Advertisement

ಚಾಮುಂಡೇಶ್ವರಿಗೆ ಕಡೆ ಆಷಾಢ ಶುಕ್ರವಾರದ ವಿಶೇಷ ಪೂಜೆ

08:57 AM Jul 18, 2020 | Suhan S |

ಮೈಸೂರು: ಕೋವಿಡ್ ಸೋಂಕು ಹರಡುವ ಭೀತಿಯಿಂದ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದ ಹಿನ್ನೆಲೆ ಕಡೆಯ ಆಷಾಢ ಶುಕ್ರವಾರವೂ ಸರಳವಾಗಿ ವಿಶೇಷ ಪೂಜೆಗಳು ನೆರವೇರಿದವು.

Advertisement

ಪೂಜಾ ಕೈಂಕರ್ಯ: ಆಷಾಢ ಮಾಸದ ಕಡೆಯ ಶುಕ್ರವಾರದ ಅಂಗವಾಗಿ ಬೆಟ್ಟದಲ್ಲಿ ಬೆಳಗ್ಗೆ 5.30ರಿಂದಲೇ ಪೂಜಾ ಕೈಂಕರ್ಯ ನಡೆಯಿತು. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣದ ಒಳಗೇ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದ್ದು, ಕೊರೊನಾ ಭೀತಿಯಿಂದ ಬೆಳಗ್ಗೆ 7.30ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಬೆಳಗ್ಗೆ ಬರಿಗಾಲಿನಲ್ಲಿ ಬೆಟ್ಟ ಹತ್ತುವ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಬೆಟ್ಟಕ್ಕೆ ತೆರಳಲು ನಿರ್ಬಂಧ ಇದ್ದರೂ ಅದನ್ನು ಅವರು ಲೆಕ್ಕಿಸಲಿಲ್ಲ. ಅವರ ಬೆಂಬಲಿಗರೂ ಬೆಟ್ಟ ಏರಿ ದೇವಿಯ ದರ್ಶನ ಪಡೆದರು.

ತಾರತಮ್ಯಕ್ಕೆ ಆಕ್ರೋಶ: ಚಾಮುಂಡೇಶ್ವರಿ ದರ್ಶನ ಪಡೆಯಲು ಆಗಮಿಸಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌, ನಗರ ಪಾಲಿಕೆ ಸದಸ್ಯೆ ಭಾಗ್ಯಾ ಅವರನ್ನು ಪೊಲೀಸರು ಬೆಟ್ಟದ ಮಾರ್ಗದ ಮುಖ್ಯ ದ್ವಾರದ ಬಳಿಯೇ ತಡೆದು ಹಿಂದಕ್ಕೆ ಕಳುಹಿಸಿದರು. ಈ ಸಂದರ್ಭ ಭಾಗ್ಯ ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸರ ತಾರತಮ್ಯ ನೀತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಹೇಗೆ ಒಳಗೆ ಬಿಟ್ಟಿರಿ? ನಮ್ಮನ್ನು ಏಕೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಮುಂಡಿಬೆಟ್ಟ ಗ್ರಾಮದ ನಿವಾಸಿಗಳನ್ನೂ ಪೊಲೀಸರು ತಡೆದರು. ನಮ್ಮ ಮನೆಗೆ ಹೋಗಲು ಅವಕಾಶ ನೀಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರೂ ಅವಕಾಶ ಮಾಡಿಕೊಡ ದಿದ್ದಾಗ ಗ್ರಾಮಸ್ಥರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಬಳಿಕ ಬೆಟ್ಟದ ನಿವಾಸಿಗಳಿಗೆ ಪ್ರವೇಶ ನೀಡಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next