ಪುಷ್ಕರ್: ಫಲಾನುಭವಿಗಳು ಎಲ್ಲಿಯವರೆಗೆ ತಮಗೆ ಮೀಸಲಾತಿ ಅಗತ್ಯವಿದೆ ಎಂದು ಭಾವಿಸುತ್ತಾರೋ, ಅಲ್ಲಿಯವರೆಗೂ ಮೀಸಲಾತಿ ಮುಂದು ವರಿಯಬೇಕು ಎಂದು ಆರೆಸ್ಸೆಸ್ ಹೇಳಿದೆ.
ರಾಜಸ್ಥಾನದ ಪುಷ್ಕರ್‌ನಲ್ಲಿ ನಡೆದ 3 ದಿನಗಳ ಸಮನ್ವಯ ಸಭೆಯ ಕೊನೇ ದಿನವಾದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ‘ಸಮಾಜದಲ್ಲಿ ಇನ್ನೂ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಮುಂದುವರಿದಿದೆ. ಹಾಗಾಗಿ ಮೀಸಲಾತಿಯ ಅಗತ್ಯವಿದೆ. ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿರುವ ಮೀಸಲಾತಿಗೆ ನಮ್ಮ ಸಂಪೂರ್ಣ ಬೆಂಬಲವಿದೆ.
ಫಲಾನುಭವಿಗಳು ಬಯಸುವವರೆಗೂ ಮೀಸಲಾತಿ ಮುಂದುವರಿಯಬೇಕು’ ಎಂದು ಹೇಳಿದ್ದಾರೆ. ಅಲ್ಲದೆ, ದೇವಾಲಯಗಳು, ರುದ್ರಭೂಮಿಗಳು ಹಾಗೂ ಜಲಾಶಯಗಳು ಯಾವುದೇ ನಿರ್ದಿಷ್ಟ ಜಾತಿಗೆ ಸೀಮಿತವಾಗಿರದೇ, ಅವುಗಳು ಎಲ್ಲರ ಬಳಕೆಗೂ ಮುಕ್ತವಾಗಬೇಕು ಎನ್ನುವುದು ಸಂಘದ ಅಭಿಪ್ರಾಯ ಎಂದೂ ಹೊಸಬಾಳೆ ನುಡಿದಿದ್ದಾರೆ. ಇತ್ತೀಚೆಗಷ್ಟೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಮೀಸಲಾತಿಯ ಫಲಾನುಭವಿಗಳು ಹಾಗೂ ಮೀಸಲಾತಿ ಪಡೆಯದೇ ಇರುವವರ ನಡುವೆ ಸಾಮರಸ್ಯದಿಂದ ಕೂಡಿದ ಚರ್ಚೆಯ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಎನ್‌ಆರ್‌ಸಿ ಲೋಪ ಸರಿಪಡಿಸಿ: ಈ ನಡುವೆ, ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಪಟ್ಟಿಯಲ್ಲಿ ಕೆಲವು ಲೋಪಗಳಿದ್ದು, ಅವುಗಳನ್ನು ಸರಿಪಡಿಸಿಯೇ ಸರ್ಕಾರ ಮುಂದಿನ ಹೆಜ್ಜೆಯಿಡಬೇಕು ಎಂದೂ ಆರೆಸ್ಸೆಸ್ ಹೇಳಿದೆ.
ಅಭಿಯಾನಕ್ಕೆ ಸಿದ್ಧತೆ: ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಜಲ ಸಂರಕ್ಷಣೆ, ಗಿಡ ನೆಡುವಿಕೆ ನಿಟ್ಟಿನಲ್ಲಿ ದೇಶಾದ್ಯಂತ ಜಾಗೃತಿ ಅಭಿಯಾನ ಕೈಗೊಳ್ಳುವುದಾಗಿ ಆರೆಸ್ಸೆಸ್ ಘೋಷಿದೆ.