Advertisement

ವಿದ್ಯಾರ್ಥಿಗಳೇ, ಕಸ ಬಿಸಾಡಾದಂತೆ ಅರಿವು ಮೂಡಿಸಿ

09:30 PM Sep 18, 2019 | Lakshmi GovindaRaju |

ಮೈಸೂರು: ನಾವು ನಾಳೆ ಹೇಗೆ ಬದುಕುತ್ತೇವೆ ಎನ್ನುವುದಕ್ಕಿಂತ ಇಂದು ಹೇಗೆ ಬದುಕುತ್ತಿದ್ದೇವೆ ಎನ್ನುವುದು ಮುಖ್ಯ ಎಂದು ನಟ ಸೃಜನ್‌ ಲೋಕೇಶ್‌ ಹೇಳಿದರು. ಮೈಸೂರು ವಿಶ್ವವಿದ್ಯಾಲಯ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದಿಂದ ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿ ಬುಧವಾರದಿಂದ ಆಯೋಜಿಸಿರುವ ಮೂರು ದಿನಗಳ 2019-20ನೇ ಶೈಕ್ಷಣಿಕ ವಿಶ್ವವಿದ್ಯಾಲಯದ ಮಟ್ಟದ ಅಂತರ ಕಾಲೇಜು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸಲಹೆ ನೀಡಿ, ಆಹಾರವನ್ನು ವ್ಯರ್ಥ ಮಾಡದೇ ಹಿತಮಿತವಾಗಿ ಬಳಿಸಿ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳೊಂದಿಗೆ ತಮ್ಮ ಅನಿಸಿಕೆ, ಅಭಿಪ್ರಾಯ ವಿನಿಮಯ ಮಾಡಿಕೊಂಡ ನಂತರ ನಾವು ಮುಂದೆ ಹೇಗೆ ಬದುಕಬೇಕು ಎನ್ನುವುದಕ್ಕಿಂತ ಪ್ರಸ್ತುತ ಹೇಗೆ ಬದುಕುತ್ತಿದ್ದೇವೆ ಎಂಬುದು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.

ಮತ್ತೆ ನಂ.1 ಗುರಿ: ಮೈಸೂರು ದೇಶದಲ್ಲಿ ಸ್ವಚ್ಛತೆ ಸ್ಥಾನದಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ ಆ ಸ್ಥಾನವನ್ನು ಬೇರೊಂದು ನಗರಕ್ಕೆ ಬಿಟ್ಟುಕೊಟ್ಟಿದ್ದೇವೆ. ಇದರಿದ ನಮಗೆಲ್ಲ ಬೇಸರವಾಗಿದೆ. ಮೈಸೂರು ನಂಬರ್‌ ಒನ್‌ ಸ್ವಚ್ಛ ನಗರದ ಸ್ಥಾನದಲ್ಲಿ ಸದಾ ಇರಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಪಣ ತೊಡಬೇಕು. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ಹಾಕದಂತೆ ಹಾಗೂ ತ್ಯಾಜ್ಯ ಸುರಿಯದಂತೆ ಗಮನ ಹರಿಸಿ.

ಕಸ ಬಿಸಾಡಿದವರ ಮುಂದೆ ಕಸ ವಿಲೇವಾರಿ ಮಾಡಿ ಅದನ್ನು ನೋಡಿ ಕಸ ಎಸೆಯುವವರು ಬುದ್ಧಿ ಕಲಿಯುತ್ತಾರೆ. ನಮ್ಮ ದೇಶದಲ್ಲಿ ದಡ್ಡರಿಲ್ಲ, ಹೇಳುವುದನ್ನು ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ. ಆದ್ದರಿಂದ ಸ್ವಚ್ಛತೆ ಕಾಪಾಡುವಂತೆ ನಿಮ್ಮ ಸುತ್ತಲಿನ ಪರಿಸರದ ಜನರಿಗೆ ತಿಳಿಹೇಳಿ. ಸೂಕ್ತ ವಿಲೇವಾರಿ ಬಗ್ಗೆ ಅರಿವು ಮೂಡಿಸಿ ಈ ಮೂಲಕ ಮತ್ತೆ ಮೈಸೂರನ್ನು ಸ್ವಚ್ಛನಗರಿಯಾಗಿಸಲು ಪ್ರಯತ್ನಸೋಣ ಎಂದರು.

ಆಹಾರ ವ್ಯರ್ಥ: ಬೆಂಗಳೂರು ನಗರವೊಂದರಲ್ಲೇ ಪ್ರತಿದಿನ ಶೇ.40ರಷ್ಟು ಆಹಾರ ವ್ಯರ್ಥವಾಗುತ್ತಿದೆ. ಆಹಾರದ ಮಹತ್ವ ಅರಿಯದೆ ಬೇಕಾದಷ್ಟು ತಿನ್ನದೆ ಅನಗತ್ಯ ಆಹಾರ ವ್ಯರ್ಥವಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಯಂತ್ರೋಪಕರಣ ಬಳಸಿ ಆಹಾರ ಉತ್ಪಾದಿಸಲಾಗುತ್ತಿದೆ. ಆದರೆ ನಮ್ಮನ ನಾಡಿನ ರೈತರು ಯಂತ್ರೋಪಕರಣಗಳಿಲ್ಲದೆಯೇ ಶ್ರಮವಹಿಸಿ ಆಹಾರ ಉತ್ಪಾದನೆ ಮಾಡುತ್ತಿದ್ದಾರೆ. ಅವರಿಗೆ ಬೆಲೆ ಮತ್ತು ಗೌರವ ನೀಡಬೇಕೆಂದರೆ ಆಹಾರ ವ್ಯರ್ಥ ಮಾಡಬೇಡಿ. ನಮ್ಮ ಸುತ್ತಮುತ್ತಲಿನಲ್ಲಿ ಅಷ್ಟೋ ಜನ ಆಹಾರವಿಲ್ಲದ ಹಸಿವಿನಿಂದ ಬಳಲುತ್ತಿದ್ದಾರೆ.

Advertisement

ಅಪೌಷ್ಟಿಕತೆ ತುತ್ತಾಗಿದ್ದಾರೆ. ಇಂಥ ವ್ಯವಸ್ಥೆ ಯ ನಡುವೆ ಆಹಾರ ವ್ಯರ್ಥ ಮಾಡುವುದು ಅಪರಾಧದಂತೆ. ಆದ್ದರಿಂದ ಹಂಚಿಕೊಂಡು ಸೇವಿಸಿ ಎಂದು ಮನವಿ ಮಾಡಿದರು. ಜಾಗತಿಕ ತಾಪಮಾನ ಕಡಿಮೆ ಮಾಡಲು, ಸ್ವಚ್ಛತೆ, ಪರಿಸರ ಮತ್ತು ಜಲ ಸಂರಕ್ಷಣೆ, ಆಹಾರ ವ್ಯರ್ಥ ತಡೆಯಲು ಸ್ಟುಡೆಂಟ್‌ ಪವರ್‌ ತೋರಿಸಿ ಎಂದು ಪ್ರಚೋದಿಸಿದರು. ನಟಿ ಸೋನು ಗೌಡ, ಕುಲಸಚಿವ ಪ್ರೊ.ಆರ್‌.ಶಿವಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ನಿರ್ದೇಶಕ ಡಾ.ಸಿ.ರಾಮಸ್ವಾಮಿ, ಸಹಾಯಕ ನಿರ್ದೇಶಕ ಡಾ.ಲೋಹಿತ್‌ ಇತರರಿದ್ದರು.

ಪ್ಲಾಸ್ಟಿಕ್‌ ವಿರೋಧ ಅಭಿಯಾನ ನಡೆಸಿ: ಜಗತ್ತಿಗೆ ಮಾರಕವಾಗಿರುವ ವಿಚಾರಗಳಲ್ಲಿ ಪ್ಲಾಸ್ಟಿಕ್‌ ಸಹ ಒಂದು. ಈಗ ದೇಶ ಪ್ಲಾಸ್ಟಿಕ್‌ನಿಂದ ಮುಕ್ತವಾಗಬೇಕೆಂದು ಅಭಿಯಾನ ಆರಂಭವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಮುಕ್ತವಾಗಿಸಲು ಕೈ ಜೋಡಿಸಬೇಕು. ನಿಮ್ಮ ಕ್ಯಾಂಪಸ್‌ನಿಂದಲೇ ಪ್ಲಾಸ್ಟಿಕ್‌ ಬಳಕೆ ವಿರೋಧ ಅಭಿಯಾನ ಆರಂಭಿಸಿ, ಯಾವುದೇ ಕಾರಣಕ್ಕೂ ಒಂದು ಬಾರಿ ಬಳಕೆಯಾಗುವ ಪ್ಲಾಸ್ಟಿಕ್‌ ಬಳಕೆ ಮಾಡಬೇಡಿ. ಇದರಿಂದ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಸಹಕಾರಿಯಾಗಲಿದೆ. ಸ್ವಚ್ಛತೆ ಹಾಗೂ ಪ್ಲಾಸ್ಟಿಕ್‌ ಮುಕ್ತ ಜೀವನ ಶೈಲಿ ಅಳವಡಿಸಿಕೊಳ್ಳೋಣ ಎಂದು ನಟ ಸೃಜನ್‌ ಸಲಹೆ ನೀಡಿದರು.

15 ಸ್ನಾತಕೋತ್ತರ ಸೀಟು ಮೀಸಲು: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ಭ‌ರತ ನಾಟ್ಯ, ನಾಟಕ, ನೃತ್ಯ, ಗಾಯನ ಸೇರಿದಂತೆ 26 ಕಲಾ ಪ್ರಕಾರಗಳ ಸ್ಪರ್ಧೆಯು ಮೂರು ದಿನಗಳ ಕಾಲ ನಡೆಯಲಿದ್ದು, ರಾಜ್ಯದ ವಿವಿಧ ವಿಶ್ವವಿದ್ಯಾಲಯ ಹಾಗೂ ವಿವಿ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವ ವಿದ್ಯಾರ್ಥಿಗಳಿಗೆ ಸ್ನಾತತೋತ್ತರದ ಕೋರ್ಸ್‌ಗಳಲ್ಲಿ 15 ಸೀಟುಗಳನ್ನು ಮೀಸಲು ಇಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next