ಪಶ್ಚಿಮ ಬಂಗಾಳದಲ್ಲಿ ಇರುವ ಒಟ್ಟು 42 ಕ್ಷೇತ್ರಗಳ ಪೈಕಿ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು 2 ಸ್ಥಾನ. ಅಲ್ಲಿನ ಹೆಚ್ಚಿನ ಕ್ಷೇತ್ರದಲ್ಲಿ ಜಯ ಸಾಧಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪದೇ ಪದೆ, ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಹಾಲಿ ಸಾಲಿನಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 1957ರಿಂದ 2009ರ ವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್, ಸಿಪಿಎಂ ಅಭ್ಯರ್ಥಿಗಳು ಗೆದ್ದಿದ್ದರು. 2014ರ ಚುನಾವಣೆಯಲ್ಲಿ ಮೋದಿ ಅಲೆ ಪ.ಬಂಗಾಳದಲ್ಲಿಯೂ ಬೀಸಿದ್ದರಿಂದ ಅಸನ್‌ಸೋಲ್ ಕ್ಷೇತ್ರದಲ್ಲಿ ಬಾಬುಲ್ ಸುಪ್ರಿಯೋ ಜಯಗಳಿಸಿದ್ದರು. ಅಂದಿನ ಗೆಲುವಿನ ಅಂತರ ಇದ್ದದ್ದು 70 ಸಾವಿರ ಮತಗಳು.
ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬುಲ್ ಸುಪ್ರಿಯೋ ಹಿನ್ನೆಲೆ ಗಾಯನ ಕ್ಷೇತ್ರವನ್ನೇ ಕಾಯಕವನ್ನಾಗಿಸಿಕೊಂಡಿದ್ದವರು. 2014ರ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಗೊಂಡು ಅಸನ್‌ಸೋಲ್‌ನಿಂದ ಸ್ಪರ್ಧಿಸಿ ಗೆದ್ದರು. 2016ರಲ್ಲಿ ಸಾರ್ವಜನಿಕ ಉದ್ದಿಮೆಗಳು ಮತ್ತು ಭಾರಿ ಕೈಗಾರಿಕೆ ಖಾತೆ ಸಹಾಯಕ ಸಚಿವರಾದರು.
ಈ ಬಾರಿ ತೃಣಮೂಲ್ ಕಾಂಗ್ರೆಸ್‌ನಿಂದ ಬಾಲಿವುಡ್ ನಟಿ, ಬಂಕುರಾ ಕ್ಷೇತ್ರದ ಸಂಸದೆ ಮೂನ್‌ಮೂನ್ ಸೇನ್ ಸ್ಪರ್ಧಿಸಿದ್ದಾರೆ. ಹೀಗಾಗಿ ಈ ಚುನಾವಣೆ ತಾರಾಗಣದ ನಡುವಿನ ಹೋರಾಟವಾಗಿ ಮಾರ್ಪಾಡಾಗಲಿದೆ. ಹಿನ್ನೆಲೆ ಗಾಯಕ ಸುಪ್ರಿಯೋ ಮತ್ತು ನಟಿ ಮೂನ್‌ಮೂನ್ ಸೇನ್‌ಗೆ
ಪಶ್ಚಿಮ ಬಂಗಾಳದಲ್ಲಿ ಅವರದ್ದೇ ಆಗಿರುವ ಅಭಿಮಾನಿ ಬಳಗವಿದೆ. ಸಿಪಿಎಂನಿಂದ ಗೊರಂಗಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆಗೆ ಹೆಸರಾಗಿರುವ ಈ ಕ್ಷೇತ್ರದಲ್ಲಿ ಕಾನೂನು ಬದ್ಧವಾಗಿರುವ ಮತ್ತು ಅಕ್ರಮ ಗಣಿಗಳೂ ಇವೆ. ಟಿಎಂಸಿ ಅಭ್ಯರ್ಥಿ ಮೂನ್‌ಮೂನ್ ಸೇನ್ ಹೇಳುವ ಪ್ರಕಾರ ಈ ಬಾರಿ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿಯಾಗುತ್ತಾರೆ. ಈ ಕ್ಷೇತ್ರದಿಂದ ಟಿಎಂಸಿ ಗೆಲ್ಲುತ್ತದೆ. ತಿರುಗೇಟು ನೀಡಿರುವ ಬಾಬುಲ್ ಸುಪ್ರಿಯೋ ಇಲ್ಲಿ ಇನ್ನೂ ಸಿಪಿಎಂ ಪ್ರಭಾವ ಇದೆ. ಆದರೆ ಟಿಎಂಸಿ- ಬಿಜೆಪಿ ನಡುವೆ ನೇರ ಹೋರಾಟವಿದೆ. ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದೇವೆ ಎನ್ನುವುದನ್ನು ಜನರು ನೋಡಿದ್ದಾರೆ ಎಂದಿದ್ದಾರೆ.
ಮತ ಲೆಕ್ಕಾಚಾರ: ಪಶ್ಚಿಮ ಬಂಗಾಳದಲ್ಲಿ ಅಸನ್‌ಸೋಲ್ 2ನೇ ಅತ್ಯಂತ ದೊಡ್ಡ ನಗರ. ಜಾರ್ಖಂಡ್‌ಗೆ ಸಮೀಪವಾಗಿರುವ ಅಲ್ಲಿ ಕಲ್ಲಿದ್ದಲು, ರೈಲ್ವೆ ಇಲಾಖೆಗೆ ಸಂಬಂಧಿಸಿದ ಕೈಗಾರಿಕೆಗಳು ಇವೆ. ಹೀಗಾಗಿ, ದೇಶದ ವಿವಿಧ ಸ್ಥಳಗಳಿಂದ ಬಂದ ಬೇರೆ ಬೇರೆ ಭಾಷಿಕರು ಅಲ್ಲಿ ನೆಲೆಸಿದ್ದಾರೆ. ಈ ಕ್ಷೇತ್ರದಲ್ಲಿ ಶೇ.36ರಷ್ಟು ಮಂದಿ ಬಂಗಾಳಿ ಭಾಷಿಕರಲ್ಲದ ಮತದಾರರು ಇದ್ದಾರೆ.