Advertisement

ಎಸ್ಯಾಟ್‌ ಮಿಸೈಲ್‌ ಸಾಧನೆಯನ್ನು ಪ್ರಧಾನಿ ಮೋದಿಯವರೇ ಪ್ರಕಟಿಸಿದ್ದೇಕೆ: ನಿರ್ಮಲಾ ಉತ್ತರ

09:17 AM Apr 02, 2019 | Team Udayavani |

ಹೊಸದಿಲ್ಲಿ : ಭಾರತೀಯ ವಿಜ್ಞಾನಿಗಳ ಮಹೋನ್ನತ ಸಾಧನೆಯಾಗಿರುವ ಎಸ್ಯಾಟ್‌ ಮಿಸೈಲ್‌ ಯಶಸ್ವೀ ಪರೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ ಬೇರೆ ಯಾರಾದರೂ ಪ್ರಕಟಿಸಿರುತ್ತಿದ್ದರೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಮಹತ್ವವೇ ಕಡಿಮೆಯಾಗುತ್ತಿತ್ತು. ಹಾಗಾಗಿ ವಿಜ್ಞಾನಿಗಳ ಪರಿಶ್ರಮವನ್ನು ಅಭಿನಂದಿಸಿ ಪ್ರಧಾನಿ ಮೋದಿ ಅವರೇ ದೇಶದ ಈ ಮಹೋನ್ನತ ಸಾಧನೆಯನ್ನು ರಾಷ್ಟ್ರವನ್ನುದ್ದೇಶಿಸಿ ಟಿವಿ ಮತ್ತು ರೇಡಿಯೋದಲ್ಲಿ ಭಾಷಣ ಮಾಡುವ ಮೂಲಕ ಪ್ರಕಟಿಸಿದರು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಝೀ ನ್ಯೂಸ್‌ ಏರ್ಪಡಿಸಿದ ಇಂಡಿಯಾ ಕಾ ಡಿಎನ್‌ಎ ಸಂವಾದ ವೇದಿಕೆಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಅವರು ಬಾಲಾಕೋಟ್‌ ವಾಯು ದಾಳಿ, ಉಗ್ರ ನಿಗ್ರಹದಲ್ಲಿ ಯುಪಿಎ ಸರಕಾರದ ವೈಫ‌ಲ್ಯ ಮತ್ತು ಎಸ್ಯಾಟ್‌ ಮಿಸೈಲ್‌ ಪರೀಕ್ಷೆಯೇ ಮೊದಲಾದ ಹಲವಾರು ರಕ್ಷಣಾ ಮಹತ್ವದ ವಿಷಯಗಳ ಕುರಿತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಸತ್‌ ಚುನಾವಣೆ ಅಲ್ಲದಿದ್ದರೂ ಕೇಂದ್ರ ಸರಕಾರ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್‌ ವಾಯು ದಾಳಿಯನ್ನು ನಡೆಸಿಯೇ ತೀರುತ್ತಿತ್ತು ಎಂದು ನಿರ್ಮಲಾ ಹೇಳಿದರು.

ದೇಶದ ಎಸ್ಯಾಟ್‌ ಮಿಸೈಲ್‌ ಸಾಧನೆಯು ಅಮೆರಿಕ, ರಶ್ಯ ಮತ್ತು ಚೀನದ ಬಳಿಕ ಭಾರತ ಗೈದಿರುವ ಮಹೋನ್ನತ ಸಾಧನೆಯಾಗಿದೆ. ಇದನ್ನು ದೇಶದ ವಿಜ್ಞಾನಿಗಳೇ ಪ್ರಕಟಿಸಬಹುದಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಅದಕ್ಕಿರುವ ಮಹತ್ವವನ್ನು ಅರಿತು ಆ ಪ್ರಕಟನೆಯನ್ನು ಪ್ರಧಾನಿ ಮೋದಿ ಅವರೇ ಖುದ್ದು ಜಗಜ್ಜಾಹೀರು ಮಾಡಿದರು. ಇದರಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲ ಎಂದು ಚುನಾವಣಾ ಆಯೋಗ ಕೂಡ ಕ್ಲೀನ್‌ ಚಿಟ್‌ ನೀಡಿತು ಎಂದು ಸಚಿವೆ ನಿರ್ಮಲಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next