ಬೆಂಗಳೂರು: ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿರುವ ಲೋಕಾಯುಕ್ತದಲ್ಲಿ ತನಿಖೆ ಮಾದರಿ ಬಗ್ಗೆಯೇ ಅಪಸ್ವರ ಕೇಳಿ ಬರುತ್ತಿದೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಲೋಕಾಯುಕ್ತ ಕೈಪಿಡಿ ಬದಲು ಸಿಬಿಐ ಕೈಪಿಡಿ ಮಾದರಿ ತನಿಖೆ ನಡೆಸುತ್ತಿರುವುದಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಈ ನಡುವೆ ಕೆಲವು ಅಧಿಕಾರಿಗಳು ಸಿಬಿಐ ಕೈಪಿಡಿ ಮಾದರಿಯ ತನಿಖೆಯನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
1984ರಲ್ಲಿ ಲೋಕಾಯುಕ್ತ ಕಾಯ್ದೆ ಜಾರಿಗೆ ಬಂದಿತ್ತು. ಅದರಲ್ಲಿ ತನಿಖಾಧಿಕಾರಿಗಳು, ತನಿಖೆಯ ಹಾದಿ ಸೇರಿ ಲೋಕಾಯುಕ್ತ ಸಂಸ್ಥೆಯ ಎಲ್ಲ ಕಾರ್ಯವೈಖರಿ ಬಗ್ಗೆ ಉಲ್ಲೇಖೀಸಲಾಗಿತ್ತು. ಇನ್ನು ಲೋಕಾಯುಕ್ತ ಕೈಪಿಡಿಯಲ್ಲಿ ನಮೂನೆ 1ರಿಂದ 10ರ ವರೆಗಿನ ಆಧಾರದ ಮೇಲೆ ದಾಳಿಗೊಳಗಾದ ಅಧಿಕಾರಿಗಳಿಗೆ ಆಸ್ತಿ ವಿವರದ ಮಾಹಿತಿ ನೀಡುವಂತೆ ನೋಟಿಸ್ ನೀಡಲಾಗುತ್ತದೆ. ಆ ಬಳಿಕ 2014ರಲ್ಲಿ ಲೋಕಾಯುಕ್ತ ಕಾಯಿದೆಗೂ ತಿದ್ದುಪಡಿ ತರಲಾಗಿತ್ತು. ಈ ಪ್ರಕಾರ ನಮೂನೆ 1ರಿಂದ 23ರ ವರೆಗಿನ ನಿಯಮಗಳ ಪ್ರಕಾರ, ನಮೂನೆ 1ರಿಂದ 16(ಬಿ) ಪ್ರತಿಯೊಬ್ಬ ಸರಕಾರಿ ಅಧಿಕಾರಿ ತಮ್ಮ ಸಕ್ಷಮ ಪ್ರಾಧಿಕಾರಕ್ಕೆ ಆದಾಯ ಮತ್ತು ಆಸ್ತಿ ತೆರಿಗೆ ವಿವರ ಸಲ್ಲಿಸಬೇಕು. ಅದನ್ನು ಅಗತ್ಯಬಿದ್ದಾಗ ಲೋಕಾಯುಕ್ತ ಪಡೆದುಕೊಳ್ಳಲಿದೆ.
ನಮೂನೆ 17ರಿಂದ 23ರ ವರೆಗಿನ ಪ್ರಕಾರ ದಾಳಿಗೊಳಗಾದ ಅಧಿಕಾರಿಯೇ ಲೋಕಾಯುಕ್ತಕ್ಕೆ ನೇರವಾಗಿ ಕೊಡಬೇಕು. ಈ ವೇಳೆ ಸಾಲ, ಮಕ್ಕಳ ವಿದ್ಯಾಭ್ಯಾಸದ ಖರ್ಚು ಇತರ ವೆಚ್ಚಗಳನ್ನು ಉಲ್ಲೇಖೀಸಲು ಅವಕಾಶವಿದೆ. ಆದರೆ, ತನಿಖಾಧಿಕಾರಿಗಳು ಸಿಬಿಐ ಮಾದರಿ ತನಿಖೆ ನಡೆಸುವುದು, ವಿವರ ಕೇಳುವ ಮೂಲಕ ರಾಜ್ಯ ಸರ್ಕಾರದ ಲೋಕಾಯುಕ್ತ ಕಾಯ್ದೆ ಮತ್ತು ಲೋಕಾಯುಕ್ತ ಕೈಪಿಡಿ ಉಲ್ಲಂ ಸುತ್ತಿದ್ದಾರೆ ಎಂದು ಕೆಲ ಅಧಿಕಾರಿಗಳು ಆರೋಪಿಸಿದ್ದಾರೆ.
ಏನಿದು ಸಿಬಿಐ ಮಾದರಿ?: ದಾಳಿಗೊಳಗಾದ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ನಮೂನೆ 1ರಿಂದ 6 ರವರೆಗಿನ ಪ್ರಕಾರ ಆಸ್ತಿವಿವರ, ಚಿರಾಸ್ತಿ, ಚರಾಸ್ತಿ, ಕೊಡಬೇಕು. ಆದರೆ, ಆದಾಯ ಮತ್ತು ಖರ್ಚು-ವೆಚ್ಚದ ಬಗ್ಗೆ ಮಾತ್ರ ಕೊಡುವಂತಿಲ್ಲ. ದಾಳಿಗೊಳಗಾದ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿದ ಬಳಿಕ ತನಿಖಾಧಿಕಾರಿಗಳೇ ಅವರ ಖರ್ಚು-ವೆಚ್ಚಗಳು ಹಾಗೂ ಸಾಲ ಹಾಗೂ ಇತರೆ ಲೆಕ್ಕಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಆರೋಪಿತ ಅಧಿಕಾರಿಯೂ ಖರ್ಚು-ವೆಚ್ಚದ ನೀಡುವ ದಾಖಲೆಗಳು ಸತ್ಯವೇ? ಸುಳ್ಳೇ? ಎಂಬುದು ತಿಳಿಯುವುದಿಲ್ಲ. ಹೆಚ್ಚು ಪ್ರಶ್ನೆಗಳ ಆಧರಿಸಿ ನೋಟಿಸ್ ಕೊಟ್ಟಾಗ, ಸುಳ್ಳು ದಾಖಲೆ ಅಥವಾ ಮಾಹಿತಿ ನೀಡುವ ಸಾಧ್ಯತೆಯಿದೆ ಇರುತ್ತದೆ. ಹೀಗಾಗಿ ಹೊಸ ಮಾದರಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಕೋರ್ಟ್ ಮೊರೆ: ಮತ್ತೂಂದೆಡೆ ಸರಕಾರಿ ಕೆಲಸ ಮಾಡಿಕೊಡಲು ಲಕ್ಷಾಂತರ ರೂ. ಲಂಚ ಪಡೆದು ಕೋಟ್ಯಾಂತರ ರೂ.ಮೌಲ್ಯದ ಆಸ್ತಿ ಸಂಪಾದಿಸಿರುವ ಅಧಿಕಾರಿಗಳು, ಸಿಬಿಐ ಕೈಪಿಡಿ ಮಾದರಿಯ ತನಿಖೆ ಪ್ರಶ್ನಿಸಿದ್ದಾರೆ. ಲೋಕಾಯಕ್ತ ಅಧಿಕಾರಿಗಳು ಲೋಕಾಯುಕ್ತ ಕಾಯ್ದೆ ಅನ್ವಯವೇ ತನಿಖೆ ನಡೆಸಬೇಕೇ ಹೊರತು ಸಿಬಿಐ ಮಾದರಿಯಲ್ಲಿ ಅಲ್ಲ ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಹೀಗಾಗಿ ತನಿಖೆಯ ಸ್ವರೂಪ ಈಗ ಹೈಕೋರ್ಟ್ ಅಂಗಳ ತಲುಪಿದೆ.
ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
ಕೇಂದ್ರ ಮತ್ತು ರಾಜ್ಯ ಸರಕಾರದ ನಿಯಮಗಳು ಹಾಗೂ ಕಾಯ್ದೆಗಳಿಗೆ ಬಹಳಷ್ಟು ವ್ಯತ್ಯಾಸ ಇರುತ್ತದೆ. ಕೇಂದ್ರ ಸರಕಾರದ ನೌಕರರು ಆಸ್ತಿ ವಿವರ ಸಲ್ಲಿಸಲು ಪ್ರತ್ಯೇಕ ನಿಯಮವಿದೆ. ಅದೇ ರೀತಿ ರಾಜ್ಯ ಸರಕಾರದ ನೌಕರರು ಆಸ್ತಿ ವಿವರ ಸಲ್ಲಿಸಲು ಪ್ರತ್ಯೇಕ ನಿಯಮವಿದೆ. ಆದರೆ, ಲೋಕಾಯುಕ್ತ ಪೊಲೀಸರು ತನಿಖೆ ವೇಳೆ ಸಿಬಿಐ ಮಾದರಿಯಲ್ಲಿ ದಾಳಿಗೊಳಗಾದ ಅಧಿಕಾರಿಗಳಿಂದ ಆಸ್ತಿ ವಿವರ ಕೇಳುತ್ತಿದ್ದಾರೆ. ಈ ಸಂಬಂಧ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ ಎಂದು ವಕೀಲರೊಬ್ಬರು ಮಾಹಿತಿ ನೀಡಿದರು.
ಆರೋಪಿಗೆ ಅನುಕೂಲವಾಗುವ ರೀತಿಯಲ್ಲಿ ತನಿಖೆ ನಡೆಸಲು ಸಾಧ್ಯವಿಲ್ಲ. ತನಿಖೆ ಹೇಗಾದರೂ ಮಾಡಬಹುದು. ಅಂತಿಮವಾಗಿ ಕೋರ್ಟ್‌ನಲ್ಲಿ ಭ್ರಷ್ಟಾಚಾರ ಸಾಬೀತಾಗಬೇಕು.
-ಸುಬ್ರಹ್ಮಣ್ಯೇಶ್ವರ ರಾವ್, ಲೋಕಾಯುಕ್ತ ಐಜಿಪಿ.
ಮೋಹನ ಭದ್ರಾವತಿ