ಅಡಿಲೇಡ್: ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಬ್ಯಾಟಿಂಗ್ ಸವಾಲೊಡ್ಡಲು ವಿಫಲವಾಗಿರುವ ಇಂಗ್ಲೆಂಡ್ ತೀವ್ರ ಸಂಕಟಕ್ಕೆ ಸಿಲುಕಿದೆ.
ಫಾಲೋಆನ್‌ನಿಂದ ರಿಯಾಯಿತಿ ಪಡೆದರೂ ಬಚಾವಾಗುವ ಸ್ಥಿತಿಯಲ್ಲಿಲ್ಲ.
ಆಸ್ಟ್ರೇಲಿಯದ 473 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರ ನೀಡಿದ ಇಂಗ್ಲೆಂಡ್, 3ನೇ ದಿನವಾದ ಶನಿವಾರ 236ಕ್ಕೆ ಕುಸಿಯಿತು. ಇದು ಆತಿಥೇಯರ ಅರ್ಧದಷ್ಟು ಮೊತ್ತವಾಗಿತ್ತು. 237 ರನ್ನುಗಳ ಹಿನ್ನಡೆಗೊಳಗಾದರೂ ರೂಟ್ ಪಡೆಗೆ ಆಸೀಸ್ ಫಾಲೋಆನ್ ವಿಧಿಸಲಿಲ್ಲ. ಅದು ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದು, ಒಂದು ವಿಕೆಟಿಗೆ 45 ರನ್ ಗಳಿಸಿ ದಿನದಾಟ ಮುಗಿಸಿದೆ. ಡೇವಿಡ್ ವಾರ್ನರ್ 13ಕ್ಕೆ ರನೌಟ್ ಆಗಿ ನಿರ್ಗಮಿಸಿದ್ದಾರೆ.
ಡೇವಿಡ್ ಮಲಾನ್-ಜೋ ರೂಟ್ ಕ್ರೀಸಿನಲ್ಲಿ ಇರುವಷ್ಟು ಹೊತ್ತು ಇಂಗ್ಲೆಂಡಿನ ಹೋರಾಟ ಜಾರಿಯಲ್ಲಿತ್ತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಆಸ್ಟ್ರೇಲಿಯದ ಬೌಲರ್ ಮೇಲುಗೈ ಸಾಧಿಸಿದರು. ಅನಂತರ ಸ್ಟೋಕ್ಸ್ (34) ಮತ್ತು ವೋಕ್ಸ್ (24) ಅವರಿಗಷ್ಟೇ ಎರಡಂಕೆಯ ಮೊತ್ತ ಗಳಿಸಲು ಸಾಧ್ಯವಾಯಿತು. ಸ್ಟಾರ್ಕ್ 4, ಲಿಯೋನ್ 3 ಮತ್ತು ಗ್ರೀನ್ 2 ವಿಕೆಟ್ ಹಾರಿಸಿದರು. 86 ರನ್ ಅಂತರದಲ್ಲಿ ಇಂಗ್ಲೆಂಡಿನ ಕೊನೆಯ 8 ವಿಕೆಟ್ ಹಾರಿ ಹೋಯಿತು.
ಮಲಾನ್-ರೂಟ್ 3ನೇ ವಿಕೆಟಿಗೆ 138 ರನ್ ಪೇರಿಸಿದರು. ಮಲಾನ್ 157 ಎಸೆತ ಎದುರಿಸಿ ಸರ್ವಾಧಿಕ 80 ರನ್
ಹೊಡೆದರೆ (10 ಬೌಂಡರಿ), ನಾಯಕ ರೂಟ್ 116 ಎಸೆತಗಳಿಂದ 62 ರನ್ ಮಾಡಿದರು (7 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-9 ವಿಕೆಟಿಗೆ ಡಿಕ್ಲೇರ್ 473 ಮತ್ತು ಒಂದು ವಿಕೆಟಿಗೆ 45. ಇಂಗ್ಲೆಂಡ್-236 (ಮಲಾನ್ 80, ರೂಟ್ 62, ಸ್ಟೋಕ್ಸ್ 34, ಸ್ಟಾರ್ಕ್ 37ಕ್ಕೆ 4, ಲಿಯೋನ್ 58ಕ್ಕೆ 3, ಗ್ರೀನ್ 24ಕ್ಕೆ 2).