Advertisement

ಸಂಸತ್‌ನಲ್ಲಿ ಸಿರಿಧಾನ್ಯಗಳ ಘಮ! ಕರ್ನಾಟಕದ ಬಾಣಸಿಗರು ತಯಾರಿಸಿದ ಖಾದ್ಯ ಸವಿದ ಸಂಸದರು

08:45 PM Dec 20, 2022 | Team Udayavani |

ನವದೆಹಲಿ: ಅತ್ತ ಸಂಸತ್‌ನೊಳಗೆ ಬಿಜೆಪಿ-ಕಾಂಗ್ರೆಸ್‌ ನಡುವೆ ವಾಗ್ಯುದ್ಧದ ಕಾವು ಏರುತ್ತಿದ್ದರೆ, ಸಂಸತ್‌ನ ಹೊರಗೆ ಬಿಸಿ ಬಿಸಿ ರಾಗಿ ರೊಟ್ಟಿ ಬೇಯುತ್ತಿತ್ತು. ಒಳಗೆ ವಾಗ್ವಾದದಲ್ಲಿ ಮುಳುಗಿದ್ದವರ ಮೂಗಿಗೆ ಸಜ್ಜೆಯ ಪಾಯಸದ ನವಿರಾದ ಘಮ ಬಡಿಯುತ್ತಿತ್ತು!

Advertisement

ಹೌದು, ಸಂಸತ್‌ ಭವನದಲ್ಲಿ ಮಂಗಳವಾರ ಸಿರಿಧಾನ್ಯಗಳದ್ದೇ ರಾಜ್ಯಭಾರ. “2023 ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಲ್ಪಟ್ಟ ಖುಷಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಸಂಸತ್‌ನ ಎಲ್ಲ ಸದಸ್ಯರಿಗೂ ಸಿರಿಧಾನ್ಯಗಳ ಭೋಜನ ಏರ್ಪಡಿಸಿದ್ದರು. ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಉಭಯ ಸದನಗಳ ಬಹುತೇಕ ಸದಸ್ಯರು ಸಂಸತ್‌ ಭವನದ ಆವರಣದಲ್ಲೇ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಭೂರಿ ಭೋಜನ ಸವಿದರು.

ಸಂಸದರಿಗೆ ರುಚಿ ರುಚಿಯಾದ ಖಾದ್ಯ ತಯಾರಿಸಲೆಂದು ಕರ್ನಾಟಕದಿಂದಲೂ ಬಾಣಸಿಗರನ್ನು ದೆಹಲಿಗೆ ಕರೆಸಿಕೊಳ್ಳಲಾಗಿತ್ತು. ರಾಗಿ ರೊಟ್ಟಿ, ರಾಗಿ ಹಲ್ವ, ರಾಗಿ ದೋಸೆ, ಇಡ್ಲಿ, ಜೋಳದ ರೊಟ್ಟಿ, ಸಜ್ಜೆಯ ಖೀರು, ಜೋಳದ ಕಿಚಡಿ, ಸಜ್ಜೆ ಪಾಯಸ ಸೇರಿದಂತೆ ಬಗೆ ಬಗೆಯ ಆಹಾರ ಕೈಬೀಸಿ ಕರೆಯುತ್ತಿದ್ದವು. ಇವಷ್ಟೇ ಅಲ್ಲದೆ, ಜೋಳದ ರೊಟ್ಟಿ, ಕಾಳು ಪಲ್ಯ, ಚಟ್ನಿ ಪುಡಿ ಸೇರಿದಂತೆ ವ್ಯಾಪಕ ಖಾದ್ಯಗಳನ್ನೂ ತಯಾರು ಮಾಡಿ, ಸಂಸದರಿಗೆ ಬಡಿಸಲಾಯಿತು.

ಖರ್ಗೆ, ಗೌಡರೊಂದಿಗೆ ಮೋದಿ ಭೋಜನ:
ಉಪರಾಷ್ಟ್ರಪತಿ ಧನ್‌ಕರ್‌, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ಖರ್ಗೆ, ಸಚಿವ ರಾಜನಾಥ್‌ ಸಿಂಗ್‌, ಸಚಿವ ತೋಮರ್‌ ಜತೆ ಒಂದೇ ಟೇಬಲ್‌ನಲ್ಲಿ ಕುಳಿತುಕೊಂಡು ಪ್ರಧಾನಿ ಮೋದಿ ಅವರು ಸಿರಿಧಾನ್ಯಗಳ ಆಹಾರವನ್ನು ಸವಿದರು. ಬಳಿಕ ಇದರ ಫೋಟೋವನ್ನು ಟ್ವಿಟರ್‌ಗೂ ಅಪ್‌ಲೋಡ್‌ ಮಾಡಿದರು.

ಶಾಲೆ, ಸರ್ಕಾರಿ ಸಭೆಗಳಲ್ಲೂ ಸಿರಿಧಾನ್ಯ ಬಳಸಿ: ಮೋದಿ ಸಲಹೆ
ಮಂಗಳವಾರ ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲೂ ಪ್ರಧಾನಿ ಮೋದಿ ಅವರು ಸಿರಿಧಾನ್ಯಗಳು ಮತ್ತು ಕ್ರೀಡೆಗೆ ಉತ್ತೇಜನ ನೀಡುವಂತೆ ಸಂಸದರಿಗೆ ಸಲಹೆ ನೀಡಿದರು. ಜಿ20 ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುವ ಸರಣಿ ಸಭೆಗಳಲ್ಲಿ ಸಾವಿರಾರು ವಿದೇಶಿ ಪ್ರತಿನಿಧಿಗಳು ಭಾಗಿಯಾಗುತ್ತಾರೆ. ಆ ಸಭೆಗಳ ಮೆನುವಿನಲ್ಲೂ ಸಿರಿಧಾನ್ಯವನ್ನು ಸೇರ್ಪಡೆ ಮಾಡಲಾಗುತ್ತದೆ. ಅಂತೆಯೇ, ಅಂಗನವಾಡಿಗಳು, ಶಾಲೆಗಳು, ಮನೆ ಮತ್ತು ಸರ್ಕಾರಿ ಸಭೆಗಳಲ್ಲೂ ಅದನ್ನು ಬಳಕೆ ಮಾಡಬಹುದು. ಸಂಸದರು ಆಯೋಜಿಸುವಂಥ ಸಭೆಗಳಲ್ಲೂ ಸಿರಿಧಾನ್ಯವನ್ನೇ ಬಳಸಿದರೆ ಉತ್ತಮ ಎಂದು ಸಲಹೆ ನೀಡಿದ್ದಾರೆ. ಇದರಿಂದ ದೇಶದ ಸಣ್ಣ ರೈತರು ಆರ್ಥಿಕವಾಗಿ ಸಬಲರಾಗಲೂ ನಾವು ನೆರವಾದಂತಾಗುತ್ತದೆ ಎಂದಿದ್ದಾರೆ.

Advertisement

ಭಾರತದಲ್ಲಿ ಸಿರಿಧಾನ್ಯ ಬೆಳೆಯುವ ರಾಜ್ಯಗಳು- 21
ಒಟ್ಟಾರೆ ಎಷ್ಟು ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದೆ?- 12.45 ದಶಲಕ್ಷ
ದೇಶದಲ್ಲಿ ಉತ್ಪಾದನೆಯಾಗುವ ಪ್ರಮಾಣ – 15.53 ದಶಲಕ್ಷ ಟನ್‌

 

Advertisement

Udayavani is now on Telegram. Click here to join our channel and stay updated with the latest news.

Next