Advertisement

ಆಶಾ, ಸುಗಮಕಾರರನ್ನು ಪ್ರತ್ಯೇಕಿಸದಿರಲು ಆಗ್ರಹ

12:28 PM May 20, 2017 | |

ಬೆಂಗಳೂರು: ಆಶಾ ಕಾರ್ಯಕರ್ತರು ಮತ್ತು ಸುಗಮಕಾರರನ್ನು ಯಾವುದೇ ಕಾರಣಕ್ಕೂ ಪ್ರತ್ಯೇಕಿಸಬಾರದು. ಹಾಗೊಂದು ವೇಳೆ ಸರ್ಕಾರ ಬೇರ್ಪಡಿಸಿದರೆ, ಹೋರಾಟ ಅನಿವಾರ್ಯ ಎಂದು ಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಕೆ. ರಾಧಾಕೃಷ್ಣ ಎಚ್ಚರಿಸಿದರು. 

Advertisement

ನಗರದ ವರದಾಚಾರ್‌ ಕಲಾಕ್ಷೇತ್ರದಲ್ಲಿ ಶುಕ್ರವಾರ ರಾಜ್ಯ ಸಂಯುಕ್ತ ಆಶಾ ಸುಗಮಕಾರರ ಸಂಘ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಆಶಾ ಸುಗಮಕಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೆ ಸರ್ಕಾರ ಆಶಾ ಸುಗಮಕಾರರಿಂದ ಬಿಟ್ಟುಬಿಡದೆ ಆಶಾ ಕಾರ್ಯಕರ್ತರು ಮತ್ತು ಸುಗಮಕಾರರ ಕೆಲಸ ಮಾಡಿಸಿಕೊಂಡಿದೆ. ಈಗ ಏಕಾಏಕಿ ಬೇರ್ಪಡಿಸುವ ಮೂಲಕ ಬೀದಿಗೆ ತಳ್ಳುತ್ತಿದೆ. ಬೇಡಿಕೆಗೆ ಈಡೇರಿಕೆಗೆ ಸಂಘಟಿತ ಹೋರಾಟ ಒಂದೇ ದಾರಿ ಎಂದು ಹೇಳಿದರು. 

ವರ್ಷದ ಹಿಂದೆ ಗಾರ್ಮೆಂಟ್‌ ಕಾರ್ಖಾನೆಗಳ ನೌಕರರು ಹೋರಾಟ ಮಾಡಿದ ಫ‌ಲವಾಗಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆಸರಿಯಬೇಕಾಯಿತು. ಇದರ ಪರಿಣಾಮ ಗಾರ್ಮೆಂಟ್‌ ನೌಕರರಿಗೆ “ಭವಿಷ್ಯ’ ಸಿಕ್ಕಿತು. ಅದೇ ರೀತಿ, ಆಶಾ ಸುಗಮಕಾರರು ಕನಿಷ್ಠ ವೇತನ ಸೇರಿ ಮತ್ತಿತರ ಬೇಡಿಕೆಗಳು ಈಡೇರಬೇಕಾದರೆ ಸಂಘಟಿತ ಮತ್ತು ಶಿಸ್ತುಬದ್ಧ ಹೋರಾಟ ಮಾಡಬೇಕಾಗುತ್ತದೆ ಎಂದರು. 

ವಿಂಗಡಣೆಯೇ ತಪ್ಪು: ಎಐಯುಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಎನ್‌. ಶ್ರೀರಾಮ್‌ ಮಾತನಾಡಿ, ಆಶಾ ಸುಗಮಕಾರರನ್ನು ಸರ್ಕಾರದ ಯೋಜನೆಗಳಡಿ ಕಾರ್ಯನಿರ್ವಹಿಸುವವರು ಎಂದು ವಿಂಗಡಣೆ ಮಾಡುವುದೇ ತಪ್ಪು. ಹೀಗೆ ಪರಿಗಣಿಸುವ ಮೂಲಕ ಸರ್ಕಾರ ಗೌರವಧನಕ್ಕೆ ಸೀಮಿತಗೊಳಿಸಿ, ಕನಿಷ್ಠ ವೇತನ ನೀಡುವ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸ್ವತಃ ಸರ್ಕಾರವು ಎರಡೆರಡು ಕೆಲಸ (ಆಶಾ ಕಾರ್ಯಕರ್ತೆ ಮತ್ತು ಆಶಾ ಸುಗಮಕಾರರು)ಗಳನ್ನು ಮಾಡಲು ಕೊಡುತ್ತದೆ. ಈಗ ಮತ್ತೆ ಬೇಡ ಒಂದೇ ಕೆಲಸ ಮಾಡಿ ಎಂದು ಹೇಳುತ್ತಿದೆ. ಈ ಧೋರಣೆಯಿಂದ ಆಶಾ ಸುಗಮಕಾರರ ಮಾಸಿಕ ವೇತನ ಅರ್ಧಕ್ಕರ್ಧ ಇಳಿಕೆಯಾಗುತ್ತದೆ ಎಂದು ಆರೋಪಿಸಿದರು. 

Advertisement

ಆಶಾ ಸುಗಮಕಾರರ ಸಂಘದ ಸಂಚಾಲಕಿ ಡಿ. ನಾಗಲಕ್ಷ್ಮೀ ಮಾತನಾಡಿ, ಸರ್ಕಾರದ ಬದಲಾವಣೆಯಿಂದ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಹೋರಾಟಗಳೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿವೆ. ಆಶಾ ಸುಗಮಕಾರರು, ಕಾರ್ಯಕರ್ತರ ಕೆಲಸ ಮಾಡುವಂತಿಲ್ಲ ಎಂದು ಆದೇಶ ಕೇಂದ್ರದಿಂದ ಬಂದಿದೆ. ಆದರೆ, ಇನ್ನೂ ರಾಜ್ಯ ಸರ್ಕಾರ ಆದೇಶ ಮಾಡಿಲ್ಲ. ಈ ಮಧ್ಯೆ ಈಗಾಗಲೇ ಸುಗಮಕಾರರ ಮೇಲೆ ಒತ್ತಡ ಶುರುವಾಗಿದೆ. ಇದನ್ನು ಎದುರಿಸಲು ನಾವು ಸಿದ್ಧಗೊಳ್ಳಬೇಕಿದೆ ಎಂದು ಹೇಳಿದರು.  

ಆಶಾ ಸುಗಮಕಾರರಿಗೆ ಕನಿಷ್ಠ ವೇತನ ನೀಡಬೇಕು. ಆಶಾ ಕಾರ್ಯಕರ್ತರಿಗೆ ಸಿಗುವ ಎಲ್ಲ ಸೌಲಭ್ಯಗಳೂ ಸುಗಮಕಾರರಿಗೂ ಸಿಗಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘಟಿತ ಹೋರಾಟ ರೂಪಿಸಬೇಕು ಎಂದರು. ಆಶಾ ಸುಗಮಕಾರರ ಸಂಘದ ಸಂಚಾಲಕ ಕೆ. ಸೋಮಶೇಖರ್‌, ಪದಾಧಿಕಾರಿಗಳಾದ ಎನ್‌.ಎಸ್‌. ವೀರೇಶ್‌, ಉಮಾದೇವಿ, ಎಚ್‌.ಟಿ. ಮಲ್ಲಿಕಾರ್ಜುನ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next