Advertisement

ಇಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯರು ಪುರುಷರೆದುರೇ ಬಟ್ಟೆ ಬದಲಾಯಿಸಬೇಕು

12:13 PM Feb 06, 2017 | udayavani editorial |

ಹೊಸದಿಲ್ಲಿ : ಕಳೆದ ಎರಡು ತಿಂಗಳಲ್ಲಿ 11 ಮಕ್ಕಳ ಸಾವನ್ನು ಕಂಡಿರುವ ದಿಲ್ಲಿ ಸರಕಾರದ ಮಾನಸಿಕ ಅಸ್ವಸ್ಥರ “ಆಶಾಕಿರಣ’ ಕೇಂದ್ರದ ಬಗ್ಗೆ ಇದೀಗ ಇನ್ನೂ ಕೆಲವು ಹೊಸ ಆಘಾತಕಾರಿ ವಿಷಯಗಳು ಹೊರಬಂದಿವೆ.

Advertisement

ಆಶಾ ಕಿರಣ ಕೇಂದ್ರಕ್ಕೆ  ಮೊನ್ನೆ ಶನಿವಾರ ಏಕಾಏಕಿ ಅಚ್ಚರಿಯ ಭೇಟಿ ನೀಡಿದ್ದ ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಅವರಿಗೆ ಇಲ್ಲಿ ಸಾರಾಸಗಟು ಮಾನವ ಹಕ್ಕುಗಳ ಉಲ್ಲಂಘನೆ, ಅತ್ಯಂಕ ಕೊಳಕಾಗಿರುವ, ಗಬ್ಬು ವಾಸನೆ ಬೀರುವ ಶೌಚಾಲಯಗಳು, ಸಿಬಂದಿ ಕೊರತೆ ಮುಂತಾದ ಹತ್ತು ಹಲವು ನ್ಯೂನತೆಗಳು ಕಂಡುಬಂದಿವೆ.

“ಸ್ನಾನದ ಕೋಣೆಗೆ ಹೋಗುವ ಸರತಿಯ ಸಾಲಲ್ಲಿ ನಿಲ್ಲುವ ಮಹಿಳೆಯರಿಗೆ ಅಲ್ಲೇ ಬಟ್ಟೆ ಬಿಚ್ಚಿ ನಿಲ್ಲುವಂತೆ ಮಾಡಲಾಗುತ್ತಿದೆ. ಕಾರಿಡಾರ್‌ ಒಳಗೆ ಮಹಿಳೆಯರು ಪೂರ್ತಿ ನಗ್ನರಾಗಿ ಸುತ್ತಾಡುವುದು ಕಂಡು ಬರುತ್ತದೆ’ ಎಂದು ಸ್ವಾತಿ ಮಲಿವಾಲ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

“ಕಾರಿಡಾರ್‌ನಲ್ಲಿ ಸಿಸಿಟಿವಿ ಗಳನ್ನು ಹಾಕಲಾಗಿದೆ. ಆದರೆ ಇವುಗಳಲ್ಲಿ ದಾಖಲಾಗುವ ಮಹಿಳೆಯರ ಚಟುವಟಿಕೆಗಳನ್ನು ಗಮನಿಸುವವರೆಲ್ಲ ಪುರುಷ ಸಿಬಂದಿಗಳೇ ಆಗಿದ್ದಾರೆ; ಮಹಿಳೆಯರು ನಗ್ನರಾಗಿ ಕಾರಿಡಾರ್‌ಗಳಲ್ಲಿ ಸುತ್ತಾಡುವ ದೃಶ್ಯಗಳೆಲ್ಲ ಅಂತೆಯೇ ಸಿಸಿಟಿವಿಗಳಲ್ಲಿ ದಾಖಲಾಗಿದೆ. ಅದನ್ನು ಕಂಡು ನಾನು ದಂಗಾಗಿದ್ದೇನೆ’ ಎಂದು ಮಲಿವಾಲ್‌ ಹೇಳಿದರು.

ಕೇಂದ್ರದಲ್ಲಿ ನೆಲ ಗುಡಿಸುವ, ನೆಲ ಒರೆಸುವ, ಬಟ್ಟೆ ತೊಳೆವ ಕೆಲಸಗಳನ್ನು  ಮಾನಸಿಕ ಅಸ್ವಸ್ಥ ಮಹಿಳೆಯರಿಂದಲೇ ಮಾಡಿಸಲಾಗುತ್ತಿದೆ ಮತ್ತು ಇವರಿಂದಲೇ ತಮ್ಮ ಸಹವರ್ತಿಗಳ ಆರೈಕೆ ಕೆಲಸವನ್ನು ಮಾಡಿಸಲಾಗುತ್ತಿದೆ; ಒಂದೇ ಹಾಸಿಗೆಯನ್ನು ಕನಿಷ್ಠ 4 ಮಂದಿ ಹಂಚಿಕೊಳ್ಳುವಂತೆ ಕಡ್ಡಾಯ ಮಾಡಲಾಗುತ್ತಿದೆ ಎಂದು ಮಲಿವಾಲ್‌ ಹೇಳಿದರು. 

Advertisement

ಕೇಂದ್ರದಲ್ಲಿನ ಗಂಭೀರ ಸ್ಥಿತಿಯ ಬಗ್ಗೆ ಡಿಸಿಡಬ್ಲ್ಯು ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ನೊಟೀಸ್‌ ಜಾರಿ ಮಾಡಲಾಗಿದ್ದು 72 ತಾಸುಗಳ ಒಳಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಮಲಿವಾಲ್‌ ಹೇಳಿದರು. 

ಈ ನಡುವೆ ಸಮಾಜ ಕಲ್ಯಾಣ ಇಲಾಖೆಯ ಹೊಣೆಗಾರಿಕೆ ಹೊತ್ತಿರುವ ದಿಲ್ಲಿ  ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಅವರು ಈ ಗಂಭೀರ ಲೋಪಗಳಿಗೆ ನೇರವಾಗಿ ಕಾರಣರಾಗಿದ್ದು ಅವರು ತತ್‌ಕ್ಷಣವೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. 

ಆಶಾಕಿರಣ ನಿಲಯದಲ್ಲಿ ಈಚೆಗೆ 11 ಮಕ್ಕಳ ದಾರುಣ ಸಾವು ಸಂಭವಿಸಿದ್ದು ಇದರ ನೈತಿಕ ಹೊಣೆಗಾರಿಕೆಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಹಿಸಬೇಕು ಮತ್ತು ಆಶಾ ಕಿರಣ ನಿಲಯಗಳಲ್ಲಿನ ಗಂಭೀರ ದುಃಸ್ಥಿತಿಗಳನ್ನು ಸರಿಪಡಿಸುವ ದಿಶೆಯಲ್ಲಿ ಉನ್ನತಾಧಿಕಾರದ ಸಮಿತಿಯೊಂದನ್ನು ನೇಮಿಸಬೇಕು ಎಂದು ಕೂಡ ಬಿಜೆಪಿ ಒತ್ತಾಯಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next