ಕಳೆದೆರಡು ದಶಕಗಳ ಹಿಂದೆ ಟೆಕ್ನಾಲಜಿ ಇಷ್ಟು ಮುಂದುವರಿದಿರಲಿಲ್ಲ. ಟಿ.ವಿ. ಕೂಡಾ ಎಲ್ಲರ ಮನೆಯಲ್ಲೂ ಇರುತ್ತಿರಲಿಲ್ಲ. ಟಿ.ವಿ. ಇಲ್ಲವೆಂದಮೇಲೆ ಅಜ್ಜಿಯಂದಿರು ಧಾರಾವಾಹಿಯಲ್ಲಿ ಮುಳುಗುವ ಪ್ರಶ್ನೆಯೇ ಇರಲಿಲ್ಲ ನೋಡಿ. ಸಂಜೆ ಆದ ಕೂಡಲೇ, “ಕೈ-ಕಾಲು ಮುಖ ತೊಳ್ಕೊಂಡು ಬನ್ರೊ, ಕತೆ ಹೇಳ್ತೀನಿ’ ಅಂತ ಕೂಗಿ ಕರೆಯುತ್ತಿದ್ದಳು ಅಜ್ಜಿ.
ದಸರಾ ರಜೆಯಲ್ಲಿ ಇಬ್ಬರು ಮಕ್ಕಳನ್ನು ಅಜ್ಜಿ ಮನೆಗೆ ಕರೆದುಕೊಂಡು ಹೋಗಿದ್ದೆ. ಅಜ್ಜಿಗೋ, ಮೊಮ್ಮಕ್ಕಳು ಬಂದಿದ್ದಾರೆಂದು ಸಂಭ್ರಮವೋ ಸಂಭ್ರಮ. ಕೇಳಿದ ತಿಂಡಿ ಮಾಡಿ ಬಡಿಸುವುದೇನು, ಅವರ ಹಿಂದೆ ಮುಂದೆ ಸುತ್ತುವುದೇನು…ಆಕೆಯಂತೂ, ಹತ್ತು ವರ್ಷ ಸಣ್ಣವಳಾದಂತೆ ಕಾಣಿಸುತ್ತಿದ್ದಳು. ಸಂಜೆ, ಮೊಮ್ಮಕ್ಕಳನ್ನು ಕೂರಿಸಿಕೊಂಡು ಕಥೆ ಹೇಳುವ ಆಸೆಯಾಗಿ, “ಬನ್ರೊ, ಕಿನ್ನರಿಯ ಕತೆ ಹೇಳ್ತೀನಿ’ ಅಂದ್ರೆ, ಮಕ್ಕಳು ಕೇಳಲು ತಯಾರೇ ಇಲ್ಲ. ಇಬ್ಬರೂ ಕೈಯಲ್ಲಿ ಮೊಬೈಲು ಹಿಡಿದು ಕುಳಿತಿದ್ದಾರೆ. ನಾವು ಗೇಮ್ಸ್ ಆಡಬೇಕು ಅಂತ ಅಜ್ಜಿಯ ಮಾತನ್ನು ಅವರು ಕಡೆಗಣಿಸಿದಾಗ, ಆಕೆ ಪೆಚ್ಚಾದಳು. ಅಯ್ಯೋ, ಕತೆ ಅಂದರೂ ಮಕ್ಕಳಿಗೆ ಕುತೂಹಲ ಮೂಡದಷ್ಟು ಕಾಲ ಬದಲಾಯಿತೇ ಅಂತ ಬೇಸರವಾಯ್ತು.
ನಮ್ಮ ಕಾಲದಲ್ಲಿ, ಅಂದರೆ ಕಳೆದೆರಡು ದಶಕಗಳ ಹಿಂದೆ ಟೆಕ್ನಾಲಜಿ ಇಷ್ಟು ಮುಂದುವರಿದಿರಲಿಲ್ಲ. ಟಿ.ವಿ. ಕೂಡಾ ಎಲ್ಲರ ಮನೆಯಲ್ಲೂ ಇರುತ್ತಿರಲಿಲ್ಲ. ಟಿ.ವಿ. ಇಲ್ಲವೆಂದಮೇಲೆ ಅಜ್ಜಿಯಂದಿರು ಧಾರಾವಾಹಿಯಲ್ಲಿ ಮುಳುಗುವ ಪ್ರಶ್ನೆಯೇ ಇರಲಿಲ್ಲ ನೋಡಿ. ಸಂಜೆ ಆದ ಕೂಡಲೇ, “ಕೈ-ಕಾಲು ಮುಖ ತೊಳ್ಕೊಂಡು ಬನ್ರೊà, ಕತೆ ಹೇಳ್ತೀನಿ’ ಅಂತ ಕೂಗಿ ಕರೆಯುತ್ತಿದ್ದಳು ಅಜ್ಜಿ. ಕತ್ತಲಾದರೂ ಎಲ್ಲೆಲ್ಲೋ ಆಡಿಕೊಂಡಿರುತ್ತಿದ್ದ ನಾವು ಓಡೋಡಿ ಬಂದು, ಅವಳ ಮುಂದೆ ಕೂರುತ್ತಿದ್ದೆವು. ಆಗ ಅಲ್ಲೊಂದು ಕಲ್ಪನಾ ಪ್ರಪಂಚವೇ ಸೃಷ್ಟಿಯಾಗುತ್ತಿತ್ತು. ಆ ಕಥೆಗಳ ಪ್ರಭಾವವೇ ನಮಗೆ ಪುಸ್ತಕಗಳನ್ನು ಓದುವ ಗೀಳು ಹಿಡಿಸಿತು.
ಪರೀಕ್ಷೆ ಮುಗಿಸಿ ರಜೆ ಬಂದ ನಂತರ, ಕಥೆ ಪುಸ್ತಕಗಳಲ್ಲಿ ಮುಳುಗಿ ಹೋಗುತ್ತಿದ್ದೆವು. ಚಂದಮಾಮ, ಬಾಲಮಿತ್ರ, ಬೊಂಬೆಮನೆ, ಅಮರ ಚಿತ್ರಕಥೆ, ದಿನಕ್ಕೊಂದು ಕಥೆ, ಬಾಲಮಂಗಳ, ಗಿಳಿವಿಂಡು, ಅಕರ್‌ಬೀರಬಲ್, ತೆನಾಲಿ ರಾಮ, ಪಂಚತಂತ್ರ …..ಹೀಗೆ ನಮ್ಮ ಬಾಲ್ಯವನ್ನು ಆವರಿಸಿದ ಕಥಾಪ್ರಪಂಚ ಬಹಳ ದೊಡ್ಡದಿತ್ತು. ಚಂದಮಾಮ, ಬಾಲಮಿತ್ರದಲ್ಲಿ ಬರುತ್ತಿದ್ದ ಚೆಂದದ ರಾಜಕುಮಾರಿ, ಅವಳನ್ನು ಹೊತ್ತೂಯ್ಯವ ರಾಕ್ಷಸ, ಆಗ ಅವಳನ್ನು ಕಾಪಾಡಲು ಕುದುರೆಯೇರಿ ಬರುವ ವೀರ ರಾಜಕುಮಾರ… ಇವೆಲ್ಲಾ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆದರೆ ಈಗಿನ ಮಕ್ಕಳ ಕೈಯಲ್ಲಿ ಪುಸ್ತಕಗಳ ಬದಲು ಮೊಬೈಲ್ ಬಂದು ಕೂತಿದೆ. ಕತೆ ಕೇಳಬೇಕಾದ ಸಮಯವನ್ನು ಟಿ.ವಿ. ಆಕ್ರಮಿಸಿಕೊಂಡಿದೆ.
ಟಿ.ವಿ.- ಮೊಬೈಲ್ ಪರದೆಯಲ್ಲಿ ಮುಳುಗುವುದು ಕೇವಲ ಕಣ್ಣಿಗಷ್ಟೇ ಅಲ್ಲ, ಸೃಜನಶೀಲತೆಗೂ ಪೆಟ್ಟು ಕೊಡುತ್ತಿದೆ. ತಂತ್ರಜ್ಞಾನದ ಕೈಗೊಂಬೆಗಳಾಗಿರುವ ಇಂದಿನ ಮಕ್ಕಳ ಓದು, ಪಠ್ಯ ಪುಸ್ತಕದ ಆಚೆ ವಿಸ್ತರಿಸಿಕೊಂಡಿಲ್ಲ. ಪುಸ್ತಕಗಳಲ್ಲಿರುವುದೇ ಕಾರ್ಟೂನ್ ರೂಪದಲ್ಲಿ ಸಿಗುತ್ತದಾದರೂ, ಓದುತ್ತಾ ಹೋದಂತೆ ಪುಸ್ತಕಗಳು ಹುಟ್ಟಿಸುವ ಕುತೂಹಲ, ಕಲ್ಪನಾ ಶಕ್ತಿ, ಸೃಜನಶೀಲತೆಗೆ ಟಿವಿ ಕಾರ್ಟೂನುಗಳು ಸಾಟಿಯಲ್ಲ. ಪಠ್ಯಪುಸ್ತಕಗಳಿಗಿಂತ ಭಿನ್ನವಾಗಿರುವ ಕಥೆ ಪುಸ್ತಕಗಳು ಮಕ್ಕಳಿಗೆ ಓದಿನ ರುಚಿ ಹತ್ತಿಸಲು ಸಹಾಯಕಾರಿ. ಮುಂದೇನಾಗುತ್ತದೆ ಎಂದು ಕುತೂಹಲ ಹುಟ್ಟಿಸುವ ಕತೆಗಳು ಮಕ್ಕಳ ಕಲ್ಪನಾಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಓದಿನ ಮೇಲಿರುವ ಏಕಾಗ್ರತೆಯನ್ನು ವೃದ್ಧಿಸುತ್ತವೆ.
ಕಥೆ ಪುಸ್ತಕಗಳಿಂದ ಸಿಗುವ ನೀತಿಯುಕ್ತ ಸಾರಾಂಶಗಳು, ಇತಿಹಾಸದ ಚರಿತ್ರೆಗಳು, ವೀರ ಶೂರರ ಜೀವನಗಾಥೆಗಳು, ಸತ್ಯ -ಮಿಥ್ಯದ ಅನಾವರಣ, ಸೋಲು-ಗೆಲುವುಗಳ ನಿಜವಾದ ಅರ್ಥ, ಪ್ರೀತಿ-ವಿಶ್ವಾಸಗಳ ಅನುಬಂಧ, ಶ್ರದ್ಧಾ-ಭಕ್ತಿಯ ಮಹತ್ವ, ಧೃಡಮನಸ್ಸು ಮತ್ತು ಆತ್ಮವಿಶ್ವಾಸದ ಫಲ, ಜೀವನ ಸಾರ ಯಾವ ಪಠ್ಯಪುಸ್ತಕದಿಂದಲೂ ಸಿಗುವುದಿಲ್ಲ. “ಏನೇ, ಮಕ್ಕಳ ಕೈಗೆ ಮೊಬೈಲ್ ಕೊಟ್ಟೂ ಕೊಟ್ಟು ಹಾಳು ಮಾಡಿಟ್ಟಿದ್ದೀಯ…’ ಅಂತ ಅಮ್ಮ ನನ್ನ ಮೇಲೆ ಮುನಿಸಿಕೊಂಡಾಗಲೇ, ನನಗೆ ತಪ್ಪಿನ ಅರಿವಾಗಿದ್ದು. ಹಿಂದೆಲ್ಲಾ ಕತೆ ಹೇಳಿ, ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದ ಅಮ್ಮಂದಿರು, ಈಗ ಮೊಬೈಲ್ ತೋರಿಸಿ ಊಟ ಮಾಡಿಸುತ್ತಾರೆ.
ಆದರೆ, ಅದೇ ಮೊಬೈಲ್ ಎಂಬ ಮಾಯಾಜಾಲದೊಳಗೆ ಮಕ್ಕಳು ಹೇಗೆ ಶಾಶ್ವತವಾಗಿ ಬಂಧಿಗಳಾಗುತ್ತಾರೆ ಅಂತ ತಿಳಿಯುವುದೇ ಇಲ್ಲ. ಹಾಗಾಗಿ, ಈ ದೀಪಾವಳಿಗೆ ಮಕ್ಕಳಿಗೆ ಪಟಾಕಿ ಬದಲು ಒಂದಷ್ಟು ಪುಸ್ತಕಗಳನ್ನು ಕೊಡಿಸಬೇಕೆಂದಿದ್ದೇನೆ. ಹಬ್ಬದೊಂದಿಗೆ ಮಿಳಿತವಾದ ಪುರಾಣ ಕತೆಗಳನ್ನು ಹೇಳಿ, ಮಕ್ಕಳಿಗೆ ಕತೆ ಕೇಳುವ ಕುತೂಹಲ ಮೂಡಿಸಬೇಕೆಂದಿದ್ದೇನೆ. ಕತೆಗಳ ಕಲ್ಪನಾ ಲೋಕದಲ್ಲಿ ಮಕ್ಕಳು ಕಳೆದುಹೋಗಲಿ. ಜೊತೆಗೆ, ಮರೆತೇ ಹೋಗಿರುವ ಓದುವ ಹವ್ಯಾಸ ನನ್ನಲ್ಲೂ ಚಿಗುರಿಕೊಳ್ಳಲಿ…
* ಸುಮಾ ಸತೀಶ್