Advertisement

Laptop ಕೊಟ್ಟರಷ್ಟೆ ಎಲ್‌ಎಂಎಸ್‌ ಸದುಪಯೋಗ

11:22 PM Dec 31, 2023 | Team Udayavani |

ಉಡುಪಿ: ಪದವಿ, ತಾಂತ್ರಿಕ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕಲಿಕೆಗೆ ಅನುಕೂಲವಾಗುವಂತೆ ಕರ್ನಾಟಕ ಕಲಿಕಾ ನಿರ್ವಹಣ ವ್ಯವಸ್ಥೆ(ಎಲ್‌ಎಂಎಸ್‌) ಜಾರಿಗೆ ತರಲಾಗಿದೆ. ಇದಕ್ಕೆ ಪೂರಕವಾಗಿ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಪಿಸಿ ವಿತರಿಸಲಾಗುತಿತ್ತು. ಮೂರು ವರ್ಷಗಳಿಂದ ಅದಾವುದನ್ನೂ ವಿತರಿಸದ ಕಾರಣ ಎಲ್‌ಎಂಎಸ್‌ ಮೂಲಕ ವಿದ್ಯಾರ್ಥಿಗಳ ಕಲಿಕೆ ಸ್ಥಗಿತಗೊಂಡಿದೆ.

Advertisement

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ 2020-2021ನೇ ಸಾಲಿನಲ್ಲಿ ಸುಮಾರು 35 ಕೋ.ರೂ. ವ್ಯಯಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಎಲ್‌ಎಂಎಸ್‌ ಅನುಷ್ಠಾನ ಮಾಡಲಾಗಿತ್ತು. ಇದಕ್ಕೂ ಪೂರ್ವದಲ್ಲಿ (2019-20)1,09,916 ವಿದ್ಯಾರ್ಥಿಗಳಿಗೆ ಹಾಗೂ ಎಲ್‌ಎಂಎಸ್‌ ಜಾರಿಗೆ ಬಂದ ವರ್ಷದಲ್ಲಿ (2020-21) 1,54,088 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌/ ಟ್ಯಾಬ್ಲೆಟ್‌ ಪಿಸಿ ವಿತರಿಸಲಾಗಿತ್ತು. 2021-22ನೇ ಸಾಲಿನಿಂದ ಈವರೆಗೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ / ಟ್ಯಾಬ್ಲೆಟ್‌ ಪಿಸಿ ನೀಡಿಲ್ಲ.

ತಾಂತ್ರಿಕ ಕೋರ್ಸ್‌ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮದೇ ಸ್ವಂತ ಲ್ಯಾಪ್‌ಟಾಪ್‌ ಹೊಂದಿರುವುದರಿಂದ ಎಲ್‌ಎಂಎಸ್‌ ಅನುಕೂಲ ಪಡೆಯುತ್ತಿದ್ದಾರೆ. ಆದರೆ, ಸರಕಾರಿ ಕಾಲೇಜಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್ಲೆಟ್‌ ಪಿಸಿ ಇರದ ಕಾರಣ ಎಲ್‌ಎಂಎಸ್‌ ಇದ್ದರೂ ಬಳಸಲಾಗದಂತಾಗಿದೆ.

ವಿಷಯಗಳ ರಾಶಿ
ಎಲ್‌ಎಂಎಸ್‌ನಲ್ಲಿ ಸರಕಾರಿ ಸ್ವಾಧೀನದ ಪ್ರತಿ ಸಾಮಾನ್ಯ ವಿಶ್ವವಿದ್ಯಾಲಯ, ತಾಂತ್ರಿಕ ಹಾಗೂ ಎಂಜಿನಿಯರಿಂಗ್‌ ವಿವಿಯಿಂದ ಪ್ರತಿ ಸೆಮಿಸ್ಟರ್‌ಗಳಲ್ಲಿ ವಿಷಯಗಳನ್ನು ಸಿದ್ಧಪಡಿಸಿ ಹಾಕಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ(2023-24) ವಿವಿಗಳಿಂದ ಬೆಸ ಸೆಮಿಸ್ಟರ್‌ಗಳ(1,3,5) 3,38,946 ವಿಷಯಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಸಮ ಸೆಮಿಸ್ಟರ್‌ಗಳ ವಿಷಯಗಳನ್ನು ಇನ್ನಷ್ಟೇ ಒದಗಿಸಬೇಕಿದೆ. 2022-23ನೇ ಸಾಲಿನಲ್ಲಿ ಬೆಸ ಸೆಮಿಸ್ಟರ್‌ನಲ್ಲಿ 2,77,569, ಸಮ ಸೆಮಿಸ್ಟರ್‌ನಲ್ಲಿ 3,10,769 ಹಾಗೂ 2021-22ರ ಬೆಸ ಸೆಮಿಸ್ಟರ್‌ನಲ್ಲಿ 1,96,478, ಸಮ ಸೆಮಿಸ್ಟರ್‌ನಲ್ಲಿ 2,22,860 ವಿಷಯಗಳನ್ನುಒದಗಿಸಲಾಗಿತ್ತು. ಸದ್ಯ ಎಲ್‌ಎಂಎಸ್‌ನಲ್ಲಿ ಪಿಪಿಟಿ, ಪಿಡಿಎಫ್, ವೀಡಿಯೋ, ಅಸ್ಸೆಸೆ¾ಂಟ್ಸ್‌ ಸಹಿತ ಸುಮಾರು 13 ಲಕ್ಷಕ್ಕೂ ಅಧಿಕ ಕಲಿಕಾ ಸಂಗತಿಗಳು ಲಭ್ಯವಿವೆ.

ಉಪಯೋಗ ಆಗುತ್ತಿಲ್ಲ
ಎಲ್‌ಎಂಎಸ್‌ ತುಂಬ ಚೆನ್ನಾಗಿದೆ. ವಿದ್ಯಾರ್ಥಿಗಳಿಗೆ ಅದರಿಂದ ಅನುಕೂಲವೂ ಇದೆ. ಆದರೆ, ಸರಕಾರ ಸೂಕ್ತ ಪರಿಕರ ನೀಡದ ಕಾರಣ ಪ್ರಯೋಜನವಾಗುತ್ತಿಲ್ಲ. ಎಲ್‌ಎಂಎಸ್‌ನಲ್ಲಿರುವ ಲಕ್ಷಾಂತರ ವಿಷಯಗಳನ್ನು ಅಭ್ಯಾಸ ಸಾಮಗ್ರಿಯಾಗಿ ಬಳಸಲು ಲ್ಯಾಪ್‌ಟಾಪ್‌ ಆಥವಾ ಟ್ಯಾಬ್ಲೆಟ್‌ ಪಿಸಿ ಬೇಕು. ಸರಕಾರಿ ಕಾಲೇಜಿನ ಕಂಪ್ಯೂಟರ್‌ಗಳಲ್ಲಿ ಎಲ್ಲ ವಿದ್ಯಾರ್ಥಿಗಳಲ್ಲಿ ಇದು ಲಭ್ಯವಿಲ್ಲ. ಹೀಗಾಗಿ ವಿಷಯಗಳ ರಾಶಿ ಇದ್ದರೂ ಬಳಸಲಾಗ ಸ್ಥಿತಿಯಲ್ಲಿದ್ದಾರೆ.

Advertisement

ಲ್ಯಾಪ್‌ಟಾಪ್‌ಗೆ ಬೇಡಿಕೆ
ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಈ ಹಿಂದೆ ಲ್ಯಾಪ್‌ಟಾಪ್‌/ ಟ್ಯಾಬ್ಲೆಟ್‌ ಪಿಸಿ ನೀಡಲಾಗಿದೆ. ಮೂರು ವರ್ಷಗಳಿಂದ ಉನ್ನತ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುತ್ತಿದೆ. ಆದರೆ ಲ್ಯಾಪ್‌ಟಾಪ್‌ ವಿತರಣೆಯಾಗಿಲ್ಲ. ಕೊರೊನಾ ಸಂದರ್ಭದಲ್ಲಿ ಲ್ಯಾಪ್‌ಟಾಪ್‌ ಇಲ್ಲದೇ ಸಾಕಷ್ಟು ವಿದ್ಯಾರ್ಥಿಗಳು ಸಂಕಷ್ಟ ಎದುರಿಸಿದ್ದರು. ಸರಕಾರ ಈ ವರ್ಷವಾದರೂ ಲ್ಯಾಪ್‌ಟಾಪ್‌ ನೀಡಬೇಕು. ಇಲ್ಲವಾದರೆ ಎಲ್‌ಎಂಎಸ್‌ ಕೇವಲ ಒಂದು ವರ್ಗದ ವಿದ್ಯಾರ್ಥಿಗಳಿಗೆ ಸೀಮಿತವಾಗಲಿದೆ ಎನ್ನುತ್ತಾರೆ ಕಾಲೇಜೊಂದರ ಪ್ರಾಂಶುಪಾಲರು.

ಏನಿದು ಎಲ್‌ಎಂಎಸ್‌?
ಡಿಜಿಟಲ್‌ ಆಧಾರಿತ ಕಲಿಕೆಗೆ ಪೂರಕವಾಗಿ ಸಿದ್ಧಪಡಿಸಿದ ವ್ಯವಸ್ಥೆಯೇ ಎಲ್‌ಎಂಎಸ್‌. ಇದರಲ್ಲಿ ರಾಜ್ಯದ ಶ್ರೇಷ್ಠ ಬೋಧಕರ ಸರಳ ಬೋಧನ ವಿಧಾನ, ವಿವಿಧ ವಿಷಯದ ಸೆಮಿಸ್ಟರ್‌ವಾರು ಕಲಿಕಾ ಮಾಹಿತಿ, ವಿಷಯ ಕಲಿಕೆಯ ಸಂವಹನ, ವೀಡಿಯೋಗಳು, ಪಿಪಿಟಿ, ಅಧ್ಯಯನ ಸಾಮಗ್ರಿ, ಅಭ್ಯಾಸ ಪರೀಕ್ಷೆ/ ಬಹುಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಇದನ್ನು ಸುಲಭವಾಗಿ ಅಧ್ಯಯನ ಮಾಡಬಹುದು.

ಕಾಲೇಜು, ವಿದ್ಯಾರ್ಥಿಗಳ ಅಂಕಿಅಂಶ
ರಾಜ್ಯದ 531 ಸರಕಾರಿ ಕಾಲೇಜುಗಳಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡದ 37 ಸೇರಿ 430 ಪ್ರಥಮ ದರ್ಜೆ ಕಾಲೇಜು, 14 ಎಂಜಿನಿಯರಿಂಗ್‌, 87 ಪಾಲಿಟೆಕ್ನಿಕ್‌ಗಳಿವೆ. ಉಭಯ ಜಿಲ್ಲೆಯ 30 ಸಾವಿರ ವಿದ್ಯಾರ್ಥಿಗಳು ಸೇರಿ 3.50 ಲಕ್ಷ ಪದವಿ, 24 ಸಾವಿರ ಎಂಜಿನಿಯರಿಂಗ್‌ ಹಾಗೂ 87 ಸಾವಿರ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ರಾಜ್ಯದಲ್ಲಿದ್ದಾರೆ. 9 ಸಾವಿರಕ್ಕೂ ಅಧಿಕ ಖಾಯಂ ಹಾಗೂ 16 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರಿದ್ದಾರೆ. ಮಂಗಳೂರು ಸಹಿತ 14 ವಿಶ್ವವಿದ್ಯಾಲಯಗಳಿವೆ.

ಪ್ರಸಕ್ತ ಸಾಲಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಎಸ್‌ಇಪಿ/ಟಿಎಸ್‌ಪಿ ಯೋಜನೆಯಡಿ ಸಂಶೋಧನಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗುವುದು. ಪದವಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಲ್ಯಾಪ್‌ಟಾಪ್‌ ನೀಡುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು.
-ಡಾ| ಎಂ.ಸಿ. ಸುಧಾಕರ್‌
ಉನ್ನತ ಶಿಕ್ಷಣ ಸಚಿವ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next