ಚಿತ್ತಾಪುರ: ಪಟ್ಟಣ, ಹಳ್ಳಿ ಅಥವಾ ನಿಮ್ಮ ಅಕ್ಕಪಕ್ಕದ ಏರಿಯಾಗಳಲ್ಲಿ ಅಪರಾಧ ಕೃತ್ಯಗಳು ಕಂಡು ಬಂದಲ್ಲಿ ಕೂಡಲೇ 112ಗೆ ಕರೆ ಮಾಡಬೇಕು ಎಂದು ಎಸ್ಪಿ ಇಶಾ ಪಂತ್ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಶಹಾಬಾದ ಉಪ ವಿಭಾಗ, ಚಿತ್ತಾಪುರ ವೃತ್ತದ ವತಿಯಿಂದ ಹಮ್ಮಿಕೊಂಡ ನಿಮ್ಮ ಮನೆ ಬಾಗಿಲಿಗೆ ಪೊಲೀಸ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲೇ ಏನಾದರೂ ಅಪರಾಧ ಕೃತ್ಯಗಳು ನಡೆದರೇ ಪೊಲೀಸರೆ ನೋಡಿಕೊಳ್ಳುತ್ತಾರೆ ಎಂದು ತಿಳಿದುಕೊಳ್ಳಬೇಡಿ. ನಮಗೆ ಮಾಹಿತಿ ಬಂದರೇ ಕೂಡಲೇ ಅಪರಾಧ ಕೃತ್ಯಗಳನ್ನು ತಡೆಗಟ್ಟುತ್ತೇವೆ. ಆದರೆ ನಮಗೆ ಗೊತ್ತಾಗದೇ ಹಲವು ಅಪರಾಧ ಹಾಗೂ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಅದು ಸಾರ್ವಜನಿಕರಿಗೆ ಗೊತ್ತಿರುತ್ತೆ. ಅಂತಹ ಸಂದರ್ಭದಲ್ಲಿ ಪೊಲೀಸರಿಗೆ ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದರು.
ಶಹಾಬಾದ ಡಿವೈಎಸ್ಪಿ ಉಮೇಶ ಚಿಕ್ಕಮಠ ಮಾತನಾಡಿ, ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಬಂದರೇ ತಿಳಿಸಬೇಕು. ನಿಮ್ಮ ಮಾಹಿತಿ ನಾವು ಗೌಪ್ಯವಾಗಿಡುತ್ತೇವೆ. ಚಿತ್ತಾಪುರ ತಾಲೂಕಿನಲ್ಲಿ ಜಾತಿ, ಮಥ, ಪಂತ, ಪಕ್ಷ ಬೇಧ ಮರೆತು ನಾವೇಲ್ಲರೂ ಒಂದೇ ಎಂದು ತಿಳಿದು ಪೊಲೀಸರಿಗೆ ಸಹಕಾರ ನೀಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಾರ್ವಜನಿಕರು ಪಟ್ಟಣ, ಗ್ರಾಮಗಳಲ್ಲಿ ನಡೆಯುವ ಅಕ್ರಮ ಸಾರಾಯಿ ಮಾರಾಟ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ಮತ್ತು ಇತರೆ ಸಮಸ್ಯೆಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಉತ್ತರ ನೀಡಿ ಪರಿಹರಿಸುವ ಕೆಲಸ ಮಾಡಿದರು. ಇದೇ ವೆಳೆ ಸಾರ್ವಜನಿಕರಿಂದ ಅರ್ಜಿ ಅಹವಾಲುಗಳನ್ನು ಸ್ವೀಕರಿಸಿದರು. ಪೊಲೀಸ್ ಸಿಬ್ಬಂದಿಗಳು ಮಾದಕ ವಸ್ತು ಸೇವನೆಯಿಂದಾಗುವ ಹಾನಿ, ಟ್ರಾಫಿಕ್ ರೋಲ್ಸ್, ಕೋಮು ಸೌಹಾರ್ದತೆ ಹಾಳಾಗದಂತೆ ನೋಡಿಕೊಳ್ಳಲು ಬೀದಿ ನಾಟಕ ಪ್ರದರ್ಶನ ಮಾಡಿದರು.
ಸಿಪಿಐ ಪ್ರಕಾಶ ಯಾತನೂರ ಪ್ರಾಸ್ತವಿಕ ಮಾತನಾಡಿದರು. ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಪಂ ಇಒ ನೀಲಗಂಗಾ ಬಬಲಾದ, ಪಿಎಸ್‌ಐಗಳಾದ ಚೇತನ್, ಮಹಾಂತೇಶ ಪಾಟೀಲ್, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ್ ಪಾಟೀಲ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.