ಪರ್ತ್: ಮುಂದಿನ ವರ್ಷಾಂತ್ಯದ (2025-26) ಪ್ರತಿಷ್ಠಿತ ಆ್ಯಶಸ್ ಸರಣಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಇದರಲ್ಲೊಂದು ಅಚ್ಚರಿಯೂ ಗೋಚರಿಸಿದೆ. ಸುಮಾರು 4 ದಶಕಗಳ ಬಳಿಕ ಆ್ಯಶಸ್ ಸರಣಿಯ ಆರಂಭಿಕ ಟೆಸ್ಟ್ ಪಂದ್ಯ ಬ್ರಿಸ್ಬೇನ್ ಹೊರತುಪಡಿಸಿ ಬೇರೊಂದು ಕ್ರೀಡಾಂಗಣದಲ್ಲಿ ಮೊದಲ್ಗೊಳ್ಳಲಿದೆ. ಈ ಅದೃಷ್ಟ ಸಂಪಾದಿಸಿದ ತಾಣ ಪರ್ತ್.
ಸಾಮಾನ್ಯವಾಗಿ ಆಸ್ಟ್ರೇಲಿಯದಲ್ಲಿ ನಡೆಯುವ ಆ್ಯಶಸ್ ಸರಣಿಯ ಆರಂಭಿಕ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುವುದು ವಾಡಿಕೆ. ಇದು ಕಳೆದ 40 ವರ್ಷಗಳಿಗೂ ಮಿಗಿಲಾದ ಸಂಪ್ರದಾಯ. ಕೊನೆಯ ಸಲ ಆ್ಯಶಸ್ ಸರಣಿಯ ಆರಂಭಿಕ ಟೆಸ್ಟ್ ಪರ್ತ್‌ನಲ್ಲಿ ನಡೆದದ್ದು 1982ರಲ್ಲಿ. ಬಳಿಕ ಇದು ಬ್ರಿಸ್ಬೇನ್ ಪಾಲಾಯಿತು. ಇಲ್ಲಿ 1986ರ ಮೈಕ್ ಗ್ಯಾಟಿಂಗ್ ಸಾರಥ್ಯದ ಇಂಗ್ಲೆಂಡ್ ವಿರುದ್ಧ ಆಡಲಾದ ಮೊದಲ ಟೆಸ್ಟ್‌ನಲ್ಲಿ ಆಸೀಸ್ ಸೋಲನುಭವಿಸಿತ್ತು. ಮತ್ತೆಂದೂ ಕಾಂಗರೂ ಪಡೆಗೆ ಇಲ್ಲಿ ಆ್ಯಶಸ್ ಸೋಲು ಎದುರಾಗಲಿಲ್ಲ.
ಪರ್ತ್ ಟೆಸ್ಟ್ ನ. 21ರಂದು ಆರಂಭವಾಗಲಿದೆ. ಬಳಿಕ ಬ್ರಿಸ್ಬೇನ್‌ನಲ್ಲಿ ಡೇ-ನೈಟ್ ಟೆಸ್ಟ್ ನಡೆಯಲಿದೆ (ಡಿ. 4-8). ಇದು ಬ್ರಿಸ್ಬೇನ್‌ನಲ್ಲಿ ನಡೆಯುವ 3ನೇ ಹಗಲು-ರಾತ್ರಿ ಟೆಸ್ಟ್. ಇದಕ್ಕೂ ಮುನ್ನ ಪಾಕಿಸ್ಥಾನ (2016) ಹಾಗೂ ಶ್ರೀಲಂಕಾ ವಿರುದ್ಧ (2019) ಇಲ್ಲಿ ಡೇ-ನೈಟ್ ಟೆಸ್ಟ್ ನಡೆದಿತ್ತು.
ಸರಣಿಯ ಉಳಿದ 3 ಟೆಸ್ಟ್‌ಗಳ ತಾಣ ಅಡಿಲೇಡ್ (ಡಿ. 17-21), ಮೆಲ್ಬರ್ನ್ (ಡಿ. 26-30) ಮತ್ತು ಸಿಡ್ನಿಯಲ್ಲಿ (ಜ. 4-8).