ಹಾವೇರಿ: ವಿವಿಧ ಬೇಡಿಕೆ ಈಡೇರಿಸಲು ಆಶಾ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಿದರು. ಸ್ಥಳೀಯ ಮುರುಘರಾಜೇಂದ್ರ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರಸ್ತೆ ಮೂಲಕ ಮೈಲಾರ ಮಹದೇವ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡಿತು.
ನಂತರ ಕಾರ್ಯಕರ್ತೆಯರು ಜಿಲ್ಲಾ ಸಶಸ್ತ್ರಪಡೆ ಕಚೇರಿ ಎದುರು ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಎಐಯುಟಿಯುಸಿ ರಾಜ್ಯ ಉಪಾಧ್ಯಕÒ ಎಂ.ಶಶಿಧರ ಮಾತನಾಡಿ, ಇತ್ತೀಚೆಗೆ ಆಶಾ ಕಾರ್ಯಕರ್ತೆಯರು ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಭೂತಪೂರ್ವ ಹೋರಾಟ ನಡೆಸಿದ್ದರಿಂದ ಸರ್ಕಾರ ಕೆಲವು ಬೇಡಿಕೆಗಳಿಗೆ ಸ್ಪಂದಿಸಿದೆ. ಆದರೆ, ಬಹುಮುಖ್ಯ ಬೇಡಿಕೆಯಾದ 15 ತಿಂಗಳ ಎಂಸಿಟಿಎಸ್ ಬಾಕಿ ಹಣ ಈವರೆಗೂಬಿಡುಗಡೆಯಾಗಿಲ್ಲ. ಇದರಿಂದಾಗಿ ಜನಗಳ ಮಧ್ಯೆ ಆರೋಗ್ಯ ಸೇವೆಯನ್ನು
ತಲುಪಿಸಲು ಬಸ್ ಚಾರ್ಜ್ ಇತ್ಯಾದಿ ಖರ್ಚುಗಳಿಗೆ ಅವರ ಬಳಿ ಹಣವಿಲ್ಲದಂತಾಗಿದೆ. ಆದ್ದರಿಂದ ಅನಿವಾರ್ಯವಾಗಿ ಬಾಕಿ ಹಣ ಪಾವತಿಸುವವರೆಗೂ ಕಾರ್ಯ ನಿರ್ವಹಿಸದಿರಲು ನಿರ್ಧರಿಸಿದ್ದಾರೆ ಎಂದರು. ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯಾದ್ಯಂತ ಬಂದ್ ಚಳವಳಿ ನಡೆಸಲು ನಿರ್ಧರಿಸಿದ್ದು, ಸರ್ಕಾರ ನ್ಯಾಯಯುತವಾಗಿ ಬರಬೇಕಾದ 15ತಿಂಗಳ ಬಾಕಿ ಹಣವನ್ನು ಕೂಡಲೇ ಪಾವತಿಸಲು ಮುಂದಾಗಬೇಕು. ಈ ಬೇಡಿಕೆ ಈಡೇರುವವರೆಗೂ “ಕೆಲಸ ಬಂದ್ ಚಳವಳಿ’ ನಡೆಸಲು ಕರೆ ನೀಡಿದರು.
ಸಂಘಟನೆಯ ಗೌರವ ಸಲಹೆಗಾರ ಗಂಗಾಧರ ಬಡಿಗೇರ ಮಾತನಾಡಿ, ಸೇವೆಗೆ ತಕ್ಕ ಪ್ರತಿಫಲ ದೊರಕದೇ ಆಶಾ ಕಾರ್ಯಕರ್ತೆರು ಕಂಗಾಲಾಗಿದ್ದಾರೆ. ಇಂದಿಗೂ ಪ್ರತಿ ತಿಂಗಳು ವೇತನವಿದಲ್ಲದೇ ಆಶಾ ಕಾರ್ಯರ್ತೆಯರು ಪರದಾಡುವಂತಾಗಿದೆ. ರಾಜ್ಯದಲ್ಲಿ ಕೇಂದ್ರ ಪ್ರೋತ್ಸಾಹಧನ ನೀಡುವ ಆಶಾ ಸಾಫ್ಟ್ ವೇತನ ಮಾದರಿಯಿಂದಾಗಿ ಕಾರ್ಯಕರ್ತೆಯರಿಗೆ ಕಳೆದ 4 ವರ್ಷಗಳಿಂದ ಸಾವಿರಾರು ರೂಪಾಯಿ ವಂಚಿತರಾಗಿದ್ದಾರೆ. ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದ ಆಶಾ ಕಾರ್ಯಕರ್ತೆರಿಗೆ ಗೌರವ ಧನ ನಿಗದಿ ಮಾಡಬೇಕು. ಈ ಬಗ್ಗೆ ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೂಡ ಸೂಕ್ತ ಸ್ಪಂದನೆ ದೊರಕಿಲ್ಲ. ಕೇವಲ ಭರವಸೆಗಳಾಗಿಯೇ ಉಳಿದಿವೆ. ಕೆಲಸಕ್ಕೆ ಪ್ರತಿಫಲ ಇಲ್ಲದೇ ಆಶಾ ಕಾರ್ಯಕರ್ತೆಯರು ಸಂಕಷ್ಟದಲ್ಲಿಯೇ ಜೀವನ ನಡೆಸುವಂತಾಗಿದೆ ಎಂದು ದೂರಿದರು.
ಕೂಡಲೇ ಸರ್ಕಾರ ಆಶಾಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಪ್ರೋತ್ಸಾಹಧನವನ್ನು ಒಟ್ಟಿಗೆ ಸೇರಿಸಿ ಕನಿಷ್ಟ ಮಾಸಿಕ ಗೌರವಧನ 12 ಸಾವಿರ ನೀಡಬೇಕು. ಆಶಾ ಸಾಫ್ಟ್‌ಗೆ ಆಶಾ ಪ್ರೋತ್ಸಾಹಧನ ಜೋಡಣೆ ರದ್ದುಗೊಳಿಸಬೇಕು. ಕಳೆದ 15 ತಿಂಗಳಿನಿಂದ ಬಾಕಿ ಇರುವ ಎಂಸಿಟಿಎಸ್ ಸೇವೆಗಳ ಪ್ರೋತ್ಸಾಹಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಮೇಶ ಹೊಸಮನಿ, ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಶೀಲಾ ಬಂಕಾಪುರಮಠ, ಮಂಜುಳಾ ಮಾಸೂರ, ಲಕ್ಷ್ಮೀ ಕಬ್ಬೂರ, ರತ್ನ ಮಕರವಳ್ಳಿ, ರೂಪಾ ಮಾನೆ, ರತ್ನ ಬೇಟಗೇರಿ, ಗೀತಾ ಮಡಿವಾಳರ, ವನಜಾಕ್ಷಿ ಅರ್ಕಚಾರಿ, ಪುಷ್ಪ ಮಾಡೂರಮಠ, ಚೇತನ ಹಿರೇಮಠ, ಅಂಬಿಕಾ ಮಹೇಂದ್ರಕರ, ಛಾಯಾ ಕುಲಕರ್ಣಿ, ಯಲ್ಲಮ್ಮ, ಈರಮ್ಮ ಚಿಕ್ಕಮಠ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಇದ್ದರು.