ಮೈಸೂರು: ಶಿಕ್ಷಣವಿಲ್ಲದವರು ಬದುಕಿದ್ದೂ ಸತ್ತಂತೆ, ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು. ಬದುಕಲು ಗಾಳಿ, ನೀರು, ಆಹಾರ ಎಷ್ಟು ಅವಶ್ಯಕವೋ ಶಿಕ್ಷಣ ಕೂಡ ಇಂದು ಅತ್ಯವಶ್ಯಕವಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ತಾಲೂಕಿನ ಮಂಡನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಓರಿಗಾಮಿ ಕಾರ್ಯಾಗಾರ ಮತ್ತು ಉಚಿತ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಂಚನೆ ಬೇಡ: ಶಿಕ್ಷಣವೆಂಬುದು ಮಕ್ಕಳಿಗೆ ಸಿಗಬೇಕಾದ ಮೂಲಭೂತ ಹಕ್ಕು, ಶಿಕ್ಷಣದಿಂದ ಯಾವುದೇ ಕಾರಣಕ್ಕೂ ಮಕ್ಕಳು ವಂಚಿತರಾಗಬಾರದು. ಅದರಲ್ಲೂ ಪೋಷಕರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದೇ ಮೊದಲ ಆದ್ಯತೆಯಾಗಬೇಕು. ಈ ದಿಸೆಯಲ್ಲಿ ಪೋಷಕರು, ಗುರು ಹಿರಿಯರು ಸುಶಿಕ್ಷಿತ ಸಮಾಜ ಕಟ್ಟಲು ತಮ್ಮದೂ ಒಂದು ಅಳಿಲು ಸೇವೆಯೆಂದು ಭಾವಿಸಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಕಲೆ ಕರಗತ: ಓರಿಗಾಮಿ ಕಾರ್ಯಾಗಾರ ನಡೆಸಿಕೊಟ್ಟ ಓರಿಗಾಮಿ ತಜ್ಞ ಎಚ್.ವಿ.ಮುರಳೀಧರ್, ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜೊತೆ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕಲೆ, ಸಾಹಿತ್ಯ, ಸಂಗೀತದಂತಹ ವಿಷಯಗಳಲ್ಲಿ ಆಸಕ್ತಿವಹಿಸಿ ಕಲಿತು ಬಾಲ್ಯದಿಂದಲೇ ಕಲೆಯನ್ನು ಕರಗತ ಮಾಡಿಕೊಳ್ಳಬೇಕೆಂದರು.
ಇಷ್ಟಪಟ್ಟು ಓದಿ: ನಿವೃತ್ತ ಶಿಕ್ಷಕ ವೆಂಕಟನಾರಾಯಣ ಮಾತನಾಡಿ, ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿ ಕಲಿತ ಶಾಲೆಗೆ, ಕಲಿಸಿದ ಗುರುಗಳಿಗೆ, ಹೆತ್ತವರಿಗೆ ಹಾಗೂ ಹುಟ್ಟಿದ ಊರಿಗೆ ಕೀರ್ತಿತರುವಂತಹ ದೊಡ್ಡವ್ಯಕ್ತಿಗಳಾಗಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಿವೃತ್ತ ಶಿಕ್ಷಕಿ ಕಾವೇರಿಯಮ್ಮ ತಮ್ಮ ಭಾವಾಭಿನಯದೊಡನೆ ಕಲಿಕೆಗೆ ಪೂರಕವಾದ ಹಾಡುಗಳನ್ನು ಹೇಳಿ ಕೊಡುವುದರ ಮೂಲಕ ಮಕ್ಕಳನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕೆ.ನೇತ್ರಾವತಿ, ಶಿಕ್ಷಕಿ ತಬಸ್ಸುಂ ಫಾತಿಮಾ, ಗೌರವ ಶಿಕ್ಷಕಿ ಶಿಲ್ಪಾ, ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ ಹಾಗೂ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಮತ್ತಿತರರು ಹಾಜರಿದ್ದರು.