Advertisement

ASHA; ಆಟಕ್ಕುಂಟು ಲೆಕ್ಕಕ್ಕಿಲ್ಲವೇ ಆಶಾ ಕಾರ್ಯಕರ್ತೆಯರ ಚುನಾವಣ ಕಾರ್ಯ?

12:10 AM Apr 05, 2024 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆ ಮುಗಿದು ಈಗ ಲೋಕಸಭಾ ಚುನಾವಣೆ ಬಂದರೂ ಆಶಾ ಕಾರ್ಯಕರ್ತೆಯರ ಗೋಳು ಮುಗಿದಿಲ್ಲ.ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದಕ್ಕೆ ಸೂಕ್ತ ಸಂಭಾವನೆ ಇನ್ನೂ ಆಶಾ ಕಾರ್ಯಕರ್ತೆಯರ ಕೈ ಸೇರಿಲ್ಲ.

Advertisement

ಈಗ ಲೋಕಸಭೆ ಚುನಾವಣೆ ಘೋಷಣೆ ಆಗಿದೆ. ಈಗಲೂ ಮತ್ತದೇ ಕೆಲಸ ಮಾಡಬೇಕಿದೆ. ಆದರೆ ಈ ಬಾರಿಯೂ ಸಂಭಾ ವನೆ ಸಿಗುವುದೋ ಇಲ್ಲವೋ ಎಂಬ ಗೊಂದಲ ಇವರದು. ರಾಜ್ಯವ್ಯಾಪಿ ಸುಮಾರು 43 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಇವರೆಲ್ಲರೂ ಆರೋಗ್ಯ ಮತ್ತು ಕುಟುಂಬ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಾರೆ. ಚುನಾವಣೆ ವೇಳೆ ಇವರು ಜಿಲ್ಲಾ ಚುನಾವಣಾಧಿಕಾರಿಗಳ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಮತದಾನ ಕೇಂದ್ರಗಳಲ್ಲಿ ಆರೋಗ್ಯ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದಂತೆ ಕೆಲಸ ಮಾಡಿದ್ದೇವೆ. ಮತಕೇಂದ್ರಕ್ಕೆ ಬರುವ ಹಿರಿಯ ಮತದಾರರಿಗೆ ನೆರವಾಗುವುದರ ಜತೆಗೆ ಬಿಸಿನ ಝಳಕ್ಕೆ ತೊಂದರೆ ಆದವರಿಗೆ ಒಆರ್‌ಎಸ್‌ ನೀಡುವ ಕಾರ್ಯ ಮಾಡಿದ್ದೇವೆ. ಆರೋಗ್ಯ ಸಮಸ್ಯೆ ಉಂಟಾದವರನ್ನು ಸಕಾಲದಲ್ಲಿ ಉಪಚರಿಸಿದ್ದೇವೆ. ಆದರೂ ನಮ್ಮ ಕೆಲಸ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತಾಗಿದೆ ಎಂದು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.

ಪತ್ರ ಬರೆದರೂ ಪ್ರಯೋಜನವಿಲ್ಲ
ಚುನಾವಣೆ ಕಾರ್ಯ ನಿರ್ವಹಿಸಿದರೂ ಸೂಕ್ತ ಸಂಭಾವನೆ ಕೈ ಸೇರದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಿಯೋಗ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ದೂರಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಗದಿಪಡಿಸುವ ಕೆಲಸವನ್ನು ಮಾತ್ರ ಆಶಾ ಕಾರ್ಯಕರ್ತೆಯರು ಮಾಡಬೇಕು. ಬೇರೆ ಕೆಲಸಗಳಿಗೆ ನಿಯೋಜನೆ ಮಾಡಿದಲ್ಲಿ ಜಿಲ್ಲಾಡಳಿತ ಸೂಕ್ತ ಸಂಭಾವನೆ ನೀಡಬೇಕು ಎಂಬ ಆದೇಶವಿದೆ. ಆದರೆ ಈಗ ತಾಂತ್ರಿಕ ನೆಪವೊಡ್ಡಿ ಚುನಾವಣ ಕಾರ್ಯದ ಸಂಭಾವನೆ ನೀಡಿಲ್ಲ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣ ಆಯುಕ್ತರನ್ನು ಕೂಡ ಭೇಟಿ ಮಾಡಿ ಮನವಿ ಮಾಡಲಾಗಿದೆ ಎಂದಿದ್ದಾರೆ.

Advertisement

ಗ್ರಾ.ಪಂ. ಚುನಾವಣೆ: 700 ರೂ. ಸಂಭಾವನೆ
ಈ ಹಿಂದೆ ಗ್ರಾ.ಪಂ. ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಆಶಾ ಕಾರ್ಯಕರ್ತೆ ಯರು ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಿದಾಗ ತಲಾ 700ರೂ. ಸಂಭಾವನೆ ನೀಡಲಾಗಿತ್ತು. ಆದರೆ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಕಾರ್ಯವನ್ನು ಅವಗಣಿಸಲಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣ ಕೆಲಸಗಳಿಗೆ ಆಶಾ ಕಾರ್ಯಕರ್ತೆಯರನ್ನು ಬಳಕೆ ಮಾಡಿಕೊಂಡರೆ ಊಟ-ತಿಂಡಿ, ಪ್ರಯಾಣ ಭತ್ತೆ ಮತ್ತು ತುಟ್ಟಿಭತ್ತೆ ಜತೆಗೆ ಸೂಕ್ತ ಸಂಭಾವನೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್‌ ಯಾದಗಿರಿ ಒತ್ತಾಯಿಸಿದ್ದಾರೆ.

 ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next