Advertisement

ಚೀನ ಮೇಲೆ ಹದ್ದಿನ ಕಣ್ಣು ; ಲಡಾಖ್‌ನಲ್ಲಿ ರಾತ್ರಿಯಿಡೀ ಗರ್ಜಿಸುತ್ತಿರುವ ವಾಯುಪಡೆ

03:07 AM Jul 08, 2020 | Hari Prasad |

ಲಡಾಖ್‌: ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ ಸನಿಹದಿಂದ ಚೀನದ ಸೇನೆ ಹಿಂದೆಗೆತ ಆರಂಭಿಸಿದೆಯಾದರೂ ಭಾರತೀಯ ವಾಯುಪಡೆ ಪೂರ್ಣ ಸನ್ನದ್ಧ ಸ್ಥಿತಿಯಲ್ಲಿಯೇ ಇದೆ.

Advertisement

ಜೂನ್‌ 15ರ ರಾತ್ರಿ ಚೀನದ ಸೈನಿಕರು ಹಿಂದೆ ಸರಿಯುವ ನಾಟಕ ವಾಡಿ ಬಳಿಕ ಘರ್ಷಣೆಗೆ ಇಳಿದಿದ್ದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಎಲ್ಲ ಬೆಳವಣಿಗೆಗಳ ಮೇಲೆ ಹದ್ದಿನಗಣ್ಣು ಇರಿಸಿದೆ.

ಕುಳಿರ್ಗಾಳಿ, ದಟ್ಟ ಹಿಮವನ್ನೂ ಲೆಕ್ಕಿಸದೆ ಮುಂಚೂಣಿ ನೆಲೆಗಳಲ್ಲಿ ಮಿಗ್‌-29 ಯುದ್ಧ ವಿಮಾನ, ಅಪಾಚೆ ಅಟ್ಯಾಕ್‌ ಹೆಲಿಕಾಪ್ಟರ್‌ಗಳನ್ನೇರಿ ಭಾರತೀಯ ಯೋಧರು ಸೋಮವಾರ ರಾತ್ರಿಯೂ ಗಸ್ತು ನಡೆಸಿದ್ದಾರೆ.

ಗಾಲ್ವಾನ್‌ ಕಣಿವೆಯಿಂದ ಚೀನ 2 ಕಿ.ಮೀ.ಗಳಷ್ಟು ಹಿಂದೆ ಸರಿದಿದೆಯಾದರೂ ಭಾರತವು ಚೀನವನ್ನು ಏಕಾಏಕಿ ನಂಬುತ್ತಿಲ್ಲ. ಭಾರತೀಯ ಸೇನೆ ಎಂದಿನ ಎಚ್ಚರದಲ್ಲಿಯೇ ಕಣ್ಗಾವಲು ಇರಿಸಿದ್ದು, ಹಗಲು ಮಾತ್ರವಲ್ಲದೆ ಈಗ ರಾತ್ರಿಯೂ ಐಎಎಫ್ ವಿಮಾನಗಳು ಗಸ್ತು ಆರಂಭಿಸಿವೆ.

ಯುದ್ಧ ವಿಮಾನಗಳ ರಾತ್ರಿ ಕಾರ್ಯಾಚರಣೆ ಕಠಿನವಾದದ್ದು. ಆದರೆ ಇದರಲ್ಲಿ ಐಎಎಫ್ ಪಡೆಗಳು ಪೂರ್ಣವಾಗಿ ಪಳಗಿವೆ. ಆಧುನಿಕ ತಂತ್ರಜ್ಞಾನ, ಉತ್ಸಾಹ ಭರಿತ ಸಿಬಂದಿ ಯಾವುದೇ ಪರಿಸರದಲ್ಲೂ, ಎಂಥದೇ ಸಮಯದಲ್ಲೂ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿದ್ದಾರೆ ಎಂದು ಗ್ರೂಪ್‌ ಕ್ಯಾಪ್ಟನ್‌ ಎ. ರಾಠಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಚಟುವಟಿಕೆ ಚುರುಕು
ಪ್ರಧಾನಿ ಮೋದಿ ಅವರ ಲಡಾಖ್‌ ಭೇಟಿಯ ಅನಂತರ ಎಲ್‌ಎಸಿಯಲ್ಲಿ ಸೇನಾ ಚಟುವಟಿಕೆಗಳು ಇನ್ನಷ್ಟು ಚುರುಕು ಗೊಂಡಿವೆ. ಐಎಎಫ್ ಸಿ-17 ಗ್ಲೋಬ್‌ ಮಾಸ್ಟರ್‌ 3 ಸಾರಿಗೆ ವಿಮಾನಗಳು, ಸಿ-130 ಜೆ ಸೂಪರ್‌ ಹಕ್ಯುìಲಸ್‌ ವಿಮಾನಗಳು ಭಾರೀ ತೂಕದ ಮಿಲಿಟರಿ ಉಪ ಕರಣಗಳನ್ನು, ಶಸ್ತ್ರಾಸ್ತ್ರಗಳನ್ನು ಮುಂಚೂಣಿಯ ನೆಲೆಗಳಿಗೆ ಒಯ್ದಿವೆ ಎಂದು ಪಿಟಿಐ ವರದಿ ಮಾಡಿದೆ.

ಯೋಧರ ರವಾನೆ
ಸುಖೋಯ್‌ 30 ಎಂಕೆಐ, ಜಾಗ್ವಾರ್‌, ಮಿರಾಜ್‌ 2000 ವಿಮಾನಗಳು ಲೇಹ್‌, ಶ್ರೀನಗರ ಸಹಿತ ಹಲವು ಪ್ರಮುಖ ವಾಯುನೆಲೆಗಳಲ್ಲಿ ಬೀಡುಬಿಟ್ಟಿವೆ. ಅಪಾಚೆ ಅಟ್ಯಾಕ್‌ ಹೆಲಿಕಾಪ್ಟರ್‌ಗಳು ಮತ್ತು ಚಿನೂಕ್‌ ಹೆವಿಲಿಫ್ಟ್ ಹೆಲಿ ಕಾಪ್ಟರ್‌ಗಳು ಮತ್ತಷ್ಟು ಯೋಧರನ್ನು ಮುಂಚೂಣಿಯ ನೆಲೆಗಳಿಗೆ ಸುರಕ್ಷಿತವಾಗಿ ತಲುಪಿಸಿವೆ.

ಹಾರಾಟ ಆರಂಭಿಸಿದ ಅಪಾಚೆ
ಲಡಾಖ್‌ನ ಮುಂಚೂಣಿ ವಾಯುನೆಲೆಗಳಲ್ಲಿ ಇದೇ ಮೊದಲ ಬಾರಿಗೆ ಬೋಯಿಂಗ್‌ ಅಪಾಚೆ ಎಎಚ್‌- 64 ಇ ಹೆಲಿಕಾಪ್ಟರ್‌ಗಳು ಗಸ್ತು ಆರಂಭಿಸಿವೆ. 30 ಎಂಎಂ ಚೈನ್‌ಗನ್‌ ಹೊಂದಿರುವ ಅಪಾಚೆ ಹೆಲಿಕಾಪ್ಟರ್‌ ಎಐಎಂ-92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್‌ ಮತ್ತು ಸ್ಟ್ರೈಕ್‌ ಕ್ಷಿಪಣಿಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. ಯಾವುದೇ ಋತು, ಎಂಥ ದುರ್ಗಮ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸಬಲ್ಲ ಸಮರ್ಥ ಅಪಾಚೆ, ಯುದ್ಧಭೂಮಿಯ ಚಿತ್ರಗಳನ್ನು ಅತ್ಯಂತ ಶೀಘ್ರದಲ್ಲಿ ನಿಯಂತ್ರಕ ಕೊಠಡಿಗಳಿಗೆ ಕಳುಹಿಸುವಷ್ಟು ಚಾಣಾಕ್ಷ.

ಭಾರತಕ್ಕೆ ನಮ್ಮ ಬೆಂಬಲ ಸ್ಪಷ್ಟ: ಅಮೆರಿಕ
ಚೀನದ ಜತೆಗಿನ ಗಡಿ ಬಿಕ್ಕಟ್ಟಿನಲ್ಲಿ ಅಮೆರಿಕವು ಭಾರತದೊಂದಿಗೆ ಬಲಿಷ್ಠವಾಗಿ ನಿಲ್ಲಲಿದೆ ಎಂದು ವೈಟ್‌ಹೌಸ್‌ ಸ್ಪಷ್ಟಪಡಿಸಿದೆ. ಅಮೆರಿಕದ ನೌಕಾಪಡೆಯ ಪರಮಾಣು ಶಸ್ತ್ರಸಜ್ಜಿತ ಸಮರ ವಿಮಾನ ವಾಹಕಗಳು, ಯುದ್ಧವಿಮಾನಗಳು ದಕ್ಷಿಣ ಚೀನ ಸಮುದ್ರವನ್ನು ತಲುಪುತ್ತಿದ್ದಂತೆ ಅಮೆರಿಕ ಹೀಗೆ ಘೋಷಿಸಿದ್ದು, ಚೀನಕ್ಕೆ ಮತ್ತಷ್ಟು ಆತಂಕ ಎದುರಾಗಿದೆ. ನಮ್ಮ ಸಂದೇಶ ಸ್ಪಷ್ಟ. ಚೀನದ ಜತೆಗಿನ ಬಿಕ್ಕಟ್ಟಿನಲ್ಲಿ ಭಾರತಕ್ಕೆ ನಮ್ಮ ಸೈನ್ಯ ಹೆಗಲು ಕೊಡಲಿದೆ ಎಂದು ವೈಟ್‌ ಹೌಸ್‌ ಮುಖ್ಯಸ್ಥ ಮಾರ್ಕ್‌ ಮೀಡೋಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next