Advertisement

ಆಶಾ ಕಾರ್ಯಕರ್ತೆಯರ ಪ್ರತಿಭಟನೆ 17ಕ್ಕೆ

02:28 PM May 06, 2022 | Team Udayavani |

ಬಳ್ಳಾರಿ: ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರನ್ನಾಗಿ ಅಥವಾ ಐಎಲ್‌ಸಿ ಶಿಫಾರಸ್ಸಿನಂತೆ ಶೆಡ್ನೂಲ್ಡ್‌ ವರ್ಕರ್ಸ್‌ ಎಂದು ಪರಿಗಣಿಸಿ ಶಾಸನಬದ್ಧವಾಗಿ ಇರುವ ವೇತನ, ಮುಂಬಡ್ತಿ, ನಿವೃತ್ತಿ ವೇತನ, ಇಪಿಎಫ್‌, ಇಎಸ್‌ಐ ಇನ್ನಿತರೆ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಇದೇ ಮೇ 17 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಕಳೆದ 15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸಲ್ಲಿಸುತ್ತಿದ್ದಾರೆ. ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಗಳೂ ಸೇರಿದಂತೆ, ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಆರೋಗ್ಯ ಚಟುವಟಿಕೆಗಳು ಮತ್ತು ಹಲವಾರು ಸಮೀಕ್ಷೆಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇಲಾಖೆಯ ಎಲ್ಲ ಸಾರ್ವಜನಿಕ ಆರೋಗ್ಯ ಸೇವೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದವರು ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ತಡೆಗಟ್ಟುವಲ್ಲಿ, ಜನರಿಗೆ ಲಸಿಕೆ ಹಾಕಿಸುವಲ್ಲಿ ವಾರಿಯರ್ಸ್‌ಗಳಾಗಿ ಪ್ರಮುಖ ಪಾತ್ರವಹಿಸಿರುವ ಆಶಾ ಕಾರ್ಯಕರ್ತೆಯರು, ತಮ್ಮ ಜೀವ ಪಣಕ್ಕಿಟ್ಟು ಹೋರಾಟ ನಡೆಸಿದ್ದಾರೆ. ಹೀಗೆ ಇಲಾಖೆ ವಹಿಸಿದ ವಿವಿಧ ಕೆಲಸಗಳನ್ನು ಹಗಲಿರುಳು ಮಾಡಿದರೂ ದುಡಿದಷ್ಟು ಕೈಗೆ ತಲುಪದಿರುವುದು ಅತ್ಯಂತ ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.

ಆರ್‌ಸಿಎಚ್‌ ಪೋರ್ಟಲ್‌ ಡೇಟಾ ಎಂಟ್ರಿ ಸಮಸ್ಯೆಯನ್ನು ಬಗೆಹರಿಸಬೇಕು. ಮೂರು ವರ್ಷಗಳಿಂದ ಕಾರ್ಯಕರ್ತೆಯರಿಗೆ ಆಗಿರುವ ಆರ್ಥಿಕ ನಷ್ಟವನ್ನು ತುಂಬಿಕೊಡಲು ಹಿಂಬಾಕಿ ರೂಪದಲ್ಲಿ ನಷ್ಟ ಪರಿಹಾರ ನೀಡಬೇಕು. ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ, ನಿಗದಿತ ಚಟುವಟಿಕೆಗಳ ನಿಶ್ಚಿತ ಗೌರವಧನ, ವಿವಿಧ ಚಟುವಟಿಕೆಗಳ ಪ್ರೋತ್ಸಾಹಧನಗಳನ್ನು ಒಟ್ಟುಗೂಡಿಸಿ ಒಂದೇ ಗೌರವಧನ ಮಾಡಿ ನೀಡಬೇಕು. ಪ್ರತಿ ತಿಂಗಳ 10 ರೊಳಗೆ ಗೌರವಧನ ಬ್ಯಾಂಕ್‌ ಖಾತೆಗೆ ಪಾವತಿ ಮಾಡಬೇಕು. ಆಶಾ ಕಾರ್ಯಕರ್ತೆಯರ ಮೇಲೆ ಹೊಸದಾಗಿ ಹೇರಲಾದ ಹೆಚ್ಚುವರಿ ಕೆಲಸಗಳನ್ನು ಕೈ ಬಿಡಬೇಕು. ಕಾರ್ಯಕರ್ತೆಯರಿಗೆ ನೀಡುವ 36 ಚಟುವಟಿಕೆಗಳನ್ನು ಹೊರತುಪಡಿಸಿ ಸರ್ಕಾರದ ಇತರೆ ಕೆಲಸ ಮಾಡಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ನಗರ ಪ್ರದೇಶದಲ್ಲಿನ ಆಶಾ ಕಾರ್ಯಕರ್ತೆಯರಿಗೆ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಮಾಸಿಕ ಗೌರವಧನ ನಿಗದಿಪಡಿಸಬೇಕು. ಆಶಾ ಸುಗಮಕಾರರನ್ನು ಆಶಾ ಸೇವೆಯಿಂದ ಬೇರ್ಪಡಿಸಿ ಅವರ ಹುದ್ದೆಗೆ ತಕ್ಕಂತೆ ಮಾಸಿಕ ಗೌರವಧನ, ಪ್ರಯಾಣ ಭತ್ಯೆಗಳನ್ನು ನಿಗದಿ ಮಾಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್‌ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದವರು ತಿಳಿಸಿದರು.

Advertisement

ಇದೇ ವೇಳೆ ಪ್ರತಿಭಟನೆಯ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎ.ದೇವದಾಸ್, ಜಿಲ್ಲಾ ಗೌರವಾಧ್ಯಕ್ಷೆ ಶಾಂತಾ, ಜಿಲ್ಲಾ ಕಾರ್ಯದರ್ಶಿ ಗೀತಾ, ಅಂಬಿಕಾ, ರಾಜೇಶ್ವರಿ, ರಷ್ಮಿ, ಜಿ.ಸುರೇಶ್‌, ಡಾ| ಎನ್‌.ಪ್ರಮೋದ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next