Advertisement

ಒಮಿಕ್ರಾನ್‌ನಿಂದ ಭಾರತಕ್ಕಿಲ್ಲ ಆತಂಕ

08:34 PM Dec 18, 2021 | Team Udayavani |

ನವದೆಹಲಿ: ಇಂಗ್ಲೆಂಡ್‌ನಲ್ಲಿ ಒಮಿಕ್ರಾನ್‌ ಅಬ್ಬರ ಹೆಚ್ಚಾಗುತ್ತಿರುವಂತೆಯೇ ಭಾರತದಲ್ಲಿ, ಇದರ ತೀವ್ರತೆ ಕಡಿಮೆ ಎಂಬ ಸಮಾಧಾನಕರ ಅಂಶವೊಂದನ್ನು ಕೇಂದ್ರ ಸರ್ಕಾರವೇ ನೇಮಕ ಮಾಡಿದ್ದ ರಾಷ್ಟ್ರೀಯ ಕೊರೊನಾ ಸೂಪರ್‌ಮಾಡೆಲ್‌ ಸಮಿತಿ ಹೇಳಿದೆ.

Advertisement

ಒಮಿಕ್ರಾನ್‌ಗೆ ವೇಗವಾಗಿ ಹರಡುವ ಶಕ್ತಿ ಇದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಇದರ ತೀವ್ರತೆ ಕಡಿಮೆ ಎಂದು ಸಮಿತಿಯ ಅಧ್ಯಕ್ಷ ಎಂ.ವಿದ್ಯಾಸಾಗರ್‌ ಹೇಳಿದ್ದಾರೆ. ಹೈದರಾಬಾದ್‌ ಐಐಟಿ ಪ್ರಾಧ್ಯಾಪಕರಾಗಿರುವ ವಿದ್ಯಾಸಾಗರ್‌, ಒಮಿಕ್ರಾನ್‌ನ ಯುಕೆ ಮಾಡೆಲ್‌ ಭಾರತಕ್ಕೆ ಅನ್ವಯವಾಗಬೇಕು ಅಂತೇನಿಲ್ಲ ಎಂದೂ ಪ್ರತಿಪಾದಿಸಿದ್ದಾರೆ. ಅಲ್ಲದೆ, ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಎಂಆರ್‌ಎನ್‌ಎ ಲಸಿಕೆಯನ್ನು ಬಳಸಿದ್ದು, ಇದರ ಪರಿಣಾಮತ್ವದ ಅವಧಿ ಕಡಿಮೆ ಇರುತ್ತದೆ. ಅಲ್ಲಿ ಸೀರೋ ಸಮೀಕ್ಷೆಯಲ್ಲೂ ಕಡಿಮೆ ಪಾಸಿಟಿವಿಟಿ ದರ ಕಂಡು ಬಂದಿದೆ. ಆದರೆ, ಭಾರತದಲ್ಲಿ ನಾವು ಈ ರೀತಿಯ ಲಸಿಕೆ ಬಳಸಿಲ್ಲ ಎಂದೂ ಅವರು ಹೇಳಿದ್ದಾರೆ.

ವಿದ್ಯಾಸಾಗರ್‌ ನೇತೃತ್ವದ ಸಮಿತಿಯು ಕೊರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡುತ್ತಿದೆ. ಸದ್ಯ ಈಗ ರಚಿಸಿರುವ ವರದಿಯನ್ನು ಈ ಸಮಿತಿ ಸರ್ಕಾರಕ್ಕೆ ನೀಡಿಲ್ಲ.

ಇದೇ ವೇಳೆ, ಭಾರತದಲ್ಲಿ ಒಮಿಕ್ರಾನ್‌ ಪ್ರಭಾವ ಜನವರಿಯಲ್ಲಿ ಕಾಣಿಸಿಕೊಳ್ಳಬಹುದು. ಆದರೆ, ಫೆಬ್ರವರಿ ಮಧ್ಯಂತರದಲ್ಲಿ ಅದರ ಹರಡುವಿಕೆ ಪ್ರಮಾಣ ಉತ್ತುಂಗಕ್ಕೇರುತ್ತದೆ ಎಂದು ಈ ಸಮಿತಿ ಹೇಳಿದೆ.

ಇದನ್ನೂ ಓದಿ:ವ್ಯಕ್ತಿಯನ್ನು ಕೊಂದು ಗ್ರಾಮದಲ್ಲೇ ಹೂತಿಟ್ಟರು : ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ

Advertisement

ಕೊವೊವ್ಯಾಕ್ಸ್‌ ಉತ್ತಮ
ಬೂಸ್ಟರ್‌ ಡೋಸ್‌ ಆಗಿ ನೀಡುವುದಾದರೆ, ಕೊವಿಶೀಲ್ಡ್‌ಗಿಂತ ಕೊವೊವ್ಯಾಕ್ಸ್‌ ಲಸಿಕೆಯೇ ಉತ್ತಮ ಎಂದು ಸರ್ಕಾರದ ಸಮಿತಿಯೊಂದರ ನಿರ್ದೇಶಕರು ಹೇಳಿದ್ದಾರೆ. ಶುಕ್ರವಾರವಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಕೊವೊವ್ಯಾಕ್ಸ್‌ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಿದ್ದು, ಇದನ್ನು ಒಮಿಕ್ರಾನ್‌ ವಿರುದ್ಧದ ಹೋರಾಟಕ್ಕಾಗಿ ಬೂಸ್ಟರ್‌ ಲಸಿಕೆಯಾಗಿ ನೀಡಬಹುದು ಎಂದು ಇನ್‌ಸಾಕೋಗ್‌ ಸಂಸ್ಥೆಯ ನಿರ್ದೇಶಕ ಅನುರಾಗ್‌ ಅಗರ್ವಾಲ್‌ ಹೇಳಿದ್ದಾರೆ. ಈ ಲಸಿಕೆಯನ್ನೂ ಕೊವಿಶೀಲ್ಡ್‌ ತಯಾರಕರಾದ ಸೀರಂ ಸಂಸ್ಥೆಯೇ ರೂಪಿಸಿದೆ. ಇದು ಪ್ರೊಟೀನ್‌ ಲಸಿಕೆಯಾಗಿದೆ.

ಆರೋಗ್ಯ ಮೂಲಭೂತ ಸೌಕರ್ಯ ಹೆಚ್ಚಿಸಿ
ಒಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಮೂಲಭೂತ ಸೌಕರ್ಯ ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೆ ಕರೆ ನೀಡಿದೆ. ಜಗತ್ತಿನ ಸುಮಾರು 90ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಒಮಿಕ್ರಾನ್‌ ಪತ್ತೆಯಾಗಿದ್ದು, ಇದರ ಹರಡುವಿಕೆ ಹೆಚ್ಚಾಗಬಹುದು. ಹೀಗಾಗಿ, ಸಾರ್ವಜನಿಕ ಆರೋಗ್ಯ ವಲಯದಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಬೇಕು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next