ಚಿಕ್ಕಬಳ್ಳಾಪುರ: ಕಳೆದ 9 ತಿಂಗಳಿಂದ ವೇತನ ಕೊಟ್ಟಿಲ್ಲ ಎಂದು ಆರೋಪಿಸಿ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಗುರುವಾರ ಜಿಲ್ಲಾಡಳಿತ ಭವನದ ಎದುರು ಆರೋಗ್ಯ ಇಲಾಖೆಯ ನೂರಾರು ಆಶಾ ಕಾರ್ಯಕರ್ತೆಯರು ದಿಢೀರನೇ ಪ್ರತಿಭಟನಾ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಸುಮಾರು 1,900 ಕ್ಕೂ ಹೆಚ್ಚು ಕಾರ್ಯಕರ್ತರಿಗೆ 9 ತಿಂಗಳಿಂದ ವೇತನ ಕೊಟ್ಟಿಲ್ಲ. ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಜಿಲ್ಲಾಡಳಿತ ಭವನದ ಎದುರು ಆಶಾ ಕಾರ್ಯ ಕರ್ತರು ತಮ್ಮ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ಆಶಾ ನೌಕರರ ಸಂಘದ (ಸಿಐಟಿಯು) ಜಿಲ್ಲಾಧ್ಯಕ್ಷೆ ಗಂಜಿಗುಂಟೆ ಲಕ್ಷ್ಮಿದೇವಮ್ಮ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರುರು, ವೇತನ ಕೊಡ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.
ಇಷ್ಟಾನುಸಾರ ವೇತನ ಬಿಡುಗಡೆ: ಇಲಾಖೆ ಕೆಲಸ ಕಾರ್ಯಗಳನ್ನು ಬಿಟ್ಟು ಸರ್ಕಾರದ ವಿವಿಧ ಕೆಲಸ ಕಾರ್ಯಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಮಾಡಿಸಿಕೊಳ್ಳುತ್ತಿದ್ದರೂ ಕನಿಷ್ಠ ಪ್ರೋತ್ಸಾಹಧನ ಕೊಡುತ್ತಿಲ. ಇಲಾಖೆಯಲ್ಲಿ ಎಲ್ಲರಿಗೂ ಒಂದೇ ಬಾರಿ ವೇತನ ಕೊಡದೇ ಅವರ ಇಷ್ಟಾನುಸಾರ ವೇತನ ಬಿಡುಗಡೆ ಮಾಡಲಾಗುತ್ತಿದೆ ಎಂದು ದೂರಿದರು. ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ, ಇಲಾಖೆಯಲ್ಲಿ ಹೊಸದಾಗಿ ನೇಮಕಗೊಳ್ಳುವ ಆಶಾ ಕಾರ್ಯಕರ್ತರಿಗೆ ಈ ಹಿಂದೆ ಹೆರಿಗೆ ಮಾಡಿಸಿದರೆ 250 ರೂ. ಭತ್ಯೆ ಕೊಡುತ್ತಿದ್ದರು. ಆದರೆ ಈಗ 100 ರೂ.ಗೆ ಇಳಿಕೆ ಆಗಿದೆ ಎಂದರು.
ಕೆಲವು ಕಡೆ ದುರುದ್ದೇಶ ದಿಂದ ಆಶಾ ಕಾರ್ಯ ಕರ್ತೆಯರ ಮೇಲೆ ಇಲಾಖೆ ಮೇಲ್ವಿಚಾರಕರು ಇಲ್ಲಸಲ್ಲದ ಆರೋಪಗಳನ್ನು ಹೊರೆಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಕಲಾವತಿ, ಪದಾಧಿಕಾರಿಗಳಾದ ರಾಧ, ಪಾರ್ವತಿ, ಶೋಭಾ, ನಂಜಮ್ಮ, ಮುನಿನಾರಾಯಣಮ್ಮ ಸೇರಿದಂತೆ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ, ತಾಲೂಕುಗಳಿಂದ ಆಗಮಿಸಿಆಶಾ ಕಾರ್ಯಕರ್ತೆ ಯರು ಭಾಗವಹಿಸಿದ್ದರು.