ಆಷಾಢ ಮಾಸ ಈಗಾಗಲೇ ಲಗ್ಗೆ ಇಟ್ಟಾಗಿದೆ. ಮಳೆಗಾಲದಲ್ಲಿ ಬರುವ ಆಷಾಢ ಮಾಸವನ್ನು ಶೂನ್ಯ ಮಾಸ, ಅಮಂಗಳಕರ ಮಾಸವೆಂದೂ ಕರೆಯುತ್ತಾರೆ. ಇದಕ್ಕೆ ಸಾಂಪ್ರದಾಯಿಕ ಕಾರಣ ಏನೇ ಇರಬಹುದು. ಆದರೆ ಹಿಂದೂ ಸಂಸ್ಕೃತಿಯ ಪ್ರತಿಯೊಂದು ಆಚರಣೆಯ ಹಿಂದೆಯೊಂದು ಮಹತ್ವದ ಕಾರಣವಂತೂ ಇದ್ದೇ ಇರುತ್ತದೆ. ಆಷಾಢ ಮಾಸದಲ್ಲಿ ಭಾರೀ ಮಳೆಯಾಗುತ್ತದೆ. ಇದರೊಂದಿಗೆ ಕೃಷಿಯಾಧಾರಿತ ಚಟುವಟಿಕೆಗಳೂ ಬಿರುಸು ಪಡೆಯುತ್ತದೆ. ಹೀಗಾಗಿ ಎಲ್ಲೆಡೆಯೂ ಕೃಷಿ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದರಿಂದ ಮನೆಮಂದಿಗೂ ಕೈ ತುಂಬಾ ಕೆಲಸಗಳಿರುತ್ತವೆ. ಹೀಗಾಗಿ ಬೇರೆಲ್ಲ ಕಾರ್ಯಗಳಿಗೆ ಬ್ರೇಕ್ ಹಾಕಲಾಗುತ್ತದೆ.
ಕಾರಣ ಕೃಷಿ ಕಾರ್ಯಗಳಿಗೆ ಕಾರ್ಮಿಕರು ಸಿಗದೇ ಹೋಗಬಹುದು ಎನ್ನುವ ವಿಚಾರವೂ ಇದರಲ್ಲಿ ಸೇರಿಕೊಂಡಿದೆ. ಹಿಂದೂ ಸಂಸ್ಕೃತಿಯಲ್ಲಿ ಆಷಾಢ ಮಾಸ ಅಮಂಗಳಕರವೆಂದೇ ಪರಿಗಣಿಸಲಾಗಿದ್ದು, ಯಾವುದೇ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಒಂದು ವೇಳೆ ನಡೆಸಿದರೆ ಇದಕ್ಕೆ ದೇವರ ಅನುಗ್ರಹ ಪ್ರಾಪ್ತಿಯಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಹೆಚ್ಚಿನ ಕಾರ್ಯಗಳು ಈ ಸಂದರ್ಭದಲ್ಲಿ ಸ್ಥಗಿತಗೊಳುವುದರಿಂದ ಇದನ್ನು ಶೂನ್ಯ ಮಾಸ ಎಂದೂ ಕರೆಯಲಾಗುತ್ತದೆ.
ಹಿರಿಯರು ದೈವಿಕ ಕಾರಣವನ್ನು ನೀಡಿ ಶುಭ ಕಾರ್ಯಗಳಿಗೆ ನಿಷಿದ್ಧ ಹೇರಿದ್ದರೂ ಇದರ ಹಿಂದೆಯೂ ಒಂದು ಕಾರಣವಿದೆ. ಮಳೆಗಾಲವೆಂದರೆ ಯಾವುದೇ ಕೆಲಸಕ್ಕೆ ಅಡ್ಡಿ ಆತಂಕಗಳು ಉಂಟಾಗುವುದು ಸಹಜ. ಮಾತ್ರವಲ್ಲದೆ ಅತಿಥಿಗಳ ಉಪಚಾರದಲ್ಲೂ ಸಮಸ್ಯೆಗಳಾಗುತ್ತವೆ. ಹೀಗಾಗಿ ಅತಿಥಿಗಳು ಬೇಸರಗೊಳ್ಳಬಹುದು. ಈ ಕಾರಣದಲ್ಲಿ ಈ ಅವಧಿಯಲ್ಲಿ ಶುಭ ಕಾರ್ಯಗಳಿಗೆ ಮನ್ನಣೆ ನೀಡುವುದಿಲ್ಲ.
ಆಷಾಢ ಮಾಸದಲ್ಲಿ ಮದುವೆಯಂತ ಶುಭ ಕಾರ್ಯಗಳನ್ನು ನಡೆಸಿದರೆ, ದಂಪತಿಗಳು ಕೂಡಿ ಬಾಳಿದರೆ ಅವರಿಗೆ ಹುಟ್ಟುವ ಸಂತಾನ ಒಂಭತ್ತು ತಿಂಗಳ ಅನಂತರ ಅಂದರೆ ಚೈತ್ರ ಮಾಸದಲ್ಲಿ ಹುಟ್ಟುವ ಸಾಧ್ಯತೆ ಇರುತ್ತದೆ. ಅದು ಬಿರುಬೇಸಗೆಯ ದಿನವಾಗಿರುತ್ತದೆ. ಆ ಅವಧಿಯಲ್ಲಿ ಹೆರಿಗೆಯೂ ಕಷ್ಟ. ಹೀಗಾಗಿ ಆಷಾಢ ಮಾಸವನ್ನು ಅಮಂಗಳಕರವನ್ನಾಗಿ ಮಾಡಲಾಗಿದೆ.
ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಮನೆಯಲ್ಲಿ ಕೆಲಸ ಕಾರ್ಯಗಳು ಅಧಿಕವಾಗಿರುತ್ತದೆ. ಹೀಗಾಗಿ ಅತ್ತೆ, ಸೊಸೆಯ ನಡುವೆ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಮಳೆಗಾಲದಲ್ಲಿ ಅವರನ್ನು ದೂರ ಮಾಡಲಾಗುತ್ತದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಗಾಳಿಯಲ್ಲಿ ಆವರಿಸುವ ಸೋಂಕಿನಿಂದ ರಕ್ಷಿಸಲು ಹೆಣ್ಮಕ್ಕಳು ಕೈಗೆ ಮದರಂಗಿಯನ್ನು ಹಚ್ಚಿಕೊಳ್ಳುವ ಸಂಪ್ರದಾಯವಿದೆ. ಹೀಗಾಗಿ ಆಷಾಢ ಮಾಸದಲ್ಲಿ ಕೈಗಳಿಗೆ ಮದರಂಗಿ ಹಚ್ಚಿಕೊಳ್ಳುವುದಕ್ಕೆ ಸಂಪ್ರದಾಯ ಬದ್ಧವಾದ ಮಾನ್ಯತೆಯನ್ನೂ ನೀಡಲಾಗಿದೆ.
ಆಷಾಢ ಮಾಸದಲ್ಲಿ ಮನೆಯಲ್ಲಿ ಶುಭ ಕಾರ್ಯಗಳು ನಡೆಯದೇ ಇದ್ದರೂ ರಥಯಾತ್ರೆ, ಚತುರ್ಮಾಸ ವ್ರತ, ಪೂಜೆ, ಮೆರವಣಿಗೆಗಳೆಲ್ಲ ನಡೆಯುತ್ತದೆ. ಇದಕ್ಕೆ ಕಾರಣ ಏನೇ ಇದ್ದರೂ ಸಾಮಾಜಿಕವಾಗಿ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಇಲ್ಲಿದೆ. ಆಷಾಢ ಮಾಸದಲ್ಲಿ ಕೃಷಿ
ಚಟುವಟಿಕೆಗಳನ್ನು ಪೂಜೆ ನಡೆಸುವ ಮೂಲಕ ಪ್ರಾರಂಭಿಸಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ ಎನ್ನುವ ನಂಬಿಕೆಯೂ ಇದೆ.