ಮೈಸೂರು: ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡೇಶ್ವರಿ ದೇವಿಗೆ ಸಾಂಪ್ರದಾ ಯಿಕವಾಗಿ ಪೂಜಾ ಕೈಂಕರ್ಯಗಳು ನೆರವೇರಿದವು. ಕೋವಿಡ್ 19 ವೈರಸ್ ಸೋಂಕು ಹರಡುವ ಭೀತಿ ಯಿಂದ ಮೂರನೇ ಆಷಾಢ ಶುಕ್ರವಾರವೂ ಚಾಮುಂಡೇಶ್ವರಿಯ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಡಾ. ಶಶಿಶೇಖರ ದೀಕ್ಷಿತ್ ಸಮ್ಮುಖದಲ್ಲಿ ಪೂಜೆ ಕೈಂಕರ್ಯಗಳು ನೆರವೇರಿದವು.
ಪ್ರತಿ ವರ್ಷದ ಆಷಾಢ ಮಾಸದ ಶುಕ್ರವಾರ ಗಳಂದು ಬೆಳಗಿನ ಜಾವ 5.30ರಿಂದ ರಾತ್ರಿ 10 ರವರೆಗೂ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶ ಇರುತ್ತಿತ್ತು. ಜೊತೆಗೆ ಲಕ್ಷಾಂತರ ಮಂದಿ ಭಕ್ತರು, ಗಣ್ಯರು ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ 7.30ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ ದೇವಾಲಯದ ಬಾಗಿಲು ಬಂದ್ ಮಾಡಲಾಯಿತು. ಆಷಾಢದ ಪ್ರಯುಕ್ತ ತಾಯಿ ಚಾಮುಂಡೇಶ್ವರಿ ದೇವಸ್ಥಾನ ಫಲಪುಷ್ಪಗಳಿಂದ ಸಿಂಗಾರಗೊಂಡಿತ್ತು. ಅಲ್ಲದೇ ಧಾರ್ಮಿಕ -ವಿಧಿ ವಿಧಾನಗಳು ಪ್ರತಿ ವರ್ಷದ ಆಷಾಢ ಮಾಸದಂತೆ ಈ ಬಾರಿಯೂ ನಡೆಯಿತು.
ಮನೆಗಳಲ್ಲೇ ಪ್ರಾರ್ಥಿಸಿ: ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಮಾತನಾಡಿ, ಆಷಾಢ ಮಾಸದ ಮೂರನೇ ಶುಕ್ರವಾರ ಪ್ರತಿ ವರ್ಷದಂತೆ ಬೆಳಗ್ಗೆ 3.30ರಿಂದ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ತಾಯಿಗೆ ವಿಶೇಷ ಅಲಂಕಾರ ಮಾಡಿದ್ದೇವೆ. ಮೂರನೇ ಆಷಾಢದ ಪ್ರಯುಕ್ತ ದುರ್ಗಾಲಂಕಾರ ಮಾಡಿ ಪೂಜೆ ಮಾಡಿ ದ್ದೇವೆ. ಧಾರ್ಮಿಕ ಕೈಂಕರ್ಯಗಳು ನಡೆದು ಕೊಂಡು ಹೋಗುತ್ತಿದೆ. ಭಕ್ತಾದಿಗಳು ಮನೆಯಲ್ಲೇ ಇದ್ದುಕೊಂಡು ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ಪೂಜೆ ಮಾಡುವಂತೆ ತಿಳಿಸಿದರು.
ಮೇಯರ್ ಕಾರಲ್ಲಿ ದರ್ಶನ್: ನಟ ದರ್ಶನ್ ಚಾಮುಂಡೇಶ್ವರಿ ಬೆಟ್ಟದಕ್ಕೆ ಮೇಯರ್ ಕಾರ್‌ನಲ್ಲಿ ಆಗಮಿಸಿದರು. ಕಾರ್‌ನಲ್ಲಿ ಮೇಯರ್ ಇರಲಿಲ್ಲ. ದರ್ಶನ್ ಒಬ್ಬರೇ ಆಗಮಿಸಿದ್ದು, ಇದು ಎಲ್ಲರ ಗಮನ ಸೆಳೆಯಿತು.
ನಿರ್ಬಂಧದ ನಡುವೆಯೂ ಗಣ್ಯರ ದರ್ಶನ: ಕೋವಿಡ್ 19 ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿದ್ದರೂ, ಗಣ್ಯರು ಬೆಟ್ಟಕ್ಕೆ ಆಗಮಿಸಿ ದರ್ಶನ ಪಡೆದರು. ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್‌ಸಿಂಹ, ಶಾಸಕ ನಾಗೇಂದ್ರ ಬಿಜೆಪಿ ಕಾರ್ಯಕರ್ತರೊಂದಿಗೆ ಬೆಟ್ಟಕ್ಕೆ ಆಗಮಿಸಿ ನಾಡದೇವತೆ ದರ್ಶನ ಪಡೆದರು. ಜೊತೆಗೆ ಚಿತ್ರನಟ ದರ್ಶನ್ ಕೂಡ ದೇವಿ ದರ್ಶನ ಪಡೆದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್ 19 ಜಾಗ್ರತೆಯನ್ನು ಗಣ್ಯರು ಮತ್ತು ಗಣ್ಯರ ಬೆಂಬಲಿಗರು ದೇವಸ್ಥಾನಕ್ಕೆ ಆಗಮಿಸಿದ್ದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಯಿತು.
ಈ ವೇಳೆ ಸಚವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಪ್ರತಿ ವರ್ಷ ಆಷಾಢ ಶುಕ್ರವಾರ ದರ್ಶನ ಪಡೆದು ಪೂಜೆ ಸಲ್ಲಿಸುವುದು ಪ್ರತೀತಿ. ಹಾಗಾಗಿ ಪ್ರತಿ ಬಾರಿಯಂತೆ ತಾಯಿ ದರ್ಶನ ನಡೆದು ಶೀಘ್ರವೇ ಕೋವಿಡ್ 19 ಮುಕ್ತಿ ಮಾಡಿ ಎಂದು ಪ್ರಾರ್ಥಿಸಿದ್ದೇನೆ. ರಾಜ್ಯದಲ್ಲಿ, ಪ್ರಪಂಚದಲ್ಲಿ ಕೋವಿಡ್ 19 ಬಹಳ ತೊಂದರೆ ನೀಡುತ್ತಿದೆ. ಇದರಿಂದ ಮಾಡು, ನಾಡು ಸುಭಿಕ್ಷೆಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.