ನವದೆಹಲಿ: ಇತ್ತೀಚೆಗೆ ಉತ್ತರಪ್ರದೇಶದ ಮಥುರಾದಲ್ಲಿ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆದ ಘಟನೆ ಕುರಿತಂತೆ ಸೋಮವಾರ (ಫೆ.07) ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತ, ಸರ್ಕಾರದ ಮೌಲ್ಯಮಾಪನದ ಪ್ರಕಾರ, ಸಂಸದ ಒವೈಸಿಗೆ ಇನ್ನು ಮುಂದೆಯೂ ಭದ್ರತಾ ಬೆದರಿಕೆ ಎದುರಿಸಲಿದ್ದು, ಒವೈಸಿ ಝಡ್ ಪ್ಲಸ್ ಭದ್ರತೆಯನ್ನು ಸ್ವೀಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಶ್ರೀರಂಗಪಟ್ಟಣ: ಭೀಕರವಾಗಿ ಹತ್ಯೆಯಾದವರ ಸಾಮೂಹಿಕ ಶವ ಸಂಸ್ಕಾರ
ತೆಲಂಗಾಣ ಸಂಸದ ಒವೈಸಿ ಕೇಂದ್ರ ಸರಕಾರದ ಝಡ್ ಶ್ರೇಣಿಯ ಭದ್ರತೆಯನ್ನು ಸ್ವೀಕರಿಸಬೇಕು. ಒವೈಸಿಗೆ ಇರುವ ಬೆದರಿಕೆಯನ್ನು ಪರಿಗಣಿಸಿ ಬುಲೆಟ್ ಫ್ರೂಪ್ ವಾಹನ ಮತ್ತು ಝಡ್ ಕೆಟಗರಿ ಭದ್ರತೆಯನ್ನು ನೀಡಲಾಗಿದೆ. ಆದರೆ ಅವರ ಹೇಳಿಕೆಯ ಮಾಹಿತಿ ಪ್ರಕಾರ, ಒವೈಸಿ ಕೇಂದ್ರದ ಭದ್ರತೆಯನ್ನು ನಿರಾಕರಿಸಿದ್ದಾರೆ. ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಕೇಂದ್ರದ ಝಡ್ ಶ್ರೇಣಿಯ ಭದ್ರತೆ ಸ್ವೀಕರಿಸುವಂತೆ ಹೇಳಿದರು.
ಅಸಾದುದ್ದೀನ್ ಒವೈಸಿ ಉತ್ತರಪ್ರದೇಶದ ಹಾಪುರ್ ಜಿಲ್ಲೆಗೆ ಭೇಟಿ ನೀಡುವುದು ಪೂರ್ವ ನಿಗದಿವಾಗಿರಲಿಲ್ಲ. ಹೀಗಾಗಿ ಅವರ ಭೇಟಿ ಕುರಿತು ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇರಲಿಲ್ಲವಾಗಿತ್ತು ಎಂದು ಶಾ ಲೋಕಸಭೆಗೆ ತಿಳಿಸಿದ್ದಾರೆ.
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಅಸಾದುದ್ದೀನ್ ಒವೈಸಿ ಬೆಂಗಾವಲು ಪಡೆ ವಾಹನದ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆ ಬೆನ್ನಲ್ಲೇ ಅಸಾದುದ್ದೀನ್ ಒವೈಸಿಗೆ ಝಡ್ ಶ್ರೇಣಿಯ ಭದ್ರತೆಯನ್ನು ನೀಡುವುದಾಗಿ ಹೇಳಿತ್ತು. ಆದರೆ ಒವೈಸಿ ಕೇಂದ್ರದ ಝಡ್ ಶ್ರೇಣಿಯ ಭದ್ರತೆಯನ್ನು ನಿರಾಕರಿಸಿ, ತಾನು ಜನಸಾಮಾನ್ಯರಂತೆ ಇರುವುದಾಗಿ ತಿಳಿಸಿದ್ದರು.