ಸುರಪುರ: ನಗರದ ಆಸರ್ ಮೊಹಲ್ಲಾದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ತಗುಲಿರುವ ಸುದ್ದಿ ತಾಲೂಕಿನ ಜನತೆಯನ್ನು ಆತಂಕಕ್ಕೀಡು ಮಾಡಿದ್ದು, ಮಂಗಳವಾರ ನಗರವನ್ನು ಮತ್ತೂಮ್ಮೆ ಲಾಕ್‌ಡೌನ್ ಮಾಡಲಾಗಿದೆ.
ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ನಗರದ ರಸ್ತೆಗಳು ಬಿಕೋ ಎನ್ನುತ್ತಿವೆ. ಕೆಲ ಬಡಾವಣೆಗಳ ಜನರು ತಮ್ಮ ತಮ್ಮ ಬಡಾವಣೆಗಳಲ್ಲಿ ಮುಳ್ಳು, ತಂತಿ ಬೇಲಿ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಗ್ರಾಮೀಣ ಜನರು ಸಹ ನಗರಕ್ಕೆ ಹೆಜ್ಜೆ ಹಾಕಿಲ್ಲ. ಕೆಲ ಗ್ರಾಮಗಳಲ್ಲಿ ಮುಳ್ಳು ಬೇಲಿ ಹಾಕಿದರೆ ಇನ್ನೂ ಕೆಲ ಗ್ರಾಮಗಳ ರಸ್ತೆಯನ್ನೆ ಅಗೆದು ತಗ್ಗು ಗುಂಡಿ ತೋಡಿಬಿಟ್ಟಿದ್ದಾರೆ. ಆಸರ್ ಮೊಹಲ್ಲಾವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
ಶಾಸಕ ರಾಜುಗೌಡ ಭೇಟಿ: ಆಸರ್ ಮೊಹಲ್ಲಾದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಶಾಸಕ ರಾಜುಗೌಡ ಮಂಗಳವಾರ ಬಡಾವಣೆಗೆ ಭೇಟಿ ನೀಡಿದರು.ಮೊಹಲ್ಲಾ ಸೀಲ್‌ಡೌನ್ ಮಾಡಿಸಿ ಬಡಾವಣೆಯಲ್ಲಿ ಸೋಂಕು ನಿವಾರಣಾ ಔಷಧಿ ಸಿಂಪಡಿಸಲು ಸೂಚಿಸಿದರು. ಬಳಿಕ ಅಲ್ಲಿಯ ಜನತೆಗೆ ಧೈರ್ಯ ತುಂಬಿದರು. ಪ್ರಕರಣದಿಂದ ಯಾರು ಭಯಪಡಬಾರದು. ಅನಾವಶ್ಯಕವಾಗಿ ಹೊರಗಡೆ ತಿರುಗಾಡಬಾರದು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿ ಹೇಳಿದರು.
ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ, ಟಿಎಚ್‌ಒ ಡಾ| ಆರ್.ವಿ.ನಾಯಕ, ಸಿಪಿಐ ಸಾಹೇಬಗೌಡ ಪಾಟೀಲ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಇದ್ದರು. ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ: ವಲಸೆ ಕಾರ್ಮಿಕರಿಗೆ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರಕ್ಕೆ ಶಾಸಕ ರಾಜುಗೌಡ ಭೇಟಿ ನೀಡಿದರು. ಮಾಸ್ಕ್, ಸಾಮಾಜಿಕ ಅಂತರ, ಸ್ವತ್ಛತೆ ಪಾಲಿಸುವಂತೆ ಮನವಿ ಮಾಡಿದರು.
ಕೋವಿಡ್ ತಡೆಯಲು ಸಿದ್ಧ: ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ರಾಜುಗೌಡ, ಗುಜರಾತಿನ ಅಹ್ಮದಾಬಾದ್‌ನಿಂದ ಬಂದ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯ ಕೋವಿಡ್ ರೂಂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನ ಜನತೆ ಭಯಪಡುವ ಆತಂಕವಿಲ್ಲ. ಕೋವಿಡ್ ತಡೆಯಲು ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸರ್ವ ರೀತಿಯಿಂದಲೂ ಸಿದ್ಧವಾಗಿದೆ ಎಂದರು.