ಮೈಸೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ಗೌರವಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಸೋಮವಾರ ನಗರದಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆ ನಡೆಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯೆಯರು ತಮ್ಮ ಬ್ಯಾಂಕ್ ಪಾಸ್‌ಬುಕ್‌ಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಸ್ಪಂದಿಸುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗ್ರಾಮವೇ ಕೊಂಡಾಡುತ್ತಿದೆ. ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಜೀವವನ್ನು ಲೆಕ್ಕಿಸದೆ ಸೇವೆ ಮಾಡುತ್ತಿದ್ದೇವೆ. ಸರ್ಕಾರ ತಿಂಗಳಿಗೆ ಕೇವಲ ಒಂದು ಮಾಸ್ಕ್, ಒಂದು ಗ್ಲೌಸ್ ನೀಡಿದ್ದು, ರಕ್ಷಣಾ ಪರಿಕರ ನೀಡಿಲ್ಲ ಎಂದು ಆರೋಪಿಸಿದರು. ಮಾಸಿಕ 4 ಸಾವಿರ ರೂ. ಗೌರವಧನ ನೀಡಲಾಗುತ್ತಿದ್ದು, ಪ್ರೋತ್ಸಾಹಧನ ನೀಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಇಲಾಖೆ ಗಮನಕ್ಕೆ ತಂದರೂ ಪ್ರಯೋ ಜನವಾಗಿಲ್ಲ. ಈ ಕೂಡಲೇ ಸರ್ಕಾರ ಆಶಾ ಕಾರ್ಯ ಕರ್ತೆಯರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಯಲ್ಲಿ ಸಂಘದ ಶುಭ ಮಂಗಳ, ಸುನಿತಾ, ಸುನೀತ ಹಾಜರಿದ್ದರು. ಎಐಡಿವೈಒ ಪ್ರತಿಭಟನೆ: ಡೀಸಿ ಕಚೇರಿ ಎದುರು ಜಮಾವಣೆಗೊಂಡು ಎಐಡಿ ವೈಒ ಸಂಘಟನೆಯ ಪದಾಧಿಕಾರಿಗಳು ಆಶಾ ಕಾರ್ಯಕರ್ತೆಯರ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆಶಾ ಕಾರ್ಯಕರ್ತೆಯರೊಂದಿಗೆ ನಾವೆದ್ದೇವೆ. ಅವರ ಹೋರಾಟಕ್ಕೆ ನ್ಯಾಯ ಸಿಗಬೇಕು ಎಂಬ ಘೋಷಣೆಯ ನಾಮ ಫಲಕ ಪ್ರದರ್ಶಿಸಿ, ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಡೀಸಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಸವರಾಜು, ಚಂದ್ರಕಲಾ ಸೇರಿದಂತೆ ಇತರರಿದ್ದರು.