ಹೊಸದಿಲ್ಲಿ : ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು, ಜಾಮೀನು ಬಿಡುಗಡೆ ಪಡೆಯುವುದಕ್ಕಾಗಿ ತನ್ನ ದೇಹಾರೋಗ್ಯದ ಬಗ್ಗೆ ನಕಲಿ ವೈದ್ಯಕೀಯ ದಾಖಲೆ ಪತ್ರಗಳನ್ನು ಸಲ್ಲಿಸಿದ ಕಾರಣಕ್ಕೆ ಆತನ ವಿರುದ್ಧ ಹೊಸ ಎಫ್ಐಆರ್ ದಾಖಲಿಸುವಂತೆ ಇಂದು ಸೋಮವಾರ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮಾತ್ರವಲ್ಲದೆ ಈ ವಂಚನೆ ಎಸಗಿದ್ದಕ್ಕಾಗಿ ಆತನಿಗೆ ನ್ಯಾಯಾಲಯ ಒಂದು ಲಕ್ಷ ರೂ. ದಂಡ ಹೇರಿದೆ.
ಎರಡು ರೇಪ್ ಕೇಸ್‌ಗಳಲ್ಲಿ, ವೈದ್ಯಕೀಯ ನೆಲೆಯಲ್ಲಿ ಆಸಾರಾಂ ಬಾಪು ಜಾಮೀನು ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿತು.
2013ರ ಆಗಸ್ಟ್ 3ರಂದು ಜೋಧ್‌ಪುರ ಪೊಲೀಸರು ರೇಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಸಾರಾಂ ಬಾಪು ವನ್ನು ಬಂಧಿಸಿದ್ದರು. ಅಲ್ಲಿಂದೀಚೆಗೆ ಆತ ಜೈಲಿನಲ್ಲಿದ್ದಾರೆ.
ಜೋಧ್‌ಪುರ ಆಶ್ರಮಕ್ಕೆ ಸಮೀಪದ ಗ್ರಾಮದಲ್ಲಿ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಆಸಾರಾಂ ತನ್ನ ಮೇಲೆ ರೇಪ್ ಎಸಗಿದ್ದುದಾಗಿ ಹದಿಹರೆಯದ ಬಾಲಕಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದಳು.
ಈ ಹಿಂದೆ ಗುಜರಾತ್ ಸರಕಾರವು ಆಸಾರಾಂ ಬಾಪು ವಿರುದ್ದದ ಅತ್ಯಾಚಾರದ ಕೇಸುಗಳನ್ನು ತ್ವರಿತ ಗತಿಯಲ್ಲಿ ನಿರ್ವಹಿಸಲಾಗುತ್ತಿದ್ದು ಮುಂದಿನ ಆರು ತಿಂಗಳ ಒಳಗಾಗಿ ವಿಚಾರಣೆಯನ್ನು ಮುಗಿಸಲಾಗುವುದರಿಂದ ಆತನಿಗೆ ಜಾಮೀನು ಮಂಜೂರು ಮಾಡಕೂಡದೆಂದು ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠಕ್ಕೆ ಹೇಳಿತ್ತು.