ್ಲದೆ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ದಾಖಲಿಸಿದ ಅತ್ಯಧಿಕ ಮೊತ್ತವಾಗಿದೆ.
ಆಸ್ಟ್ರೇಲಿಯದ ಬೌಲಿಂಗ್ ಸರದಿಯಲ್ಲಿ ಮಿಂಚಿ ದವರೆಂದರೆ ಪ್ಯಾಟ್ ಕಮಿನ್ಸ್ ಮತ್ತು ನಥನ್ ಲಿಯಾನ್. ಇಬ್ಬರೂ ತಲಾ 4 ವಿಕೆಟ್ ಕೆಡವಿದರು.
ಪಂದ್ಯದ 3ನೇ ದಿನದಾಟಕ್ಕೆ ಮಳೆಯಿಂದ ಅಡಚಣೆ ಆಗಿತ್ತು. ಇಂಗ್ಲೆಂಡ್ 28 ರನ್ನಿಗೆ 2 ವಿಕೆಟ್ ಕಳೆದುಕೊಂಡಿತ್ತು.
ಈ ಪಂದ್ಯದಲ್ಲಿ ಆಸ್ಟ್ರೇಲಿಯದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 9 ವಿಕೆಟ್ ಪತನಕ್ಕೆ ಕಾರಣರಾದರು. ಇದು ಆ್ಯಶಸ್ ಸರಣಿಯ ಜಂಟಿ ಕೀಪಿಂಗ್ ದಾಖಲೆ. ಇದರಲ್ಲಿ 3 ಸ್ಟಂಪಿಂಗ್ ಕೂಡ ಸೇರಿದೆ. 1968ರ ಹೇಡಿಂಗ್ಲೆ ಟೆಸ್ಟ್ ಬಳಿಕ ಆ್ಯಶಸ್ ಪಂದ್ಯವೊಂದರಲ್ಲಿ ಕೀಪರ್ ಒಬ್ಬರು 3 ಸ್ಟಂಪಿಂಗ್ ನಡೆಸಿದ ಮೊದಲ ನಿದರ್ಶನ ಇದಾಗಿದೆ. ಅಂದು ಇಂಗ್ಲೆಂಡ್‌ನ ಅಲನ್ ನಾಟ್ ಈ ಸಾಧನೆಗೈದಿದ್ದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-8 ವಿಕೆಟಿಗೆ 393 ಡಿಕ್ಲೇರ್ ಮತ್ತು 273 (ರೂಟ್ 46, ಬ್ರೂಕ್ 46, ಸ್ಟೋಕ್ಸ್ 43, ರಾಬಿನ್ಸನ್ 27, ಕಮಿನ್ಸ್ 63ಕ್ಕೆ 4, ಲಿಯಾನ್ 80ಕ್ಕೆ 4). ಆಸ್ಟ್ರೇಲಿಯ-386.