ಹೊಸದಿಲ್ಲಿ: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕ ಸಹಿತ ದೇಶದ ಹಲವು ರಾಜ್ಯಗಳ ಎಟಿಎಂ ಕೇಂದ್ರಗಳಲ್ಲಿ ‘ನಗದು ಇಲ್ಲ’ (ನೋ ಕ್ಯಾಶ್) ಎಂಬ ಫಲಕಗಳು ಕಾಣಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಇದೊಂದು ತಾತ್ಕಾಲಿಕ ಸಮಸ್ಯೆ. ಮೂರು ದಿನಗಳಲ್ಲಿ ಪರಿಹಾರವಾಗಲಿದೆ ಎಂದಿದ್ದಾರೆ. ಕೇಂದ್ರ ಆರ್ಥಿಕ ವ್ಯವಹಾರಗಳ ಖಾತೆ ಕಾರ್ಯದರ್ಶಿ ಎಸ್.ಸಿ. ಗರ್ಗ್ ಕೂಡ ಪ್ರತಿಕ್ರಿಯಿಸಿದ್ದು, 500 ರೂ. ಮುಖಬೆಲೆ ನೋಟುಗಳನ್ನು ಮುದ್ರಿಸುವ ಕಾರ್ಯವನ್ನು ಈಗಿನದ್ದಕ್ಕಿಂತ ಐದು ಪಟ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ನಗದು ಕೊರತೆ
ಕೆಲವು ವಾರಗಳ ಹಿಂದೆ ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ಎಟಿಎಂಗಳಿಗೆ ನಗದು ಪೂರೈಕೆಯಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಪರಿಸ್ಥಿತಿ ಸರಿಪಡಿಸಲಾಗಿತ್ತು. ಸೋಮವಾರ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಬಿಹಾರಗಳಲ್ಲೂ ನಗದು ಪೂರೈಕೆಗೆ ಸಮಸ್ಯೆಯಾಗಿದೆ. ಇದು ಸುದ್ದಿಯಾಗುತ್ತಿದ್ದಂತೆ, ಪ್ರತಿಕ್ರಿಯಿಸಿರುವ ಸಚಿವ ಜೇಟ್ಲಿ ‘ಕೇಂದ್ರಕ್ಕೆ ಪರಿಸ್ಥಿತಿಯ ಅರಿವಿದೆ. ಇನ್ನು ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 3 ತಿಂಗಳಿಂದ ನಗದಿಗೆ ಹೆಚ್ಚಿನ ಬೇಡಿಕೆ ಇತ್ತು. ಈ ತಿಂಗಳ ಮೊದಲ 13 ದಿನಗಳಲ್ಲಿ ದೇಶಾದ್ಯಂತ 45 ಸಾವಿರ ಕೋ. ರೂ. ಮೌಲ್ಯದಷ್ಟು ಹೆಚ್ಚಿನ ಪ್ರಮಾಣದ ನಗದು ಪೂರೈಸಿದ್ದೇವೆ. ಆಂಧ್ರ, ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಬಿಹಾರಗಳಿಂದ ನಗದಿಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಪರಿಸ್ಥಿತಿ ಹೀಗಾಗಿದೆ’ ಎಂದಿದ್ದಾರೆ.ಸರಕಾರದ ಬಳಿ ಸಾಕಷ್ಟು ನಗದು ಇದೆ. 500 ರೂ., 200 ರೂ., 100 ರೂ. ನೋಟುಗಳ ಸಂಗ್ರಹವೂ ಸಾಕಷ್ಟಿದೆ. ಹೀಗಾಗಿ ಜನ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ಕೇಂದ್ರ ಹಣಕಾಸು ಸಚಿವಾಲಯ ಕೂಡ ಎಟಿಎಂಗಳಲ್ಲಿ ನಗದು ಕೊರತೆ ಇದೆ ಎಂಬ ಅಂಶವನ್ನು ಒಪ್ಪಿಕೊಂಡಿದೆ.
ಹೆಚ್ಚಲಿದೆ ಐದು ಪಟ್ಟು: ನೋಟು ಕೊರತೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 500 ರೂ. ನೋಟುಗಳ ಮುದ್ರಣವನ್ನು ಪ್ರತಿ ದಿನ ಐದು ಪಟ್ಟು ಹೆಚ್ಚಿಸಲಿದೆ. ಮುಂದಿನ ಕೆಲವು ದಿನಗಳಲ್ಲಿ ದಿನಕ್ಕೆ 2,500 ಕೋಟಿ 500 ರೂ. ನೋಟುಗಳನ್ನು ಪೂರೈಸಲಿದ್ದೇವೆ ಎಂದು ಆರ್ಥಿಕ ಕಾರ್ಯದರ್ಶಿ ಎಸ್.ಸಿ. ಗರ್ಗ್ ಹೇಳಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಅದರ ಸಂಖ್ಯೆ 70 ರಿಂದ 75 ಸಾವಿರ ಕೋಟಿಗೆ ಏರಲಿದೆ ಎಂದಿದ್ದಾರೆ.
ಸಮಸ್ಯೆ ಎದುರಿಸಲು ಸಮಿತಿ: ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶಿವಪ್ರತಾಪ್ ಶುಕ್ಲಾ ಮಾತನಾಡಿ, ಯಾವ ರಾಜ್ಯಗಳಲ್ಲಿ ನಗದು ಪೂರೈಕೆ ಕೊರತೆ ಇದೆಯೋ ಅಲ್ಲಿನ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ. ಮುಂದಿನ 2-3 ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ. ಜತೆಗೆ RBI ಕೂಡ ನಗದು ವರ್ಗಾವಣೆ ಮೇಲುಸ್ತುವಾರಿಗಾಗಿ ಸಮಿತಿ ರಚಿಸಿದೆ ಎಂದಿದ್ದಾರೆ.
ಹಲವು ರಾಜ್ಯಗಳ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ ಎಂಬ ವರದಿ ನೋಟು ಅಪಮೌಲ್ಯದ ದಿನಗಳನ್ನು ಮತ್ತೆ ನೆನಪಿಸುತ್ತಿದೆ.
– ಮಮತಾ ಬ್ಯಾನರ್ಜಿ, ಪ.ಬಂ. ಸಿಎಂ
ನಗದು ಕೊರತೆಯಿಲ್ಲ.
ದೇಶದ ಹಲವು ಭಾಗಗಳಲ್ಲಿ ಬೆಳೆ ಕೊಯ್ಲು ಆರಂಭವಾಗಿರುವುದರಿಂದ ನಗದು ಬೇಡಿಕೆ ಹೆಚ್ಚಿ ಸಮಸ್ಯೆ ಆಗಿದೆ.
– ರಜನೀಶ್ ಕುಮಾರ್, ಎಸ್‌ಬಿಐ ಅಧ್ಯಕ್ಷ