ಕೆ.ಆರ್.ಪೇಟೆ: ರೈತರ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ಬಂದಿದ್ದೇನೆ ಜೀವನ ಪೂರ್ತಿ ರೈತರೊಂದಿಗಿದ್ದು ಕೆಲಸ ಮಾಡಲು ಮಂಡ್ಯ ಜಿಲ್ಲೆಯ ಜನತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿಕೂಟ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಮನವಿ ಮಾಡಿದರು.
ತಾಲೂಕಿನ ಅಘಲಯ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು, ರೈತನ ಮಗನಾದ ನಮ್ಮ ತಂದೆಯವರು ಸಂತೇಬಾಚಹಳ್ಳಿ ಹೋಬಳಿಯ ಏತ ನೀರಾವರಿ ಯೋಜನೆಗೆ 212 ಕೋಟಿ ರೂ.ಗಳ ಅನುದಾನ ನೀಡಿದ್ದು, ಇದು ಟೆಂಡರ್ ಹಂತದಲ್ಲಿದೆ.
ಈಯೋಜನೆ ಜಾರಿಯಿಂದ ಸಂತೇಬಾಚಹಳ್ಳಿ ಹೋಬಳಿಯ ಎಲ್ಲಾ ಕೆರೆಗಳಿಗೂ ಹೇಮಾವತಿ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಜೊತೆಗೆ ಹೋಬಳಿಯ ರಸ್ತೆಗಳ ಅಭಿವೃದ್ದಿ, ವಿದ್ಯುತ್ ಯೋಜನೆಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಹೇಳಿದರು.
ಕುಮಾರಣ್ಣನೇ ನನಗೆ ಸ್ಟಾರ್ ಪ್ರಚಾರಕರು: ನನ್ನ ಪರವಾಗಿ ಚಿತ್ರರಂಗದ ಯಾವುದೇ ನಾಯಕ ನಟರು ಪ್ರಚಾರ ಮಾಡುತ್ತಿಲ್ಲ, ಚಿತ್ರರಂಗವನ್ನು ನನ್ನ ಪರ ಪ್ರಚಾರಕ್ಕೆ ಕರೆ ತಂದು ದುರುಪಯೋಗ ಮಾಡಿಕೊಳ್ಳಲ್ಲ, ನನಗೆ ನನ್ನ ತಂದೆಯವರಾದ ಮುಖ್ಯಮಂತ್ರಿ ಕುಮಾರಣ್ಣ ಅವರೇ ಸ್ಟಾರ್ ಪ್ರಚಾರಕರಾಗಿದ್ದಾರೆ. ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪ್ರಚಾರ ಮಾಡಿ ನನಗೆ ಗೆಲುವು ತಂದುಕೊಡಲಿದ್ದಾರೆ ಎಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರಸಭೆಯಲ್ಲಿ ಶಾಸಕರಾದ ನಾರಾಯಣಗೌಡ, ಸಿ.ಎನ್.ಬಾಲಕೃಷ್ಣ, ಜಿಪಂ ಉಪಾಧ್ಯಕ್ಷೆ ಗಾಯತ್ರಿರೇವಣ್ಣ, ತಾಪಂ ಉಪಾಧ್ಯಕ್ಷ ರವಿ, ಜಿಪಂ ಸದಸ್ಯರಾದ ದೇವರಾಜು, ಪ್ರೇಮ್‌ಕುಮಾರಿ, ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ತಾಪಂ ಸದಸ್ಯರಾದ ಜಾನಕೀರಾಂ,
ಮೋಹನ್, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಯುವ ಘಟಕದ ಅಧ್ಯಕ್ಷ ಕೆ.ಆರ್.ಹೇಮಂತಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಭಾರತೀಪುರ ಗ್ರಾಪಂ ಅಧ್ಯಕ್ಷ ಮಂಜುನಾಥ್, ಕಸಬಾ ಹೋಬಳಿ ಜೆಡಿಎಸ್ ಅಧ್ಯಕ್ಷ ವಸಂತಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಲೋಕೇಶ್ ಮತ್ತಿತತರರಿದ್ದರು.