ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬೆಂಗಳೂರಿನ ನಿವಾಸಿ ಆಶಾರಾಣಿ ವಿ. ಕಣಕ್ಕಿಳಿದಿದ್ದಾರೆ. ಶುಕ್ರವಾರ, ಮೈಸೂರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ತೆರೆಯಲಾಗಿರುವ ಚುನಾವಣಾ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಪಕ್ಷದ ಕಾರ್ಯಕರ್ತರಾದ ಮಂಜುನಾಥ್, ಹರೀಶ್,ಪ್ರದೀಪ್, ಆಕಾಶ್ ಮೊದಲಾದವರು ಜೊತೆಗಿದ್ದರು. ಡಿಪ್ಲೊಮೋ ವ್ಯಾಸಂಗ ಮಾಡಿರುವ ಆಶಾರಾಣಿ ಅವರು ಬೆಂಗಳೂರಿನ ಬಿಟಿಎಂ 2ನೇ ಹಂತ ಬಡಾವಣೆಯ ನಿವಾಸಿಯಾಗಿದ್ದು, ಶಾಲಾ ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಿದ್ದಾರೆ.
ಚುನಾವಣೆ ಸ್ಪರ್ಧೆ ಬಗ್ಗೆ
ಉದಯವಾಣಿ ಜೊತೆ ಮಾತನಾಡಿದ ಆಶಾರಾಣಿ ಅವರು, ನಾವು ಚುನಾವಣಾ ಪ್ರಚಾರ ಎನ್ನುವುದಕ್ಕಿಂತ ವಿಚಾರಗಳ ಪ್ರಚಾರ ಮಾಡಲು ಹೊರಟಿದ್ದೇವೆ. ಕೊಡಗಿನಲ್ಲಿ ಕಳೆದ ಆಗಸ್ಟ್‌ನಲ್ಲಿ ಮಹಾ ಮಳೆಬಂದಾಗ ಪರಿಹಾರ ಕಾರ್ಯದಲ್ಲಿ ಜಿಲ್ಲಾಡಳಿತದ ಜೊತೆಗೆ ಕೈಜೋಡಿಸಿ ದುಡಿದಿದ್ದೇವೆ. ಮೈಸೂರಿನಲ್ಲಿ ಶ್ರೀರಾಂಪುರ 2ನೇ ಹಂತದಲ್ಲಿ ಸಂಬಂಧಿಕರ ಮನೆಯಲ್ಲಿದ್ದು ಚುನಾವಣೆ ಎದುರಿಸಲಿದ್ದು, ಕ್ಷೇತ್ರದಲ್ಲಿ ನಮಗೆ ಉತ್ತಮ ವಾತಾವರಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿಯಮ್ಮ: ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ಹಾಲಿ ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ಕಾವೇರಿಯಮ್ಮ ಎನ್.ಕೆ. ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.