Advertisement

ಬೇಡಿಕೆ ಈಡೇರಿಕೆಗೆ ಆಶಾ ಕಾರ್ಯಕರ್ತೆಯರ ಆಗ್ರಹ

10:12 PM Jul 10, 2019 | Lakshmi GovindaRaj |

ಮೈಸೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ ಗೌರವ ಧನ 12 ಸಾವಿರ ರೂ. ನಿಗದಿಪಡಿಸಬೇಕು, ಆಶಾ ಸಾಫ್ಟ್ ಅಥವಾ ಆರ್‌ಸಿಎಚ್‌ ಪೋರ್ಟಲ್‌ಗೆ ಆಶಾ ಪ್ರೋತ್ಸಾಹಧನದ ಜೋಡಣೆ ರದ್ದುಪಡಿಸಿ, ಬಾಕಿ ಉಳಿಸಿಕೊಂಡಿರುವ ಗೌರವಧನ-ಪ್ರೋತ್ಸಾಹಧನವನ್ನು ಕೂಡಲೇ ಒಂದೇ ಬಾರಿಗೆ ನೀಡಿ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

Advertisement

ಕಳೆದ 9-10 ತಿಂಗಳಿಂದ ಬಾಕಿಯಿರುವ ಪ್ರೋತ್ಸಾಹಧನವನ್ನು ಒಂದು ಸಾವಿರ ಜನಸಂಖ್ಯೆಗೆ ಕಾರ್ಯನಿರ್ವಹಿಸುವ ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 3 ಸಾವಿರ ರೂ. ನೀಡಬೇಕು. ಇದನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಅಥವಾ 9 ತಿಂಗಳಲ್ಲಿ ಪ್ರತಿ ಆಶಾ ಮಾಡಿದ ಮ್ಯಾನ್ಯುವಲ್‌ ವರದಿ ಸಂಗ್ರಹಿಸಿ ಪ್ರೋತ್ಸಾಹಧನವನ್ನು ಪಾವತಿ ಮಾಡಬೇಕು. ಒಂದೇ ಬಾರಿಗೆ ಪ್ರೋತ್ಸಾಹಧನ ನೀಡಬೇಕು.

ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಆಶಾಗಳ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಮತ್ತು ಮರಣ ಹೊಂದಿದಲ್ಲಿ ಆಶಾ ಕುಟುಂಬಕ್ಕೆ ಪರಿಹಾರ ಒದಗಿಸಿ ಎಂದು ಆಗ್ರಹಿಸಿದರು. ಕಳೆದ 5 ವರ್ಷದಿಂದ ಅಪಘಾತಕ್ಕೀಡಾದ ಆಶಾಳಿಗೆ ಮತ್ತು ಮರಣ ಹೊಂದಿದ ಆಶಾ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ನಿವೃತ್ತಿ ಹೊಂದುವ ಆಶಾಗಳಿಗೆ ಪಿಂಚಣಿ ನೀಡಬೇಕು. ನಿವೃತ್ತಿ ಪರಿಹಾರ ನೀಡಬೇಕು.

ಗುಡ್ಡಗಾಡು, ಕಾಡು ಪ್ರದೇಶದ ಆಶಾಗಳಿಗೆ ವಿಶೇಷ ಭತ್ಯೆ, ಆಶಾ ಕಾರ್ಯಕರ್ತೆಯರಿಗೆ ಹೆರಿಗೆ ರಜೆ ನೀಡಿ, ರಜೆಯಲ್ಲಿ ದೆಹಲಿ ಮಾದರಿಯಲ್ಲಿ ಮಾಸಿಕ ಗೌರವಧನ ನೀಡಿ, ಪ್ರತೀ ದಿನ ಸರ್ವೆ, ಜಾಥಾ ಅಥವಾ ಜಿಲ್ಲಾ, ತಾಲೂಕು ಕೇಂದ್ರದ ಸಭೆಗಳಿಗೆ 300 ರೂ. ನಿಗದಿಪಡಿಸಿ, ಅಂದೇ ಆ ದಿನದ ದಿನಭತ್ಯೆ, ಪ್ರಯಾಣ ಭತ್ಯೆ ನೀಡಿರಿ, ಪ್ರತಿ ತಿಂಗಳ ವೇತನವನ್ನು ನಿಗದಿತ ದಿನಾಂಕದೊಳಗೆ ಬಿಡುಗಡೆ ಮಾಡಿ, ಯಾವ ತಿಂಗಳ ವೇತನೆ ಬಿಡುಗಡೆಯಾಗುತ್ತದೋ ಆ ತಿಂಗಳ ವೇತನವೆಂದು ಆಶಾ ಪಾಸ್‌ಬುಕ್‌ನಲ್ಲಿ ನಮೂದಿಸಲು ಕ್ರಮಕೈಗೊಳ್ಳಬೇಕು.

ಕೇಂದ್ರದ ಮಾರ್ಗಸೂಚಿಯಂತೆ ನಗರ ಆಶಾಗಳಿಗೆ 2 ರಿಂದ 2500 ಜನಸಂಖ್ಯೆಗೆ ಮಾತ್ರ ಕಾರ್ಯನಿರ್ವಹಿಸಲು ಕ್ರಮ, 10 ರಿಂದ 20 ಆಶಾ ಕಾರ್ಯಕರ್ತೆಯರಿಗೆ ಒಬ್ಬರಂತೆ ಆಶಾ ಸುಗಮಗಾರರನ್ನು ನೇಮಿಸಿ, ಆಶಾ ಕೆಲಸದಿಂದ ಬೇರ್ಪಡಿಸಿ, ಮಾಸಿಕ ವೇತನ 12 ಸಾವಿರ ರೂ. ನಿಗದಿಪಡಿಸಬೇಕು. ಟಿಎ ನಿಗದಿಮಾಡಿ ಇವರಿಗೆ ನೇಮಕಾತಿ ಆದೇಶ ನೀಡಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisement

ಸಂಘದ ಜಿಲ್ಲಾ ಸಲಹೆಗಾರರಾದ ಸಂಧ್ಯಾ ಪಿ.ಎಸ್‌., ಜಿಲ್ಲಾಧ್ಯಕ್ಷೆ ಶುಭಮಂಗಳ, ನಗರ ಅಧ್ಯಕ್ಷೆ ಸೀಮಾ, ಕಾರ್ಯದರ್ಶಿ ಸುನೀತಾ, ಮಂಜುಳಾ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next