ನವದೆಹಲಿ:ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಯ ಮುಖ್ಯ ಉದ್ದೇಶ ಕೃಷಿ ಮತ್ತು ಇತರ ಸೆಕ್ಟರ್ ಗಳ ನಡುವಿನ ಗೋಡೆಯನ್ನು ಅಳಿಸಿ ಹಾಕುವುದಾಗಿದೆ. ಅಷ್ಟೇ ಅಲ್ಲ ಕೃಷಿ ಕಾಯ್ದೆಯಿಂದ ನೂತನ ಮಾರುಕಟ್ಟೆಗಳು ಲಭ್ಯವಾಗುವ ಮೂಲಕ ರೈತರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನೂತನ ಕಾಯ್ದೆ ಜಾರಿಯಿಂದಾಗಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಂಡಿಗೆ ಹಾಗೂ ಅದೇ ರೀತಿ ಹೊರಗಿನ ವ್ಯಕ್ತಿಗಳಿಗೂ ಮಾರಾಟ ಮಾಡುವ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಇತ್ತೀಚೆಗೆ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಯ ಸುಧಾರಣೆಯಿಂದಾಗಿ ಕೃಷಿ ಕ್ಷೇತ್ರ ಮತ್ತು ಅದರ ಸಹವರ್ತಿ ಕ್ಷೇತ್ರಗಳ ನಡುವಿನ ಎಲ್ಲಾ ಗೋಡೆಗಳನ್ನು ತೆಗೆದುಹಾಕಿದ್ದು, ರೈತರಿಗೆ ಹೊಸ ಮಾರ್ಕೆಟ್ ಸಿಗುವಂತಾಗಿದೆ. ಅಲ್ಲದೇ ತಂತ್ರಜ್ಞಾನ ಸೌಲಭ್ಯ ಪಡೆಯುವ ಮೂಲಕ ಕೃಷಿಯಲ್ಲಿ ಹೂಡಿಕೆಯೊಂದಿಗೆ ಲಾಭ ಪಡೆಯಬಹುದಾಗಿದೆ ಎಂದು ಪ್ರಧಾನಿ ತಿಳಿಸಿದರು.
ಇದನ್ನೂ ಓದಿ:ಸಿಬಿಐ ವಶದಲ್ಲಿದ್ದ ಕೆಜಿಗಟ್ಟಲೇ ಚಿನ್ನ ನಾಪತ್ತೆ: ಕೋರ್ಟ್ ನಲ್ಲಿ ಸಿಬಿಐ ವಾದಿಸಿದ್ದೇನು?
ಕೃಷಿ ಕ್ಷೇತ್ರ ಮತ್ತು ಇತರ ನಿಕಟ ಕ್ಷೇತ್ರಗಳ ನಡುವೆ ಗೋಡೆಗಳಿರುವುದನ್ನು ಕಂಡಿದ್ದೇವೆ. ಕೃಷಿ ಕ್ಷೇತ್ರ, ಮೂಲಸೌಕರ್ಯ, ಆಹಾರ ಸಂಸ್ಕರಣೆ ಹಾಗೂ ಸ್ಟೋರೇಜ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗೋಡೆಗಳಿದ್ದವು. ಆದರೆ ಇದೀಗ ಎಲ್ಲಾ ಗೋಡೆಯನ್ನು ತೆಗೆದುಹಾಕಲಾಗಿದೆ. ಕೋಲ್ಡ್ ಸ್ಟೋರೇಜ್ ಮೂಲ ಸೌಕರ್ಯವನ್ನು ಆಧುನೀಕರಣಗೊಳಿಸಲಾಗುವುದು, ಇದರ ಪರಿಣಾಮ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಯಾಗಲಿದೆ. ಇದರಿಂದ ರೈತರು ಹೆಚ್ಚು ಲಾಭ ಪಡೆಯುವಂತಾಗಲಿದೆ ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ದೆಹಲಿ ಗಡಿಯಲ್ಲಿ ಪಂಜಾಬ್, ಹರ್ಯಾಣದ ಸಾವಿರಾರು ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಹಲವಾರು ಸುತ್ತಿನ ಮಾತುಕತೆ ಕೂಡಾ ವಿಫಲಗೊಂಡಿದ್ದು, ಏತನ್ಮಧ್ಯೆ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.